ಕರ್ನಾಟಕ

karnataka

ಶೇಂಗಾ ಬೀಜ ಗಂಟಲಲ್ಲಿ ಸಿಲುಕಿ ಮಗು ಸಾವು, ದೇವರ ಬಳಿ ಗೋಳಾಡಿದ ಅಜ್ಜಿ

By

Published : May 18, 2021, 11:56 PM IST

ಮಗುವನ್ನು ಕರೆದುಕೊಂಡು ಬಂದಾಗಲೇ ಸ್ಪಂದಿಸುತ್ತಿರಲಿಲ್ಲ. ಶೇಂಗಾ ಬೀಜವು ಶ್ವಾಸಕೋಶದ ನಾಳಕ್ಕೆ ಅಡ್ಡ ನಿಂತಿರುವ ಸಾಧ್ಯತೆಗಳಿವೆ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

child-dies-as-peanut-stuck-in-throat
ಶೇಂಗಾ ಬೀಜ ಗಂಟಲಲ್ಲಿ ಸಿಲುಕಿ ಮಗು ಸಾವು, ದೇವರ ಬಳಿ ಗೋಳಾಡಿದ ಅಜ್ಜಿ

ಕಾರವಾರ: ಗಂಟಲಿನಲ್ಲಿ ಶೇಂಗಾ ಬೀಜ ಸಿಕ್ಕಿ ಅಸುನೀಗಿದ್ದ ಮಗುವೊಂದನ್ನು ದೇವರ ಮುಂದಿಟ್ಟು ಬದುಕಿಸಿಕೊಡುವಂತೆ ಅಜ್ಜಿಯೋರ್ವಳು ಗೋಗರೆದ ಹೃದಯವಿದ್ರಾವಕ ಘಟನೆ ಯಲ್ಲಾಪುರ ಪಟ್ಟಣದ ಗಣಪತಿ ಗಲ್ಲಿಯಲ್ಲಿ ನಡೆದಿದೆ.

ದೇವರ ಮುಂದೆ ಗೋಳಾಡಿದ ಅಜ್ಜಿ

ಗಣಪತಿ ಗಲ್ಲಿಯ ರಾಮನಾಥ ಆಚಾರಿ ಎಂಬುವವರ ಎರಡೂವರೆ ವರ್ಷದ ಸಾತ್ವಿಕ್ ಮನೆಯಲ್ಲಿ ಮಂಗಳವಾರ ಸಂಜೆ ಶೇಂಗಾ ಬೀಜಗಳನ್ನು ತಿನ್ನುತ್ತಿದ್ದಾಗ ಆಕಸ್ಮಿಕವಾಗಿ ಅದು ಗಂಟಲಲ್ಲಿ ಸಿಲುಕಿಕೊಂಡಿತು. ಇದರಿಂದ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಮನೆಯವರು ಏನೇನೋ ಪ್ರಯತ್ನ ನಡೆಸಿ ಮಗವಿನ ಗಂಟಲಿನಿಂದ ಎರಡು ಶೇಂಗಾ ಬೀಜಗಳನ್ನು ಹೊರ ತೆಗೆದಿದ್ದರು.

ಆದರೂ ಉಸಿರಾಟ ಸುಧಾರಿಸದ ಕಾರಣ ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದರು.ಅಲ್ಲಿನ ವೈದ್ಯರು ಇನ್ನೂ ಒಂದು ಶೇಂಗಾ ಬೀಜವನ್ನು ಹೊರತೆಗೆದರು. ಆದರೆ, ಅಷ್ಟರಲ್ಲಿ ಮಗುವಿನ ಉಸಿರು ನಿಂತಿತ್ತು. ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸುತ್ತಿದ್ದಂತೆ ತಾಯಿ ಮತ್ತು ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ:ಪಂಜಾಬ್; ಶೇ 100ರಷ್ಟು ಲಸಿಕಾಕರಣ ಸಾಧಿಸಿದ ಗ್ರಾಮಕ್ಕೆ 10 ಲಕ್ಷ ರೂ. ವಿಶೇಷ ಅನುದಾನ

ಅಜ್ಜಿ ಮೊಮ್ಮಗನ ಮೃತದೇಹವನ್ನು ಸಮೀಪದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿಯ ಆವರಣದಲ್ಲಿರುವ ಗಣಪತಿ ಮಂದಿರಕ್ಕೆ ತೆಗೆದುಕೊಂಡು ಹೋದರು. ಗರ್ಭಗುಡಿಯೆದುರು ಮಲಗಿಸಿದ ಅಜ್ಜಿ, ದೇವಸ್ಥಾನದ ಘಂಟೆಯನ್ನು ಬಾರಿಸುತ್ತಾ, ಮಗುವನ್ನು ಬದುಕಿಸು ಎಂದು ಮೊರೆ ಹೋದರು.

ಈ ಸನ್ನಿವೇಶಗಳನ್ನು ಅಸಹಾಯಕರಾಗಿ ನೋಡುತ್ತಿದ್ದವರೂ ಭಾವುಕರಾಗಿ ಅವರ ಕಣ್ಣುಗಳಲ್ಲಿ ಹನಿಗೂಡಿದವು. ನಂತರ ಅಜ್ಜಿಯನ್ನು ಸಮಾಧಾನ ಪಡಿಸಿ ಅಲ್ಲಿಂದ ಕರೆದುಕೊಂಡು ಹೋಗಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಾರಿ ಆಸ್ಪತ್ರೆಯ ವೈದ್ಯರು, ಮಗುವನ್ನು ಕರೆದುಕೊಂಡು ಬಂದಾಗಲೇ ಸ್ಪಂದಿಸುತ್ತಿರಲಿಲ್ಲ. ಶೇಂಗಾ ಬೀಜವು ಶ್ವಾಸಕೋಶದ ನಾಳಕ್ಕೆ ಅಡ್ಡ ನಿಂತಿರುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ABOUT THE AUTHOR

...view details