ಕರ್ನಾಟಕ

karnataka

ಕಾರವಾರ: 3 ಕಿಲೋ ಮೀಟರ್​ ರಸ್ತೆಗಾಗಿ ಮನವಿ ಹಿಡಿದು 130ಕಿ.ಮೀ ದೂರ ಬಂದರೂ ಸಿಗದ ಸಚಿವರು

By

Published : Sep 10, 2022, 7:21 AM IST

ಗ್ರಾಮಕ್ಕೆ ಅಗತ್ಯ ಇರುವ ರಸ್ತೆ ಸೌಲಭ್ಯದ ಬಗ್ಗೆ ಸಚಿವರ ಗಮನಕ್ಕೆ ತರಲು ಜನ ಸಂದರ್ಶದ ವೇಳೆ ಭೇಟಿಯಾಗಲೆಂದು ನೂರಾರು ಕಿಲೋ ಮೀಟರ್​ನಿಂದ ಬಂದ ಗ್ರಾಮಸ್ಥರಿಗೆ ಬೇಸರ ಕಾದಿತ್ತು. ಸಚಿವರು ಸಭೆ ರದ್ದುಪಡಿಸಿ ತೆರಳಿದ್ದರು.

kota srinivas poojary did not get villagers who came to petition
130ಕಿ.ಮೀ ದೂರ ಬಂದರು ಸಿಗದ ಸಚಿವರು

ಕಾರವಾರ(ಉತ್ತರ ಕನ್ನಡ): ಜಿಲ್ಲಾ ಉಸ್ತುವಾರಿ ಸಚಿವರಿಂದ ಅಹವಾಲು ಸ್ವೀಕಾರದ ಮಾಹಿತಿ ಆಧರಿಸಿ ನೂರಾರು ಕಿ.ಮೀ ದೂರದ ಕುಗ್ರಾಮದಿಂದ ಸಚಿವರನ್ನು ಕಂಡು ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಗ್ರಾಮಸ್ಥರಿಗೆ ಸಚಿವರು ಸಿಗದೆ ಪರದಾಡಿದ ಘಟನೆ ಕಾರವಾರದಲ್ಲಿ ಶುಕ್ರವಾರ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಶುಕ್ರವಾರ ಕಾರವಾರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿತ್ತು.

ಅದರಂತೆ ಕುಮಟಾ ತಾಲೂಕಿನ ಕುಗ್ರಾಮ ಮೇದಿನಿಯ ಜನರು ಮಾಹಿತಿ ಗಮನಿಸಿ ಒಟ್ಟಾಗಿ ಕಾರವಾರಕ್ಕೆ ತೆರಳಲು ನಿರ್ಧರಿಸಿದ್ದರು. ಬೆಳಗ್ಗೆ 5 ಗಂಟೆಗೆ ದಟ್ಟ ಅರಣ್ಯದಲ್ಲಿ ಕಾಲ್ನಡಿಗೆಯಲ್ಲಿ 8 ಕಿ.ಮೀ ನಡೆದು ಬಸ್ ಮೂಲಕ ಸುಮಾರು 20ಕ್ಕೂ ಹೆಚ್ಚು ಜನರು ನೂರಾರು ಕಿ.ಮೀ ದೂರದ ಜಿಲ್ಲಾ ಕೇಂದ್ರ ಕಾರವಾರವನ್ನು ತಲುಪಿದ್ದರು.

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯವೂ ವ್ಯರ್ಥ : ಆದರೆ ಕಾರವಾರದಲ್ಲಿ ಸಚಿವರ ಕಾರ್ಯಕ್ರಮ ರದ್ದುಪಡಿಸಲಾಗಿತ್ತಾದರೂ ಈ ಬಗ್ಗೆ ಸರಿಯಾದ ಮಾಹಿತಿ ಸಿಗದ ಕಾರಣ ಗ್ರಾಮಸ್ಥರು ಪರದಾಡುವಂತಾಯಿತು. ಸುಮಾರು 130 ಕಿ.ಮೀ ದೂರ ಪ್ರಯಾಣ ಬೆಳಸಿದರು ಸಚಿವರನ್ನು ಕಾಣಲಾಗದೆ ಕೊನೆಗೆ ಸಚಿವ ಕಚೇರಿಗೆ ತೆರಳಿ ಸಮಸ್ಯೆ ಬಗ್ಗೆ ವಿನಂತಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಗ್ರಾಮಕ್ಕೆ ಅಗತ್ಯವಿರುವ ರಸ್ತೆಗಾಗಿ ಮನವಿ ಮಾಡುತ್ತಿದ್ದೇವೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇಬ್ಬರು ಜಿಲ್ಲಾಧಿಕಾರಿ ಕೂಡ ಗ್ರಾಮದಲ್ಲಿ ಗ್ರಾಮ‌ವಾಸ್ತವ್ಯ ಮಾಡಿ ಸಮಸ್ಯೆ ಅರಿತಿದ್ದಾರೆ.

ಮೂರು ಕಿ.ಮೀ. ರಸ್ತೆಗಾಗಿ ಮನವಿ : ಆದರೆ ದೊಡ್ಡ ಮಟ್ಟದ ಅನುದಾನ ಬೇಕಾಗಿರುವುದರಿಂದ ಪ್ರಯತ್ನಿಸುವುದಾಗಿ ತಿಳಿಸುತ್ತಿದ್ದಾರೆ. ಆದರೆ ಗ್ರಾಮಕ್ಕೆ 7 ಕಿ.ಮೀ ರಸ್ತೆ ಅವಶ್ಯಕತೆ. ಆದರೆ ಅನುದಾನ ದೊಡ್ಡಮಟ್ಟದಲ್ಲಿ ಬೇಕು ಎಂದು ಪ್ರತಿ ಬಾರಿಯೂ ನಮ್ಮ‌ ಮನವಿ ತಿರಸ್ಕರಿಸಲಾಗುತ್ತಿದೆ. ಆದರೆ ನಮಗೆ 7 ಕಿ.ಮಿ ಬದಲಾಗಿ ತುರ್ತಾಗಿ ಅಗತ್ಯವಿರುವ ಕೇವಲ 3 ಕಿ.ಮೀ ರಸ್ತೆ ನಿರ್ಮಾಣ ಮಾಡಿಕೊಡಬೇಕಾಗಿದೆ.

ವಿದ್ಯುತ್​ ಸಮಸ್ಯೆ : ಇದಲ್ಲದೆ ಗ್ರಾಮಕ್ಕೆ ಅಗತ್ಯವಿದ್ದ ವಿದ್ಯುತ್ ಸಂಪರ್ಕವನ್ನು ಕಳೆದ ಕೆಲ ವರ್ಷದ ಹಿಂದೆ ಒದಗಿಸಲಾಗಿದೆಯಾದರೂ ಯಾರಿಗೂ ಪ್ರಯೋಜನವಾಗದ ಸ್ಥಿತಿ ನಿರ್ಮಾಣವಾಗಿದೆ. ದಟ್ಟ ಅಡವಿಯ ನಡುವೆ ಕಂಬಗಳನ್ನು ಹುಗಿದು ವಿದ್ಯುತ್ ಕೊಂಡೊಯ್ಯಲಾಗಿದೆ. ಆದರೆ ಪ್ರತಿ ಮಳೆಗಾಲದ ವೇಳೆಗೆ ವಿದ್ಯುತ್ ಕಂಬಗಳು ಧರೆಗುರುಳುತ್ತಿದ್ದು ವಿದ್ಯುತ್ ವರ್ಷದಲ್ಲಿ ಮೂರು ತಿಂಗಳು ಸಿಗದಂತಾಗಿದೆ. ಆದ ಕಾರಣ ಗ್ರಾಮಕ್ಕೆ ಅಗತ್ಯವಿರುವ ವಿದ್ಯುತ್ ಅನ್ನು ಅಂಡರ್ ಗ್ರೌಂಡ್ ಕೆಬಲ್ ಮೂಲಕ ಪೂರೈಸಬೇಕು.

ಇದರಿಂದ ಸರ್ಕಾರಕ್ಕೆ ಪ್ರತಿ ವರ್ಷ ನಿರ್ವಹಣೆ ವೆಚ್ಚ ಕಡಿಮೆಯಾಗುವುದಲ್ಲದೆ ಜನರಿಗೂ ನಿತ್ಯ ವಿದ್ಯುತ್ ಪೂರೈಕೆಯಾಗಲಿದೆ ಎಂಬುದು ಸೇರಿದಂತೆ ಹಲವು ಸಮಸ್ಯೆಗ ಬಗ್ಗೆ ಒತ್ತಾಯಿಸಿ ಮನವಿ ನೀಡಲು ಆಗಮಿಸಿದ್ದರು. ಆದರೆ ಸಚಿವರು ಕಾರ್ಯಕ್ರಮ ಬದಲಾಯಿಸಿ ತೆರಳಿದ ಕಾರಣ ಗ್ರಾಮಸ್ಥರಿಗೆ ಸಿಕ್ಕಿಲ್ಲ.‌ ಬಳಿಕ ಅವರ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿರುವ ಗ್ರಾಮಸ್ಥರು ಅಲ್ಲಿನ ಸಿಬ್ಬಂದಿ ಸಚಿವರ ಗಮನಕ್ಕೆ ತರುವ ಭರವಸೆ ನೀಡಿದ ಬಳಿಕ ವಾಪಸ್​ ಆಗಿದ್ದಾರೆ.

ಆಗ್ರಹ : ಆದರೆ 130 ಕಿ.ಮೀ ದೂರದಿಂದ ಶೂಕ್ರವಾರ ಮುಂಜಾನೆ 5 ಗಂಟೆಗೆ ಎದ್ದು ಬಂದರೂ ಸಚಿವರನ್ನು ಕಾಣದೆ ವಾಪಸ್​ ಆಗುತ್ತಿರುವುದು ಬೇಸರ ತಂದಿದೆ.‌ ಸಚಿವರು ನಮ್ಮ‌ ಸಮಸ್ಯೆಗೆ ಸ್ಪಂದಿಸಿ ಆದಷ್ಟು ಬೇಗ ರಸ್ತೆಗೆ ಅಗತ್ಯವಿರುವ ಅನುದಾನ ನೀಡಿ ಗ್ರಾಮದ ಬಹುದೊಡ್ಡ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರಾದ ಕೃಷ್ಣಾ ಗೌಡ ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ದಾವಣಗೆರೆ: ಪಕ್ಷದಿಂದ ಕಾಂಗ್ರೆಸ್​ ಮುಖಂಡನ ಉಚ್ಛಾಟನೆ; ಜಿಲ್ಲಾಧ್ಯಕ್ಷರ ವಿರುದ್ಧ ಮುಖಂಡನ ಆಕ್ರೋಶ!

ABOUT THE AUTHOR

...view details