ಕರ್ನಾಟಕ

karnataka

ಉತ್ತರಕನ್ನಡ: 1 ಸಾವಿರ ಲಂಚ ಪಡೆದ ಅಧಿಕಾರಿಗೆ 1 ವರ್ಷ ಜೈಲು ಶಿಕ್ಷೆ

By ETV Bharat Karnataka Team

Published : Sep 7, 2023, 2:00 PM IST

ಉತ್ತರಕನ್ನಡದಲ್ಲಿ ಅಧಿಕಾರಿಯೊಬ್ಬ ಲಂಚ ಪಡೆದ ಆರೋಪ ಸಾಬೀತಾಗಿದ್ದು, ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಲಂಚ
ಲಂಚ

ಕಾರವಾರ(ಉತ್ತರಕನ್ನಡ):ತಂದೆಯ ಹೆಸರಿನಲ್ಲಿದ್ದ ಜಮೀನನ್ನು ವಾರಸಾ ಮಾಡಲು ಒಂದು ಸಾವಿರ ಲಂಚ ಪಡೆದಿದ್ದ ಶಿರಸ್ತೇದಾರನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ 1 ವರ್ಷ ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ‌.

ಯಲ್ಲಾಪುರ ತಹಶೀಲ್ದಾರ ಕಚೇರಿಯ ಶಿರಸ್ತೆದಾರ ವಿನಾಯಕ ಪಾಯ್ಕಾರಾಮ ಗಾಂವಕಾರ ಶಿಕ್ಷೆಗೊಳಗಾದವರು. ಈತ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ನಾಗೇಂದ್ರ ಶಿವರಾಮ ಹೆಗಡೆ ಎಂಬುವವರ ತಂದೆಯವರ ಹೆಸರಿನಲ್ಲಿದ್ದ ಜಮೀನಿನ ವಾರಸಾ ಬದಲಾಯಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಆಪಾದಿತ ಅಧಿಕಾರಿ ಟ್ರ್ಯಾಪ್ ಕಾರ್ಯಾಚರಣೆ ವೇಳೆ ಪಿರ್ಯಾದಿಯಿಂದ ರೂ.1 ಸಾವಿರ ಲಂಚದ ಹಣವನ್ನು ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆಪಾದಿತನ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 , ಕಲಂ 07 ರ ಅಡಿಯಲ್ಲಿ 1 ವರ್ಷ ಸಾದಾ ಕಾರಾವಾಸ ಹಾಗೂ ರೂ. 5000 ದಂಡ ಹಾಗೂ ಕಲಂ: 13 (1) (ಡಿ) ಸಹಿತ 13(2)ರ ಅಡಿಯಲ್ಲಿ 1 ವರ್ಷ ಸಾದಾ ಕಾರಾಗೃಹ ವಾಸ ಹಾಗೂ ರೂ. 5000 ದಂಡ ವಿಧಿಸಿದೆ. ಸದರಿ ಆದೇಶಗಳನ್ನು ಸಮರ್ತಿತವಾಗಿ ಜಾರಿ ಮಾಡಿದ್ದು, ದಂಡ ಪಾವತಿಸದೇ ಇದ್ದಲ್ಲಿ ಹೆಚ್ಚುವರಿ 6 ತಿಂಗಳ ಸಾದಾ ಕಾರವಾಸ ಶಿಕ್ಷಗೆ ಗುರಿಪಡಿಸಿ ಆದೇಶಿಸಿದೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ಲಕ್ಷ್ಮೀಕಾಂತ ಎಮ್. ಪ್ರಭು, ವಿಶೇಷ ಸರ್ಕಾರಿ ಅಭಿಯೋಜಕರು, ಕರ್ನಾಟಕ ಲೋಕಾಯುಕ್ತ ಕಾರವಾರ ಇವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಕಳ್ಳತನವಾಗಿದ್ದ ಬೈಕ್​ನೊಂದಿಗೆ ಪೊಲೀಸರು

ಪ್ರತ್ಯೇಕ ಪ್ರಕರಣ - ಬೈಕ್​ ಕಳ್ಳರು ಪೊಲೀಸರ ಬಲೆಗೆ:ಜಿಲ್ಲೆಯ ವಿವಿಧೆಡೆಗಳಲ್ಲಿ ಬೈಕ್​ ಕಳ್ಳತನ ನಡೆಸಿದ್ದ ನಾಲ್ವರು ಆರೋಪಿಗಳನ್ನು ಹೊನ್ನಾವರ ತಾಲೂಕಿನ ಮಂಕಿ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಕಳ್ಳತನ ಮಾಡಿದ್ದ ಬರೋಬ್ಬರಿ 15 ಬೈಕ್​ಗಳನ್ನು ಇದೇ ವೇಳೆ ವಶಕ್ಕೆ ಪಡೆದಿದ್ದಾರೆ.

ಆಗಸ್ಟ್ 31 ರಂದು ಬೆಳಿಗ್ಗಿನ ಜಾವ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿರುವಾಗ ಕಪ್ಪು ಬಣ್ಣದ ಟಿ.ವಿ.ಎಸ್ ರೈಡರ್ ಬೈಕ್‌ನ್ನು ಸವಾರ ನಿಲ್ಲಿಸದೇ ಚಲಾಯಿಸಿಕೊಂಡು ಹೋಗಲು ಮುಂದಾಗಿದ್ದ. ಈ ವೇಳೆ ಅನುಮಾನದ ಮೇಲೆ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಬೈಕ್ ಕದ್ದು ಪರಾರಿಯಾಗುತ್ತಿರುವುದು ಬೆಳಕಿಗೆ ಬಂದಿದೆ.

ಆಟೋ ರಿಕ್ಷಾ ಆರೋಪಿಗಳು

ಆರೋಪಿಯು, ಕಲಘಟಗಿಯ ಜೈಲಾನಿ ಭಾಷಾಸಾಬ್ ಗಂಜಿಗಟ್ಟಿ, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಹಂಚಿನಾಳ ನಿವಾಸಿ ರವಿಚಂದ್ರ ಶಿವಪ್ಪ ತಳವಾರ, ಸಲ್ಮಾನ್ ಇಮಾಮ್‌ಸಾಬ್ ತಹಶೀಲ್ದಾರ್​ ಹಾಗೂ ಜಗದೀಶ ಕೋಟೆಪ್ಪ, ಕುಂದಗೋಳ ಇವರೊಂದಿಗೆ ಸೇರಿ ವಿವಿಧ ಜಿಲ್ಲೆಗಳಲ್ಲಿ ಸುಮಾರು 14 ಮೋಟಾರ್ ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ಪೊಲೀಸ್ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.

ಬಂಧಿತರಿಂದ ವಿವಿಧೆಡೆಯಲ್ಲಿ ಕಳ್ಳತನ ಮಾಡಿರುವ 15 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳ ಒಟ್ಟು ಮೌಲ್ಯ 8.35 ಲಕ್ಷ ಎಂದು ಅಂದಾಜಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಜೈಲಾನಿ ಭಾಷಾಬ್ ಗಂಜಿಗಟ್ಟಿ ಈತನ ಮೇಲೆ ಕಲಘಟಗಿ ಹಾಗೂ ವಿದ್ಯಾನಗರ ಠಾಣೆಯಲ್ಲಿ ಸಹ ಪ್ರಕರಣ ದಾಖಲಾಗಿದೆ. ಹಾಗೂ ಜಗದೀಶ ಕೋಟೆಪ್ಪ ಬಂಡಿವಾಡ ಈತನ ಮೇಲೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ‌ ಇದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹಾಗೂ ಭಟ್ಕಳ‌ ಡಿವೈಎಸ್ಪಿ ಶ್ರೀಕಾಂತ ಕೆ. ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮಾಂತರ ವೃತ್ತದ ಪ್ರಭಾರ ವೃತ್ತ ನಿರೀಕ್ಷಕ ಚಂದನಗೋಪಾಲರವರ ನೇತೃತ್ವದಲ್ಲಿ ಪ್ರತ್ಯೇಕ ತಂಡವನ್ನು ರಚಿಸಿ ಮಂಕಿ ಪೊಲೀಸ್ ಠಾಣೆಯ ಸಿಪಿಐ ಭರತಕುಮಾರ.ವಿ, ಮುಶಾಹಿದ್ ಅಹ್ಮದ್ ಹಾಗೂ ಮುರ್ಡೇಶ್ವರ ಠಾಣೆಯ ತನಿಖಾ ವಿಭಾಗದ ಪಿಎಸ್ಐ ಶಿವಕುಮಾರ ಆರ್ ಹಾಗೂ ಮುರ್ಡೇಶ್ವರ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಕಿರಣಕುಮಾರ ರೆಡ್ಡಿ, ರುದ್ರಯ್ಯ ಕಾಡದೇವರ, ಲೋಕೇಶ ಕತ್ತಿ, ಮುರುಳಿಧರ ನಾಯ್ಕ, ವಿಜಯ ನಾಯ್ಕ, ಮಹ್ಮದ್ ಶಫೀ (ಯಲ್ಲಾಪುರ ಠಾಣೆ), ರಾಜು ಗೌಡ, ಬಸವನಗೌಡ ಬಿರಾದಾರ ಹಾಗೂ ಸಿಬ್ಬಂದಿ ಆರೋಪಿತರನ್ನು ದಸ್ತಗಿರಿ ಮಾಡಿದ್ದಾರೆ.

ಕದ್ದ ಆಟೋ‌ ಮಾರಾಟ ಮಾಡುವಾಗ ರೇಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಳ್ಳರು:ಹುಬ್ಬಳ್ಳಿಯಲ್ಲಿ ಆಟೋ ರಿಕ್ಷಾಗಳನ್ನು ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕಸಬಾ ಪೇಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಬಂಕಾಪೂರ ಚೌಕ್ ಬಳಿ ಆಸೀಫ್ ಹಾಗೂ ದೊಡ್ಡಪ್ಪ ದೊಡ್ಡಮನಿ ಎಂಬುವವರು ಆಟೋ ರಿಕ್ಷಾಗಳನ್ನು ಕಳ್ಳತನ ಮಾಡಿ ಮತ್ತೊಬ್ಬರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು‌.

ಇದರ ಖಚಿತ ಮಾಹಿತಿ ಮೇರೆಗೆ ಕಸಬಾಪೇಟೆ ಠಾಣೆಯ ಇನ್ಸ್ ಪೆಕ್ಟರ್ ರಾಘವೇಂದ್ರ ಹಳ್ಳೂರ ಹಾಗೂ ಪಿಎಸ್ಐ ವಿಶ್ವನಾಥ ಆಲಮಟ್ಟಿ ಅವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಸಿನಿಮಾ ಶೈಲಿಯಲ್ಲಿ ರಕ್ತಚಂದನ ಸಾಗಣೆ: ಚಾಮರಾಜನಗರದಲ್ಲಿ ಐವರು ಖದೀಮರ ಬಂಧನ

ABOUT THE AUTHOR

...view details