ಕರ್ನಾಟಕ

karnataka

ಜನಪ್ರತಿನಿಧಿಗಳ ಕೊಡುಗೆ: ಉತ್ತರ ಕನ್ನಡ ಜಿಲ್ಲೆಗೆ ಬಂದ 17 ಆ್ಯಂಬುಲೆನ್ಸ್

By

Published : May 30, 2021, 2:37 PM IST

ಜಿಲ್ಲೆಯ ಸಚಿವ ಹಾಗೂ ಶಾಸಕರು ಸೇರಿ ತಮ್ಮ ಅನುದಾನದಲ್ಲಿ ಜಿಲ್ಲೆಗೆ ಬರೋಬ್ಬರಿ 17 ಆ್ಯಂಬುಲೆನ್ಸ್​​ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

Uttara Kannada
ಉತ್ತರ ಕನ್ನಡ ಜಿಲ್ಲೆಗೆ ಬಂದ 17 ಆ್ಯಂಬುಲೆನ್ಸ್

ಕಾರವಾರ: ಭೌಗೋಳಿಕವಾಗಿ ವಿಶಾಲವಾಗಿರುವ ಪ್ರವಾಸೋದ್ಯಮ ಪೂರಕ ಜಿಲ್ಲೆ ಉತ್ತರ ಕನ್ನಡ. ಇಷ್ಟು ದೊಡ್ಡ ಜಿಲ್ಲೆಯಾಗಿದ್ದರೂ ಸಹ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಹಿಂದುಳಿದಿದ್ದು, ಹಲವೆಡೆ ಸೂಕ್ತ ಆ್ಯಂಬುಲೆನ್ಸ್​​ ವ್ಯವಸ್ಥೆ ಸಹ ಇಲ್ಲದ ಪರಿಸ್ಥಿತಿಯಿತ್ತು. ಆದರೆ ಇದೀಗ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳಿಗೆ ನೂತನ ಆ್ಯಂಬುಲೆನ್ಸ್​​ಗಳನ್ನ ನೀಡಿದ್ದು, ಆರೋಗ್ಯ ಕ್ಷೇತ್ರಕ್ಕೆ ಹೊಸ ಬಲ ಬಂದಂತಾಗಿದೆ.

ಒಂದೆಡೆ ವಿಶಾಲವಾದ ಕರಾವಳಿ, ಇನ್ನೊಂದೆಡೆ ಪಶ್ಚಿಮ ಘಟ್ಟಗಳ ಸರಣಿಯನ್ನ ಹೊಂದಿರುವ ವಿಶಿಷ್ಟ ಜಿಲ್ಲೆ ಉತ್ತರ ಕನ್ನಡ. ಭೌಗೋಳಿಕವಾಗಿಯೂ ವಿಭಿನ್ನತೆಯನ್ನ ಹೊಂದಿರುವ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರ ಮಾತ್ರ ತೀರಾ ಹಿಂದುಳಿದಿದ್ದು, ಯಾವುದೇ ಸುಸಜ್ಜಿತ ಆಸ್ಪತ್ರೆಗಳನ್ನ ಹೊಂದಿಲ್ಲ.‌ ಅಲ್ಲದೆ ಜಿಲ್ಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾದವರನ್ನ ಕರೆದೊಯ್ಯಲು ಆ್ಯಂಬುಲೆನ್ಸ್ ಕೊರತೆ ಸಹ ಇದ್ದು, ಜನಸಾಮಾನ್ಯರು ಪರದಾಡಬೇಕಾಗಿತ್ತು‌. ಆದರೆ ಇದೀಗ ಜಿಲ್ಲೆಯ ಜನಪ್ರತಿನಿಧಿಗಳ ನೆರವಿನಿಂದ ಜಿಲ್ಲೆಗೆ ಇದ್ದ ಆ್ಯಂಬುಲೆನ್ಸ್ ಕೊರತೆ ನೀಗುವಂತಾಗಿದೆ.

ಜನಪ್ರತಿನಿಧಿಗಳ ಕೊಡುಗೆ: ಉತ್ತರ ಕನ್ನಡ ಜಿಲ್ಲೆಗೆ ಬಂದ 17 ಆ್ಯಂಬುಲೆನ್ಸ್

ಜಿಲ್ಲೆಯ ಸಚಿವ ಹಾಗೂ ಶಾಸಕರು ಸೇರಿ ತಮ್ಮ ಅನುದಾನದಲ್ಲಿ ಜಿಲ್ಲೆಗೆ ಬರೋಬ್ಬರಿ 17 ಆ್ಯಂಬುಲೆನ್ಸ್​​ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಕೊರೊನಾ 3 ನೇ ಅಲೆಯ ಪೂರ್ವದಲ್ಲಿ ಜಿಲ್ಲೆಯ ಆರೋಗ್ಯ ಸ್ಥಿತಿಗತಿಯನ್ನ ಮೇಲ್ಮಟ್ಟಕ್ಕೆ ಏರಿಸುವ ಗುರಿಯನ್ನ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಚಿವ ಶಿವರಾಮ ಹೆಬ್ಬಾರ್ ತಮ್ಮ ಯಲ್ಲಾಪುರ, ಮುಂಡಗೋಡ ಕ್ಷೇತ್ರಕ್ಕೆ ಸದ್ಯ 3 ಆ್ಯಂಬುಲೆನ್ಸ್ ನೀಡಿದ್ದು, ಇನ್ನೆರಡು ಬರಬೇಕಿದೆ. ಕಾರವಾರ ಶಾಸಕಿ ರೂಪಾಲಿ ನಾಯ್ಕ 2 ವೆಂಟಿಲೇಟರ್ ಸಹಿತ ನಾಲ್ಕು ಆ್ಯಂಬುಲೆನ್ಸ್ ನೀಡಿದ್ದಾರೆ. ಕುಮಟಾ ಶಾಸಕ ದಿನಕರ ಶೆಟ್ಟಿ ಹಾಗೂ ಭಟ್ಕಳ ಶಾಸಕ ಸುನೀಲ್ ನಾಯ್ಕ ತಲಾ 2 ಆ್ಯಂಬುಲೆನ್ಸ್​​ಗಳನ್ನು ನೀಡುವುದಾಗಿ ತಿಳಿಸಿದ್ದಾರೆ.

ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ಎಂಎಲ್‌ಸಿ ಎಸ್‌.ಎಲ್.ಘೋಟ್ನೇಕರ್ ತಲಾ 1 ಆ್ಯಂಬುಲೆನ್ಸ್ ನೀಡಿದ್ದಾರೆ. ಜೊತೆಗೆ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ತಮ್ಮ ಕ್ಷೇತ್ರಕ್ಕೆ 2 ಆ್ಯಂಬುಲೆನ್ಸ್​​‌ಗಳನ್ನು ತಮ್ಮ ಪ್ರದೇಶಾಭಿವೃದ್ಧಿ ಅನುದಾನದಡಿ ನೀಡಿದ್ದು, ಈ ಮೂಲಕ 17 ಆ್ಯಂಬುಲೆನ್ಸ್​​‌ಗಳು ಜಿಲ್ಲೆಗೆ ಲಭ್ಯವಾಗುವಂತಾಗಿದೆ.

ಇದಲ್ಲದೆ ಖಾಸಗಿಯಾಗಿ ಕಾಂಗ್ರೆಸ್ ಮಾಜಿ ಶಾಸಕ ಸತೀಶ್ ಸೈಲ್ ಕೂಡ ಎರಡು ಆ್ಯಂಬುಲೆನ್ಸ್​​ಗಳನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಆ್ಯಂಬುಲೆನ್ಸ್ ಸೇವೆಯ ಅಗತ್ಯತೆ ಹೆಚ್ಚಾಗಿ ಇರುವುದರಿಂದ ಅದರಲ್ಲಿಯೂ ಕೊರೊನಾ ಸಂದರ್ಭದಲ್ಲಿ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಆ್ಯಂಬುಲೆನ್ಸ್​​ಗಳನ್ನು ನೀಡಿದ್ದಾಗಿ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ‌.

ಇದನ್ನೂ ಓದಿ:ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ 4 ಆ್ಯಂಬುಲೆನ್ಸ್ ಒದಗಿಸಿದ ಶಾಸಕಿ ರೂಪಾಲಿ ನಾಯ್ಕ್

ABOUT THE AUTHOR

...view details