ಕರ್ನಾಟಕ

karnataka

ಸೌಹಾರ್ದತೆ ಸಾರುವ ಶಿರಸಿಯ ಸ್ವರ್ಣವಲ್ಲಿ ಮಠ: ಮುಸ್ಲಿಂರು ರಥ ಕಟ್ಟಿದರೆ, ಕ್ರಿಶ್ಚಿಯನ್​ರಿಂದ ಪಟಾಕಿ ಸಂಭ್ರಮ

By

Published : May 14, 2022, 10:43 AM IST

ಸ್ವರ್ಣವಲ್ಲಿ ಮಠದಲ್ಲಿ ಮುಸ್ಲಿಂ ಧರ್ಮದವರು ರಥ ಕಟ್ಟುವ ಕೆಲಸ ಮಾಡುತ್ತಿರುವುದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಎಲ್ಲಾ ಕಡೆ ಸೌಹಾರ್ದಯುತ ವಾತಾವರಣ ಇರಬೇಕು ಎಂದು ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.

swarnavalli mutt chariot created by the Muslim community
ಮುಸ್ಲಿಂ ಸಮುದಾಯದವರು ರಚಿಸಿದ ಸ್ವರ್ಣವಲ್ಲಿ ಮಠದ ರಥ

ಶಿರಸಿ(ಉತ್ತರ ಕನ್ನಡ):ಸಾಮರಸ್ಯ, ಸೌಹಾರ್ದತೆಯ ಪ್ರತೀಕ ಎನಿಸಿಕೊಂಡಿರುವ ಶಿರಸಿ ತಾಲೂಕಿನ ಸ್ವರ್ಣವಲ್ಲಿಯ ರಥೋತ್ಸವಕ್ಕೆ ರಥ ಕಟ್ಟುವ ಕೆಲಸ ಆರಂಭವಾಗಿದೆ. ಇಂದು ರಥೋತ್ಸವ ಜರುಗಲಿದ್ದು, ಈ ರಥವನ್ನು ಕಟ್ಟುವ ಕೆಲಸ ಮುಸ್ಲಿಂ ಧರ್ಮಿಯರಿಂದ ಆಗಿರುವುದು ವಿಶೇಷ. ಇಲ್ಲಿ ಮುಸ್ಲಿಮರೇ ರಥ ನಿರ್ಮಾಣ ಮಾಡುವ ಪದ್ಧತಿ ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿದೆಯಂತೆ.

ಸೌಹಾರ್ದತೆಯ ಪ್ರತೀಕ ಮುಸ್ಲಿಂ ಸಮುದಾಯದವರು ರಚಿಸಿದ ಸ್ವರ್ಣವಲ್ಲಿ ಮಠದ ರಥ

ಸ್ವರ್ಣವಲ್ಲಿಯ ಪೀಠಾಧೀಶ, ಹಸಿರು ಸ್ವಾಮಿಗಳೆಂದು ಹೆಸರುವಾಸಿಯಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಸೌಹಾರ್ದತೆಯ ಪ್ರತೀಕ ಎನಿಸಿಕೊಂಡಿದ್ದಾರೆ. ಅಜಾನ್ ಗಲಾಟೆ, ಜಾತ್ರೆಗಳಲ್ಲಿಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ, ಹಿಜಾಬ್​​ ವಿವಾದ ಹೀಗೆ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿದ್ದರೂ ಸಹ ಶ್ರೀಗಳು ಮಾತ್ರ ತಮ್ಮ ಹಿಂದಿನ ಪದ್ಧತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಈ ವರ್ಷ ಸಹ ನೂರಾರು ವರ್ಷಗಳಿಂದ ನಡೆದುಕೊಂಡ ಬಂದ ಪದ್ಧತಿಯಂತೆ ಮುಸ್ಲಿಂ ಧರ್ಮಿಯರೇ ರಥವನ್ನು ಕಟ್ಟುತ್ತಾರೆ. ಈ ಸ್ವರ್ಣವಲ್ಲಿ ಮಠದಲ್ಲಿ ಮುಸ್ಲಿಂ ಧರ್ಮದವರು ನೂರಾರು ವರ್ಷಗಳಿಂದ ಈ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಎಲ್ಲಾ ಕಡೆ ಸೌಹಾರ್ದಯುತ ವಾತಾವರಣ ಇರಬೇಕು ಎಂದು ಸ್ವರ್ಣವಲ್ಲಿ ಶ್ರೀಗಳು ತಿಳಿಸಿದರು.

ಸುಮಾರು 300 ವರ್ಷಗಳಿಂದ ಸ್ವರ್ಣವಲ್ಲಿಯಲ್ಲಿ ಮುಸ್ಲಿಂ ಧರ್ಮಿಯರು ರಥ ಕಟ್ಟುವ ಕೆಲಸ ಮಾಡಿಕೊಂಡು ಬಂದಿದ್ದಾರೆ. 'ನಾವು ಅಲ್ಲಾನನ್ನು ನಂಬುತ್ತೇವೆ. ನರಸಿಂಹ ದೇವರನ್ನೂ ಕೂಡ ನಂಬುತ್ತೇವೆ. ಎಲ್ಲರೂ ಒಂದಾಗಿ ಬಾಳುತ್ತೇವೆ ಎನ್ನುತ್ತಾರೆ ರಥ ಕಟ್ಟುವ ಪ್ರಮುಖ ವ್ಯಕ್ತಿ ಸೋಂದಾದ ಹಸನಸಾಬ ಖಾಜಿ.

ಐದು ಜನ ಸೇರಿ ರಥ ಕಟ್ಟುತ್ತಾರೆ. ರಥವನ್ನು ಹಗ್ಗದಿಂದ ಮಾಡಲಾಗುತ್ತದೆ. ರಥೋತ್ಸವದ ದಿನ ರಥದ ಮೇಲೆ ನಿಯಂತ್ರಣವನ್ನೂ ಸಹ ಮುಸ್ಲಿಂ ಸಮುದಾಯದವರೇ ಮಾಡುತ್ತಾರೆ. ಸ್ವರ್ಣವಲ್ಲಿ ಮಠದಲ್ಲಿ ಮುಸ್ಲಿಂ ಬಾಂಧವರು ರಥ ಕಟ್ಟುವ ಕೆಲಸ ಮಾಡಿದರೆ, ಕ್ರಿಶ್ಚಿಯನ್ ಸಮುದಾಯದವರು ಪಟಾಕಿ ಸಿಡಿಸುವ ಸಂಭ್ರಮದಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಾರಣ ಈ ರಥೋತ್ಸವ ಸರ್ವ ಧರ್ಮದವರ ಸೌಹಾರ್ದತೆಯ ಪ್ರತೀಕವಾಗಿದೆ. ಅಲ್ಲದೇ ಇದು ತಾಲೂಕಿನಲ್ಲಿ ನಡೆಯುವ ಮಾಸದ ಕೊನೆಯ ರಥೋತ್ಸವವಾಗಿದೆ.

ABOUT THE AUTHOR

...view details