ಕರ್ನಾಟಕ

karnataka

ಕೊನೆಗೂ ಸುರಂಗ ಮಾರ್ಗದಲ್ಲಿ ತಾತ್ಕಾಲಿಕ ಸಂಚಾರಕ್ಕೆ ಅವಕಾಶ: ಸುರಕ್ಷತೆಗೆ ಪ್ರಾಧಿಕಾರವೇ ಹೊಣೆ ಎಂದ ಜಿಲ್ಲಾಡಳಿತ!

By ETV Bharat Karnataka Team

Published : Oct 3, 2023, 7:04 AM IST

Updated : Oct 3, 2023, 11:26 AM IST

ಕಾರವಾರದಲ್ಲಿ ಕಳೆದ 3 ತಿಂಗಳಿನಿಂದ ಸುರಂಗ ಮಾರ್ಗವನ್ನು ಬಂದ್​ ಮಾಡಲಾಗಿತ್ತು, ಸಾರ್ವಜನಿಕರ ತೀವ್ರ ಹೋರಾಟದ ಬಳಿಕ ಜಿಲ್ಲಾಡಳಿತ ಸುರಂಗದಲ್ಲಿ ಸಂಚಾರಕ್ಕೆ ಅನುಮತಿ ನೀಡಿದೆ.

ಸುರಂಗದಲ್ಲಿ ತಾತ್ಕಾಲಿಕ ಸಂಚಾರಕ್ಕೆ ಅವಕಾಶ
ಸುರಂಗದಲ್ಲಿ ತಾತ್ಕಾಲಿಕ ಸಂಚಾರಕ್ಕೆ ಅವಕಾಶ

ಸುರಂಗ ಮಾರ್ಗ ತಾತ್ಕಾಲಿಕ ಓಪನ್​

ಕಾರವಾರ:ಕಳೆದ ಕೆಲ ದಿನಗಳಿಂದ ಆಕ್ಷೇಪ, ಹೋರಾಟ, ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದ್ದ ನಗರದ ಟನಲ್ ಮಾರ್ಗದಲ್ಲಿ ಕೊನೆಗೂ ಜಿಲ್ಲಾಡಳಿತ ಸೋಮವಾರ ಸಾರ್ವಜನಿಕ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಸುರಂಗ ಮಾರ್ಗದ ತಾಂತ್ರಿಕ ತಪಾಸಣೆಯನ್ನು ಅ.8 ರಂದು ನಿಗದಿಪಡಿಸಿರುವುದಾಗಿ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರವಾರದಿಂದ - ಬಿಣಗಾದವರೆಗೆ ನಿರ್ಮಿಸಲಾಗಿದ್ದ ಸುರಂಗ ಮಾರ್ಗದಲ್ಲಿ ಸುರಕ್ಷತೆ ದೃಷ್ಟಿಯಿಂದ ಸಂಚಾರವನ್ನು ನಿಷೇಧಿಸಿ ಮೂರನೇ ಸಂಸ್ಥೆಯಿಂದ ತಪಾಸಣೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸೂಚಿಸಲಾಗಿತ್ತು. ಕಾರ್ಯಭಾರದ ನಿಮಿತ್ತ ಎನ್‌ಎಚ್‌ಎಐದವರು ತಾಂತ್ರಿಕ ತಪಾಸಣೆಯನ್ನು ತಜ್ಞರಿಂದ ಸೋಮವಾರ ಮಾಡುವುದಾಗಿ ತಿಳಿಸಿದ್ದು ಅ.8ರಂದು ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಪಾಸಣೆ ಕಾರ್ಯದ ವಿಳಂಬದಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಹಾಗೂ ರಸ್ತೆ ಸಂಚಾರಿಗಳ ಅನುಕೂಲಕ್ಕಾಗಿ ಕಾರವಾರದಿಂದ ಬಿಣಗಾಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಕೋರಿಕೊಂಡ ಹಿನ್ನೆಲೆಯಲ್ಲಿ ನಿರ್ಬಂಧ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ.

ಅ. 8ರ ವರೆಗೆ ಸುರಂಗ 1 ಮತ್ತು 2ರಲ್ಲಿ ಉಂಟಾಗುವ ಯಾವುದೇ ಅನಾಹುತಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರೇ ಜವಾಬ್ದಾರರಾಗಿದ್ದು ಮತ್ತು ಅ. 8ರಂದು ಕೈಗೊಳ್ಳುವ ಜವಾಬ್ದಾರಿ ಯೋಜನಾ ನಿರ್ದೇಶಕರದ್ದಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಯಾವುದೇ ಪತ್ರ ವ್ಯವಹಾರ ನಡೆಸಲಾಗುವುದಿಲ್ಲ ಎನ್ನುವ ನಿಬಂಧನೆಯನ್ನು ಹಾಕಿ ಜಿಲ್ಲಾಡಳಿತ ಆದೇಶ ಹೊರಡಿಸಿ, ಟನಲ್ ಸಂಚಾರ ಆರಂಭಿಸಿದೆ.

ಮಳೆಗಾಲದಲ್ಲಿ ಟನಲ್ ಒಳಭಾಗದಲ್ಲಿ ಮಳೆ ನೀರುವ ಸೋರಿಕೆ ಹಾಗೂ ಇನ್ನಿತರ ಕಾರಣಗಳನ್ನು ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಅವರು ಸಾರ್ವಜನಿಕ ಸುರಕ್ಷತೆಯ ಕಾರಣವನ್ನು ನೀಡಿ ಸಂಚಾರವನ್ನು ಬಂದ್ ಮಾಡುವಂತೆ ಸೂಚಿಸಿದ್ದರು. ಅಲ್ಲದೇ ಪುನಃ ಆರಂಭಿಸಲು ಎನ್‌ಎಚ್‌ಎಐ ಟನಲ್ ಸುರಕ್ಷತಾ ಪ್ರಮಾಣ ಪತ್ರ ನೀಡುವಂತೆ ಸೂಚನೆ ನೀಡಿದ್ದರು. ಆದರೆ, ಸುರಕ್ಷತಾ ಪ್ರಮಾಣ ಪತ್ರದ ಗೊಂದಲದಿಂದಾಗಿ ಟನಲ್ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸುವ ವಿಷಯದ ಬಗ್ಗೆ ಜನರಿಂದ ಆಕ್ಷೇಪ ವ್ಯಕ್ತವಾಗಿದ್ದವು.

ಆದರೆ, ಕಳೆದ ಕೆಲ ದಿನಗಳಿಂದ ಟನಲ್ ತೆರವು ಮಾಡುವಂತೆ ಒತ್ತಾಯಗಳು ಕೇಳಿ ಬಂದಿತ್ತು. ಅಲ್ಲದೇ ಇದು ರಾಜಕೀಯವಾಗಿ ಆರೋಪ ಪ್ರತ್ಯಾರೋಪಕ್ಕೂ ಕಾರಣವಾಗಿತ್ತು. ಸೆ.29ರಂದು ಎಂಎಲ್ಸಿ ಗಣಪತಿ ಉಳ್ವೇಕರ್ ಅವರ ನೇತೃತ್ವದಲ್ಲಿ ಟನಲ್ ತೆರೆಯುವಂತೆ ದೊಡ್ಡ ಹೋರಾಟ ನಡೆಸಿದಾಗಿ ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ತೆರಳಿ ಎರಡು ದಿನ ಅವಕಾಶ ಕಲ್ಪಿಸುವಂತೆ ಒತ್ತಾಯ ಮಾಡಿದ್ದರು.

ಆದರೆ, ಇಂದು ಎನ್‌ಎಚ್‌ಎಐ ಅಧಿಕಾರಿಗಳು ಕಾರ್ಯಭಾರದ ನಿಮಿತ್ತ ಬಾರದ ಕಾರಣ ಅ.8 ಕ್ಕೆ ಟನಲ್ ತಾಂತ್ರಿಕ ತಪಾಸಣೆ ಮುಂದೂಡಲಾಗಿದೆ.
ಸದ್ಯ ಟನಲ್‌ಗೆ ಅಡ್ಡಲಾಗಿ ಹಾಕಲಾಗಿದ್ದ ಕಲ್ಲುಗಳನ್ನು ಐಆರ್‌ಬಿಯವರು ತೆರವುಗೊಳಿಸಿದ್ದರು. ಬೆಳಗ್ಗಿನ ಸಮಯದಲ್ಲಿ ಅರ್ಧ ಭಾಗದಷ್ಟು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸೋಮವಾರ ಸಂಜೆ ವೇಳೆ ಜಿಲ್ಲಾಡಳಿತ ಟನಲ್ ಮೂಲಕ ಸಂಚಾರ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿದ್ದು ಸಂಚಾರಕ್ಕೆ ಮುಕ್ತವಾಗಿದೆ.

ಇದನ್ನೂ ಓದಿ:ಕಾರವಾರ.. ಸುರಂಗ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆ

Last Updated :Oct 3, 2023, 11:26 AM IST

ABOUT THE AUTHOR

...view details