ಕರ್ನಾಟಕ

karnataka

ಸಿಗದ ಪರಿಶಿಷ್ಟ ಜಾತಿ ಪ್ರಮಾಣಪತ್ರ; ಪ್ರಧಾನಿ ಮೋದಿಗೆ ಪತ್ರ ಬರೆದು ಚಳವಳಿ

By

Published : Apr 9, 2022, 8:19 AM IST

ಪರಿಶಿಷ್ಟ ಜಾತಿ ಪ್ರಮಾಣಪತ್ರ ಸಿಗದ ಹಿನ್ನೆಲೆ ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆಗೂಡಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಪ್ರತಿಭಟನೆ ನಡೆಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ಕಂಡುಬಂದಿದೆ.

letter to PM Narendra Modi over caste certificate issue, caste certificate issue in Uttara Kannada, School student protest in Karwar, Karwar news, ಜಾತಿ ಪ್ರಮಾಣ ಪತ್ರ ಸಮಸ್ಯೆ, ಉತ್ತರ ಕನ್ನಡದಲ್ಲಿ ಜಾತಿ ಪ್ರಮಾಣ ಪತ್ರ ವಿಚಾರವಾಗಿ ಪ್ರಧಾನಿ ಮೋದಿಗೆ ಪತ್ರ, ಕಾರವಾರದಲ್ಲಿ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆ, ಕಾರವಾರ ಸುದ್ದಿ,
ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಚಳುವಳಿ

ಕಾರವಾರ: ಮೊಗೇರ ಸಮುದಾಯದವರಿಗೆ ಕಳೆದ ಹಲವು ವರ್ಷಗಳಿಂದ ನೀಡುತ್ತಿದ್ದ ಪರಿಶಿಷ್ಟ‌ಜಾತಿ ಸೌಲಭ್ಯವನ್ನ ಸರ್ಕಾರ ಸ್ಥಗಿತಗೊಳಿಸಿದೆ.‌ ಇದರಿಂದಾಗಿ ಕಷ್ಟಪಟ್ಟು ಓದಿ ಹತ್ತಾರು ಕ್ಷೇತ್ರದಲ್ಲಿ ಜೀವನ ಕಟ್ಟಿಕೊಳ್ಳಲು ಹವಣಿಸುತ್ತಿದ್ದವರು ಅತಂತ್ರರಾಗಿದ್ದಾರೆ. ಸೌಲಭ್ಯ ಮುಂದುವರಿಸುವಂತೆ ಕೊರಿ ಮೊಗೇರ ಸಮುದಾಯದ ಜನ, ವಿದ್ಯಾರ್ಥಿಗಳು ಪ್ರಧಾನಿ ಮೋದಿಗೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ಆರಂಭಿಸಿದ್ದಾರೆ.

ಭಟ್ಕಳ ತಾಲೂಕಿನಲ್ಲಿ ಮೊಗೇರ ಸಮುದಾಯದ ಜನರ ಪ್ರತಿಭಟನೆ ಜೋರಾಗಿದೆ. ಕಳೆದ 14 ದಿನಗಳಿಂದ ಭಟ್ಕಳದ ಮಿನಿವಿಧಾನ ಸೌಧ ಎದುರು ಪರಿಶಿಷ್ಟರ ಸೌಲಭ್ಯಕ್ಕಾಗಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದ್ರೂ ಸಹ ಸರ್ಕಾರದ ಯಾವೊಬ್ಬ ಜನಪ್ರತಿನಿಧಿಗಳು ಕಣ್ಣೆತ್ತಿಯೂ ನೋಡುತ್ತಿಲ್ಲ. ಇನ್ನೂ ಅಧಿಕಾರಿಗಳಂತೂ ಕ್ಯಾರೆ ಮಾಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಧರಣಿ ಸ್ಥಳದಿಂದ ಕೂಗಳತೆ ದೂರದಲ್ಲಿ ಸಾಗಿದರೂ ಮನವಿ ಆಲಿಸುವ ಪ್ರಯತ್ನ ಮಾಡಿಲ್ಲ. ಇದು ಮೊಗೇರ ಜನಾಂಗದ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಚಳವಳಿ

ಇದೇ ಕಾರಣಕ್ಕೆ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಸಮುದಾಯದ ಮಂದಿ ಹಾಗೂ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಪತ್ರ ಚಳವಳಿ ಆರಂಭಿಸಿದ್ದಾರೆ. ನಾವು ಇಷ್ಟು ವರ್ಷ ಪರಿಶಿಷ್ಟ ಸೌಲಭ್ಯ ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದೇವೆ. ಇದೀಗ ನಮಗೆ ಎಸ್​ಸಿ ಸರ್ಟಿಫಿಕೇಟ್ ನೀಡಲು ಹಿಂದೇಟು ಹಾಕಲಾಗುತ್ತಿದೆ. ಇದರಿಂದ ನಮ್ಮ ಮುಂದಿನ‌ ಜೀವನಕ್ಕೆ ಸರ್ಕಾರವೇ ಅಡ್ಡಿಯಾಗುತ್ತಿದೆ. ವಿದ್ಯಾಭ್ಯಾಸ, ಉದ್ಯೋಗ, ಸರ್ಕಾರಿ ಸೌಲಭ್ಯ ಪಡೆಯಲು ಜಾತಿ ಪ್ರಮಾಣ ಪತ್ರಗಳು ಅವಶ್ಯವಾಗಿದ್ದು, ಎಸ್​ಸಿ ಸರ್ಟಿಫಿಕೇಟ್​ನ್ನು ಕೂಡಲೇ ಒದಗಿಸಬೇಕು. ಇಲ್ಲದೇ ಇದ್ದಲ್ಲಿ ನಾವು ಮುಂದಿನ ದಿನಗಳಲ್ಲಿ ಶಾಲೆಯಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಇದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

2008 ರವರೆಗೆ ಸರ್ಕಾರ ಮೊಗೇರ ಜನಾಂಗದವರಿಗೆ ಪರಿಶಿಷ್ಟ ಜಾತಿ ಸೌಲಭ್ಯಗಳನ್ನು ನೀಡಿತ್ತು. ಬಳಿಕ ಪಟ್ಟಭದ್ರ ಹಿತಾಸಕ್ತರ ಪಿತೂರಿಯಿಂದ ಸೌಲಭ್ಯಗಳನ್ನು ನೀಡುವುದನ್ನು ನಿಲ್ಲಿಸಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಪರಿಶಿಷ್ಟ ಆಯೋಗ ಕೂಡ ಮೊಗೇರರಿಗೆ ಎಸ್ಸಿ ಎಂದು ಪರಿಗಣಿಸಿದೆ. ಇಷ್ಟಾದರೂ ಇದೀಗ ಸರ್ಕಾರ ಸೌಲಭ್ಯ ನಿಲಿಸಿ ಸರ್ಕಾರ ತಮಗೆ ಅನ್ಯಾಯ ಮಾಡಿದೆ ಎಂದು ಧರಣಿ ನಿರತರು ಆರೋಪಿಸಿದ್ದಾರೆ.

ನಮ್ಮ ತಂದೆ-ತಾಯಿ, ಅಜ್ಜ-ಅಜ್ಜಿ ಪರಿಶಿಷ್ಟರೆಂದು ಗುರುತಿಸಲಾಗಿದೆ. ಆದರೆ ಮಕ್ಕಳಾದ ನಮ್ಮನ್ನು ಮಾತ್ರ ಇದೀಗ ಪರಿಶಿಷ್ಟರಲ್ಲ ಎಂದು ಸೌಲಭ್ಯ ನೀಡದೆ ವಂಚಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಮಕ್ಕಳ ಪ್ರಶ್ನೆಯಾಗಿದೆ. ಸರ್ಕಾರ ಕೂಡಲೇ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ನಮ್ಮ ಮಕ್ಕಳು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಯಿಂದ ವಂಚಿತರಾಗುತ್ತಾರೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಯುವಕರು ನಿರುದ್ಯೋಗಿಗಳು ಆಗುತ್ತಾರೆ. ಸರ್ಕಾರ ವಿನಾಕಾರಣ ಅತಂತ್ರ ಸ್ಥಿತಿಗೆ ತಳ್ಳುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಕಳೆದ 15 ದಿನಗಳಿಂದ ಭಟ್ಕಳದ ಮಿನಿ ವಿಧಾನಸೌಧದಲ್ಲಿ ಸತ್ಯಾಗ್ರಹ ನಡೆಸುತ್ತಿರುವ ಮೊಗೇರ ಸಮುದಾಯದ ಮಂದಿ ಇದೀಗ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟ ನಡೆಸಲು ಮುಂದಾಗಿರುವ ಸಮುದಾಯದ ಜನರು ಮುಂದಿನ‌ದಿನಗಳಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details