ಕರ್ನಾಟಕ

karnataka

ಶಿರಸಿ: ಶಾಲ್ಮಲಾ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಸಾವು

By ETV Bharat Karnataka Team

Published : Dec 17, 2023, 8:16 PM IST

Five people died in Shalmala river: ಶಾಲ್ಮಲಾ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಪ್ರಾಣ ಕಳೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿ ನಡೆದಿದೆ.

five-members-of-same-family-drowned-in-shalmala-river-near-sirsi
ಶಿರಸಿ: ಶಾಲ್ಮಲಾ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಸಾವು

ಶಿರಸಿ:ರಜೆಯ ದಿನ ಕಳೆಯಲು ತೆರಳಿದ್ದ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶಾಲ್ಮಲಾ ನದಿಯಲ್ಲಿ ಇಂದು ನಡೆದಿದೆ. ಇತ್ತೀಚೆಗೆ ಶಿರಸಿಯ ಬಂಡಲದಲ್ಲಿ ಸಂಭವಿಸಿದ್ದ ಬಸ್​ ಮತ್ತು ಕಾರು ನಡುವಿನ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಜರುಗಿದೆ.‌

ಶಿರಸಿಯ ಭೈರುಂಭೆ ಸಮೀಪ ಶಾಲ್ಮಲಾ ನದಿಯಲ್ಲಿ ಘಟನೆ ಸಂಭವಿಸಿದೆ.‌ ಮೃತರೆಲ್ಲರೂ ಶಿರಸಿ ನಗರದವರು. ರಾಮನಬೈಲಿನ ಮೌಲಾನಾ ಅಹಮ್ಮದ್ ಸಲೀಂ ಕಲೀಲ್ (44), ನಾದಿಯಾ ನೂರ್ ಅಹಮದ್ ಶೇಖ್ (20), ಕಸ್ತೂರಬಾ ನಗರದ ಮಿಸ್ಬಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್ (22) ಹಾಗೂ ಯುವಕ ಉಮರ್ ಸಿದ್ದಿಕ್ (23) ಮೃತರು. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ನಡೆಸಿದ್ದು, ಸಂಜೆ ವೇಳೆಗೆ ಮೂವರ ಮೃತದೇಹ ಪತ್ತೆ ಮಾಡಲಾಗಿದೆ. ಇನ್ನುಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಆಗಿದ್ದೇನು?:ಶಾಲ್ಮಲಾ ನದಿ ತೀರವು ಪ್ರವಾಸಿ ತಾಣವಾಗಿದ್ದು, ರಜೆಯ ದಿನದಂದು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ, ಇಲ್ಲಿಯೇ ಅಡುಗೆ ತಯಾರಿಸಿ, ಊಟ ಮಾಡಿ ಸಂಜೆಯವರೆಗೂ ಇದ್ದು ಹೋಗುತ್ತಾರೆ. ನದಿಯಲ್ಲಿ ಘಟನೆ ನಡೆದ ಸ್ಥಳವಾದ ಭೂತನಗುಂಡಿ ಆಳವಾಗಿದ್ದು, ಇಲ್ಲಿಯ ಕಲ್ಲುಬಂಡೆಗಳು ಜಾರುವುದರಿಂದ ನೀರಿಗಿಳಿಯದಂತೆ ಸೂಚನಾ ಫಲಕವನ್ನೂ ಅಳವಡಿಸಲಾಗಿದೆ.

ರಾಮನಬೈಲು ಮತ್ತು ಕಸ್ತೂರಬಾ ನಗರದ ಒಂದೇ ಕುಟುಂಬದ ಸುಮಾರು 25 ಜನರು ಭಾನುವಾರ ಶಾಲ್ಮಲಾ ನದಿಯ ಭೂತನಗುಂಡಿ ಬಳಿ ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಅವರೊಂದಿಗೆ ಬಂದಿದ್ದ ಮಗುವೊಂದು ಆಟ ಆಡುತ್ತ ನದಿ ನೀರಿಗೆ ಬಿದ್ದಿದೆ. ತಕ್ಷಣವೇ ನೀರಿಗೆ ಜಿಗಿದ ಮೌಲಾನಾ ಅಹಮ್ಮದ್, ಮಗುವನ್ನು ನೀರಿನಿಂದ ಎತ್ತಿಕೊಂಡು, ಅದರ ತಾಯಿ ನಾದಿಯಾ ಅವರಿಗೆ ನೀಡಿದ್ದಾರೆ. ಆದರೆ, ಮಗುವನ್ನು ದಡಕ್ಕೆ ಬಿಟ್ಟು ನೀರಿನಿಂದ ಮೇಲೆ ಬರುವಾಗ ಕಾಲು ಜಾರಿ ಇಬ್ಬರೂ ಮುಳುಗಿದ್ದಾರೆ. ಅವರನ್ನು ರಕ್ಷಿಸುವ ಸಲುವಾಗಿ ನೀರಿಗೆ ಜಿಗಿದ ಮತ್ತೆ ಮೂವರೂ ಸಹ ನೀರಿನಿಂದ ಮೇಲೇಳಲಾಗದೇ ಮುಳುಗಿ ಸಾವಿಗೀಡಾಗಿದ್ದಾರೆ. ಮಗು ಸುರಕ್ಷಿತವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಜೊತೆಗೆ ಸ್ಥಳೀಯರೂ ಆಗಮಿಸಿ ಮೃತದೇಹಗಳ ಶೋಧ ನಡೆಸಿದ್ದಾರೆ. ಶಿರಸಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರು: ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು, ಆಂತರಿಕ ರಕ್ತಸ್ರಾವದಿಂದ ಮಗು ಸಾವು

ABOUT THE AUTHOR

...view details