ಕರ್ನಾಟಕ

karnataka

ಪ್ರಗತಿಯ ರಿಪೋರ್ಟ್ ಕಾರ್ಡ್‌ನೊಂದಿಗೆ ಬಿಜೆಪಿ ಚುನಾವಣೆ ಎದುರಿಸಲಿದೆ: ಜೆಪಿ ನಡ್ಡಾ

By

Published : Jan 5, 2023, 6:32 PM IST

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜ್ಯ ಪ್ರವಾಸ - ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ - ಅಭಿವೃದ್ಧಿ ರಿಪೋರ್ಟ್​ ಕಾರ್ಡ್​ನೊಂದಿಗೆ ವಿಧಾನಸಭೆ ಚುನಾವಣೆ - ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಭೆ

bjp-will-face-karnataka-polls-with-report-card-says-jp-nadda
ಪ್ರಗತಿಯ ರಿಪೋರ್ಟ್ ಕಾರ್ಡ್‌ನೊಂದಿಗೆ ಬಿಜೆಪಿ ಚುನಾವಣೆ ಎದುರಿಸಲಿದೆ : ಜೆಪಿ ನಡ್ಡಾ

ತುಮಕೂರು :ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದು ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ಈ ವೇಳೆ ಶ್ರೀ ಶಿವಕುಮಾರ ಸ್ವಾಮೀಜಿಯ ಗದ್ದುಗೆ ದರ್ಶನ ಪಡೆದ ಅವರು ಗದ್ದುಗೆ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಮಠದ ವತಿಯಿಂದ ಅವರ ಹಣೆಗೆ ವಿಭೂತಿ ಹಚ್ಚಿ ಹೂವಿನ ಆಹಾರವನ್ನು ಹಾಕಿ ಆಶೀರ್ವದಿಸಲಾಯಿತು. ಬಳಿಕ ಮಠದ ಸಾವಿರಾರು ಮಕ್ಕಳೊಂದಿಗೆ ನಿಂತು ಫೋಟೋ ತೆಗೆಸಿಕೊಂಡರು.

ಅಭಿವೃದ್ಧಿ ರಿಪೋರ್ಟ್​ ಕಾರ್ಡ್​ನೊಂದಿಗೆ ಚುನಾವಣೆ : ಬಳಿಕ ನಗರದ ವಿನಾಯಕ ಕಲ್ಯಾಣ ಮಂಟಪದಲ್ಲಿ ತುಮಕೂರು ಹಾಗೂ ಮಧುಗಿರಿ ಜಿಲ್ಲೆಯ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಭಾಗವಹಿಸಿದರು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದಲ್ಲಿ ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಸೃಷ್ಟಿಸಿದ್ದಾರೆ. ಹಾಗಾಗಿ ಕರ್ನಾಟಕ ಚುನಾವಣೆಯನ್ನು ಅಭಿವೃದ್ಧಿಯ ರಿಪೋರ್ಟ್ ಕಾರ್ಡ್‌ನೊಂದಿಗೆ ಎದುರಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್​​ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್​ಗೆ ಇನ್ನೊಂದು ಹೆಸರು ಭ್ರಷ್ಟಾಚಾರ, ಕಮಿಷನ್ ಮತ್ತು ಜಾತೀಯತೆ ಎಂದರು. ಇಂತಹವರನ್ನು ಮನೆಯಲ್ಲಿ ಕೂರಿಸಬೇಕು. ಬಿಜೆಪಿ ಎಲ್ಲರನ್ನೂ ಒಳಗೊಳ್ಳುವ ರಾಜಕೀಯದ ಸಂದೇಶವನ್ನು ಪಾಲಿಸುವಂತೆ ಕಾರ್ಯಕರ್ತರಲ್ಲಿ ಕೇಳಿಕೊಂಡರು.

ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಭೆ : ತಳಮಟ್ಟದಲ್ಲಿ ಕೆಲಸ ಮಾಡುವ ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷ ಮತ್ತು ಸರ್ಕಾರದ ಸಂದೇಶವನ್ನು ಜನರ ಬಳಿಗೆ ಕೊಂಡೊಯ್ಯಲು ಈ ಸಭೆಗೆ ಬಂದಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲ ಭಾಗಗಳಿಗೂ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ನೇರವಾಗಿ ಮಾತನಾಡುತ್ತೇನೆ ಎಂದರು.

ಸಮಾಜವನ್ನು ಒಗ್ಗೂಡಿಸಲು ಮತ್ತು ಜಾತಿವಾದವನ್ನು ಕೊನೆಗೊಳಿಸಲು ಶಕ್ತಿ ಕೇಂದ್ರಗಳು ಮತ್ತು ಬೂತ್ ಮಟ್ಟದಲ್ಲಿ "ಟಿಫಿನ್ ಮೀಟಿಂಗ್​" ಆಯೋಜಿಸುವಂತೆ ಪಕ್ಷದ ಕಾರ್ಯಕರ್ತರನ್ನು ಕೇಳಿಕೊಂಡರು. ಈ ಮೂಲಕ ಒಗ್ಗಟ್ಟಿನ ಸಂದೇಶ ಮತ್ತು ಪಕ್ಷದ ಸಿದ್ಧಾಂತವನ್ನು ಜನರಿಗೆ ತಲುಪಿಸಿ ಎಂದರು.

ಸಬ್ಕಾ ಸಾಥ್, ಸಬ್ಕಾ ವಿಕಾಸ್ :ಇನ್ನು ಕಾಂಗ್ರೆಸ್ ಪಕ್ಷವು ವೋಟ್​ ಬ್ಯಾಂಕ್ ರಾಜಕಾರಣ, ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿದೆ. ಅಲ್ಲದೇ ಜಾತಿವಾದ, ವಂಶಾವಳಿ ಮತ್ತು ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿದೆ. ಸದ್ಯ ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡಂದಿನಿಂದ ಜಾತಿ ರಾಜಕಾರಣ ಕೊನೆಗೊಂಡಿತು. ಈಗ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂಬ ಮಂತ್ರದೊಂದಿಗೆ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸುತ್ತಿದ್ದಾರೆ ಎಂದರು.

ಅಭಿವೃದ್ಧಿಯ ಅಜೆಂಡಾದೊಂದಿಗೆ ಪಕ್ಷದ ಬೇರುಗಳನ್ನು ಬಲಪಡಿಸಿ ಕರ್ನಾಟಕವನ್ನು ಬಲಪಡಿಸಬೇಕು. ರಾಜ್ಯವನ್ನು ಬಲಪಡಿಸಬೇಕಾದರೆ ರಾಜ್ಯದಲ್ಲಿ ಬಿಜೆಪಿ ಸಿದ್ಧಾಂತವನ್ನು ಬಲಪಡಿಸಬೇಕು ಎಂದು ಹೇಳಿದರು. ಯಾವುದೇ ಜಾತಿ ಭೇದ ಭಾವ ಇಲ್ಲದೇ ಎಲ್ಲರನ್ನು ಒಗ್ಗೂಡಿಸಿ ಪಕ್ಷವನ್ನು ಬಲಪಡಿಸುವಂತೆ ಕಾರ್ಯಕರ್ತರಿಗೆ ಕರೆ ಕೊಟ್ಟರು.

ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ನಡ್ಡಾ : ಇನ್ನು ಸಿಎಂ ಬೊಮ್ಮಾಯಿ ಕುರಿತ ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಇಂತಹ ಹೇಳಿಕೆಯಿಂದ ಸಿದ್ದರಾಮಯ್ಯ ಅವರು ಕರ್ನಾಟಕದ ರಾಜಕೀಯದ ಗುಣಮಟ್ಟವನ್ನು ಕೆಳಕ್ಕೆ ಇಳಿಸಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದೆ. ಇಂತಹ ಹೇಳಿಕೆಗಳು ನಾಯಕನ ಗುಣವನ್ನು ಪ್ರದರ್ಶಿಸುತ್ತದೆ ಎಂದು ಟೀಕಿಸಿದರು.

ಬಿಜೆಪಿ ತನ್ನ ರಾಜಕೀಯ ವಿರೋಧಿಗಳನ್ನು ಗೌರವಿಸುತ್ತದೆ. ಕಾಂಗ್ರೆಸ್​ ನಾಯಕರು ಇತರರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅವರಿಗೆ ತಮ್ಮ ಹೈಕಮಾಂಡ್ ಅನ್ನು ಭೇಟಿ ಮಾಡಲು ಅವಕಾಶವಿಲ್ಲ ಎಂದು ವಾಗ್ದಾಳಿ ನಡೆಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷದ ಕರ್ನಾಟಕ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಸಚಿವರಾದ ಜೆ ಸಿ ಮಾಧುಸ್ವಾಮಿ, ಬಿ ಸಿ ನಾಗೇಶ್, ಆರಗ ಜ್ಞಾನೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ :ಮುಂದಿನ ಫೆಬ್ರವರಿ ಅಂತ್ಯಕ್ಕೆ ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆ: ಕೇಂದ್ರ ಸಚಿವ ನಿತಿನ್​ ಗಡ್ಕರಿ

ABOUT THE AUTHOR

...view details