ಕರ್ನಾಟಕ

karnataka

ತುಕ್ಕು ಹಿಡಿದು ತುಂಡಾಗುವ ಸ್ಥಿತಿಯಲ್ಲಿ ಬಡಗಣಿ ತೂಗು ಸೇತುವೆ: ಸಂಚಾರಕ್ಕೂ ಭಯ

By

Published : Sep 14, 2022, 4:12 PM IST

Updated : Sep 15, 2022, 4:35 PM IST

ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಬಡಗಣಿ ನದಿಯ ಮೇಲೆ ನಿರ್ಮಿಸಲಾದ ತೂಗು ಸೇತುವೆ ಇದೀಗ ದುರಸ್ತಿಗಾಗಿ ಕಾಯುತ್ತಿದೆ.

ಬಡಗಣಿ ತೂಗು ಸೇತುವೆ
ಬಡಗಣಿ ತೂಗು ಸೇತುವೆ

ಕಾರವಾರ(ಉತ್ತರ ಕನ್ನಡ):ಅದು ಹಲವು ದಶಕಗಳ ಹೋರಾಟದ ಬಳಿಕ ದಕ್ಕಿದ ಸೇತುವೆ. ನಿತ್ಯ ನೂರಾರು ಜನರ ಸುಗಮ ಸಂಚಾರಕ್ಕೆ ಇರುವ ವರದಾನ. ಮಾತ್ರವಲ್ಲದೆ ಪ್ರವಾಸಿಗರ ಪಾಲಿಗೆ ಅಚ್ಚು ಮೆಚ್ಚಿನ ಸ್ಥಳ ಕೂಡ ಹೌದು. ಆದರೆ, ಈ ಸೇತುವೆ ಇದೀಗ ನಿರ್ವಹಣೆ ಇಲ್ಲದೇ ಇದರ ಕಬ್ಬಿಣದ ಪಟ್ಟಿಗಳು ತುಕ್ಕು ಹಿಡಿದು ತುಂಡಾಗುವ‌ ಹಂತಕ್ಕೆ ತಲುಪಿದ್ದು, ಸೇತುವೆ ಮೇಲಿನ ಸಂಚಾರವೇ ಭಯ ಹುಟ್ಟಿಸುವಂತೆ ಮಾಡಿದೆ.

ಹೌದು, ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಬಡಗಣಿ ನದಿಯ ಮೇಲೆ ನಿರ್ಮಿಸಲಾದ ತೂಗು ಸೇತುವೆ ಇದೀಗ ದುರಸ್ತಿಗಾಗಿ ಕಾಯುತ್ತಿದೆ. ಒಂದು ಕಾಲದಲ್ಲಿ ಟೂರಿಸ್ಟ್ ಸ್ಪಾಟ್ ಆಗಿ ಫೊಟೋಶೂಟ್ ತಾಣವಾಗಿ ಪ್ರಸಿದ್ಧಿ ಪಡೆದಿದ್ದ ಈ ಸೇತುವೆ ಇದೀಗ ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ನಿರ್ಲಕ್ಷ್ಯ ಇಲ್ಲಿನ ಗ್ರಾಮಸ್ಥರ ಜೀವಕ್ಕೆ ಅಪಾಯ ತಂದಿಡುವ ಆತಂಕ ಮೂಡಿದೆ.

ಸುಮಾರು 20 ವರ್ಷಗಳ ಹಿಂದೆ ನಿರ್ಮಾಣವಾದ ಈ ತೂಗುಸೇತುವೆಯು ರಾಷ್ಟ್ರೀಯ ಹೆದ್ದಾರಿಯಿಂದ ಒಳ ಬಂದರೆ ಅನತಿ ದೂರದಲ್ಲಿದೆ. ಒಂದು ಬದಿಯಲ್ಲಿ ಕರ್ಕಿ, ಇನ್ನೊಂದು ಬದಿಯಲ್ಲಿ ಪಾವಿನಕುರ್ವೆ ಗ್ರಾಮವನ್ನು ಸಂಪರ್ಕಿಸುವ ಈ ತೂಗುಸೇತುವೆಯ ಕೆಳಕ್ಕೆ ಬಡಗಣಿ ನದಿ ಹರಿಯುತ್ತದೆ. ಸುಂದರ ವಿಹಂಗಮ ನೋಟ ಇಲ್ಲಿದ್ದರೂ ಸಹ, ಇತ್ತೀಚಿಗಂತೂ ಈ ಸೇತುವೆಯ ದುಃಸ್ಥಿತಿಯ ಕಂಡು ಗ್ರಾಮಸ್ಥರೇ ಸಂಚರಿಸಲು ಭಯಪಡುವಂತಾಗಿದೆ.

ಬಡಗಣಿ ತೂಗು ಸೇತುವೆ ದುಸ್ಥಿತಿ ಬಗ್ಗೆ ಸಾರ್ವಜನಿಕರು ಮಾತನಾಡಿದ್ದಾರೆ

ಆತಂಕದಲ್ಲಿ ಓಡಾಡುವ ಪರಿಸ್ಥಿತಿ: ಸೇತುವೆಗೆ ಹಾಕಲಾಗಿರುವ ಹಲಗೆಗಳು ಹಾಳಾಗಿದ್ದು, ಸರಳುಗಳು ತುಕ್ಕು ಹಿಡಿದಿವೆ. ಸೇತುವೆಯ ಕೆಳಭಾಗದ ಆಧಾರದ ಕಬ್ಬಿಣದ ಪಟ್ಟಿಗಳು ಕೂಡ ಈಗಲೋ ಆಗಲೋ ತುಂಡಾಗಿ ಬೀಳುವ ಹಂತದಲ್ಲಿದ್ದು, ಪ್ರತಿದಿನ ಇಲ್ಲಿ ಆತಂಕದಲ್ಲಿ ಓಡಾಡುವ ಪರಿಸ್ಥಿತಿ ಇದೆ ಎಂದು ದೂರುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರು.

ಪಾವಿನಕುರ್ವಾ ಗ್ರಾಮದಲ್ಲಿ ವಾಸಿಸುತ್ತಿರುವ ಹೆಚ್ಚಿನವರು ಮೀನುಗಾರರು, ಕೂಲಿಕಾರರು. ಹೀಗಾಗಿ ಸಮಯದ ಪರಿವೇ ಇಲ್ಲದೇ ತಮ್ಮ ದುಡಿಮೆಗಾಗಿ ಪಟ್ಟಣಕ್ಕೆ ಓಡಾಡುತ್ತಿರುತ್ತಾರೆ. ಹೀಗೆ ಓಡಾಟಕ್ಕೆ ಇರುವ ಏಕೈಕ ದಾರಿಯೆಂದರೆ ಈ ತೂಗು ಸೇತುವೆ. ಅಲ್ಲದೆ ಗ್ರಾಮದ ಮಕ್ಕಳು ಶಾಲಾ- ಕಾಲೇಜುಗಳಿಗೆ ತೆರಳಲು ಕೂಡ ಇದೇ ತೂಗು ಸೇತುವೆಯನ್ನೇ ಬಳಸಿ ಪಟ್ಟಣಕ್ಕೆ ತೆರಳಬೇಕಿದ್ದು, ಸೇತುವೆ ಜೀರ್ಣಾವಸ್ಥೆ ತಲುಪಿರುವುದು ಎಲ್ಲರಲ್ಲೂ ಆತಂಕಕ್ಕೆ ಕಾರಣವಾಗಿದೆ.

ಸದ್ಯ ಸ್ಥಳೀಯ ಪಾವಿನಕುರ್ವಾ ಗ್ರಾಮ ಪಂಚಾಯತಿ ಗ್ರಾಮಸ್ಥರ ದೂರಿನ ಮೇರೆಗೆ ತೂಗು ಸೇತುವೆಯ ಒಂದಷ್ಟು ಹಲಗೆಗಳನ್ನು ಬದಲಿಸುವ ಕಾರ್ಯವನ್ನೇನೋ ಮಾಡಿದೆ. ಆದರೆ, ಸಂಪೂರ್ಣ ಸೇತುವೆಯೇ ದುಃಸ್ಥಿತಿಯ ಹಂತ ತಲುಪಿರುವುದರಿಂದ ಸರ್ಕಾರ ಹೆಚ್ಚಿನ ಮಟ್ಟದ ದುರಸ್ತಿ ಕಾರ್ಯವನ್ನು ನಡೆಸಬೇಕಿದೆ.

ಸೇತುವೆ ಪುನರ್​ನಿರ್ಮಾಣದ ಅನಿವಾರ್ಯತೆ: ಒಂದರ್ಥದಲ್ಲಿ ಸಂಪೂರ್ಣ ತೂಗು ಸೇತುವೆಯನ್ನೇ ಪುನಃ ನಿರ್ಮಿಸುವ ಅನಿವಾರ್ಯತೆ ಕೂಡ ಇಲ್ಲಿದ್ದು, ಜನಪ್ರತಿನಿಧಿಗಳು ಈ ಬಗ್ಗೆ ಕಣ್ಣೆತ್ತಿ ನೋಡಬೇಕಿದೆ. ಈ ತೂಗುಸೇತುವೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅವಘಡಗಳು ನಡೆಯುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಓದಿ:ಶಿರಸಿ: ಪಣಸಗುಳಿ ಸೇರಿ ಹಲವು ಸೇತುವೆಗಳ ಪುನರ್ ನಿರ್ಮಾಣಕ್ಕೆ ಆಗ್ರಹ

Last Updated :Sep 15, 2022, 4:35 PM IST

ABOUT THE AUTHOR

...view details