ಕರ್ನಾಟಕ

karnataka

ರಾಜ್ಯದಲ್ಲಿ ಪ್ರತ್ಯೇಕ ಅಪಘಾತ: ನಾಲ್ವರು ಸಾವು.. ಬೆಂಗಳೂರಲ್ಲಿ ಕಾರು ಜಖಂಗೊಳಿಸಿದ ರೌಡಿಶೀಟರ್

By

Published : Feb 7, 2023, 10:04 AM IST

ರಾಜ್ಯದಲ್ಲಿ ಒಂದೇ ದಿನ ಬೇರೆ ಬೇರೆ ಕಡೆ ಅಪಘಾತ ನಡೆದಿದ್ದು 4 ಜನ ಸಾವನ್ನಪ್ಪಿದ್ದಾರೆ. ಹಾಗೆ ಬೆಂಗಳೂರಿನಲ್ಲಿ ಕುಖ್ಯಾತ ರೌಡಿ ಶೀಟರ್​ ಮತ್ತೆ ತನ್ನ ಚಾಳಿ ಶುರು ಮಾಡಿದ್ದು, ದುಬಾರಿ ಬೆಲೆಯ ಕಾರನ್ನು ಜಖಂಗೊಳಿಸಿದ್ದಾನೆ.

A separate accident in the state
ರಾಜ್ಯದಲ್ಲಿ ಪ್ರತ್ಯೇಕ ಅಪಘಾತ

ತುಮಕೂರು:ಬೈಕ್ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿ ನಡೆದಿದೆ. ಮೃತರನ್ನು ಯಶಸ್ವಿನಿ, ಅಭಿಲಾಶ್ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿದ್ದ ಈ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಇಬ್ಬರು ಕಾಲೇಜು ಮುಗಿಸಿ ಬೈಕ್ ನ‌ಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಗುಬ್ಬಿಯಲ್ಲಿರುವ ಸಿಐಟಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ‘ಇ’ ಅಂಡ್ ‘ಸಿ’ ಬ್ರಾಂಚ್ ನ ದ್ವಿತೀಯ ವರ್ಷದ ಇಂಜಿನಿಯರಿಂಗ್​ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸದ್ಯ ಈ ಸಂಬಂಧ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನಲ್ಲಿ ಪೊಲೀಸ್ ಠಾಣೆ ಮುಂಭಾಗವೇ ಅಪಘಾತ:ನಂಜನಗೂಡು ಟ್ರಾಫಿಕ್ ಪೊಲೀಸ್ ಠಾಣೆ ಮುಂಭಾಗವೇ ಪೊಲೀಸ್ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ಸಮಯದಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಬಳಿ ನಿನ್ನೆ ರಾತ್ರಿ 9 ಗಂಟೆಯ ಸಮಯದಲ್ಲಿ, ನಗರದ ಪೋಲಿಸ್ ಸ್ಟೇಷನ್ ಎದುರೇ ಪೋಲಿಸ್ ಜೀಪ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ತಾಲೂಕಿನ ಸಿಂದುವಳ್ಳಿ ಗ್ರಾಮದ ಯುವಕ ಅಭಿ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈತ ನಂಜನಗೂಡಿನಿಂದ ಗುಂಡ್ಲುಪೇಟೆ- ಊಟಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಂಧುವಳ್ಳಿ ಗ್ರಾಮಕ್ಕೆ ತನ್ನ ಪಲ್ಸರ್ ಬೈಕ್ KA-09 HM2984 ರಲ್ಲಿ ತೆರಳುವ ವೇಳೆ ನಂಜನಗೂಡು ಟ್ರಾಫಿಕ್ ಪೊಲೀಸ್ ಠಾಣೆ ಒಳಗಿನಿಂದ ಬಂದ ಪೊಲೀಸ್ ಜೀಪ್ ಡಿಕ್ಕಿ ಹೊಡೆದಿದೆ. ಇದರಿಂದ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಪೊಲೀಸ್ ಜೀಪ್ ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಈ ಸ್ಥಳದಲ್ಲಿ ಕೆ.ಎಚ್.ಬಿ ಕಾಲೋನಿಗೆ ತಿರುಗುವ ಮಾರ್ಗ ಇದ್ದು, ಸಾಕಷ್ಟು ಅವಘಡಗಳು ಉಂಟಾಗಿದೆ. ಈ ಜಾಗದಲ್ಲಿ ಬ್ಯಾರಿಕೇಡ್ ಅಥವಾ ಇನ್ನಿತರೆ ಕ್ರಮಗಳನ್ನು ಪೊಲೀಸರು ಕೈಗೊಳ್ಳದಿರುವುದೆ ಅಪಘಾತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾನಿಗೊಳಗಾದ ಥಾರ್​

ಬೆಂಗಳೂರಿನಲ್ಲಿ ಮತ್ತೆ ರೌಡಿಶೀಟರ್ ಅಟ್ಟಹಾಸ:ಮಾಮೂಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಉದ್ಯಮಿಯ ಕಾರನ್ನು ರೌಡಿಶೀಟರ್​ ಕೊಂಡೊಯ್ದು ಜಖಂಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಆತನ ವಿರುದ್ಧ 20ಕ್ಕೂ ಅಧಿಕ ಪ್ರಕರಣಗಳಿವೆ. ಎರಡು ವರ್ಷಗಳ ಹಿಂದೆ ಪೊಲೀಸರಿಂದ ಗುಂಡೇಟು ತಿಂದು ಗೂಂಡಾ ಕಾಯ್ದೆಯಡಿ ಜೈಲುಪಾಲಾದವನು ಈಗ ಮತ್ತೆ ತನ್ನ ಹಳೆ ಚಾಳಿ ಮುಂದುವರೆಸಿದ್ದಾನೆ.

ಕುಖ್ಯಾತ ರೌಡಿಶೀಟರ್ ಅನೀಸ್ ಅಹಮದ್ ಮತ್ತೊಮ್ಮೆ ತನ್ನ ಕೃತ್ಯಗಳಿಂದ ಸುದ್ದಿ ಆಗಿದ್ದಾನೆ. ಯಲಹಂಕ - ಕೋಗಿಲು‌ ಭಾಗದಲ್ಲಿ ಹಫ್ತಾ ವಸೂಲಿ ದಂಧೆಗಿಳಿದಿರುವ ಅನೀಸ್ ಅಹಮದ್ ಮಾಮೂಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಉದ್ಯಮಿ ಸೈಯದ್ ಇಮ್ತಿಯಾಜ್ ಎಂಬುವವರ ದುಬಾರಿ ಬೆಲೆಯ ಕಾರನ್ನು ಕೊಂಡೊಯ್ದು ಜಖಂಗೊಳಿಸಿ ಪರಾರಿಯಾಗಿರುವ ಆರೋಪ ಕೇಳಿ ಬಂದಿದೆ.

ಬೆಳ್ಳಹಳ್ಳಿ ಬಳಿ ತಮ್ಮದೇ ಟ್ರಾನ್ಸ್​ಪೋರ್ಟ್ ಉದ್ಯಮ ಹೊಂದಿರುವ ಇಮ್ತಿಯಾಜ್ ಬಳಿ ಜನವರಿ 23ರಂದು ರಾತ್ರಿ ವೇಳೆ ಬಂದ ಅನೀಸ್ ಅಹಮದ್ ಹಾಗೂ ಮೆಹಬೂಬ್ ತಮಗೆ ಮಾಮೂಲಿ ನೀಡುವಂತೆ ಧಮ್ಕಿ ಹಾಕಿದ್ದಾರೆ. ಇಮ್ತಿಯಾಜ್ ಹಣ ಕೊಡಲು ನಿರಾಕರಿಸಿದಾಗ, ಬೆದರಿಸಿ ಅವರ ಮಹೀಂದ್ರಾ ಥಾರ್ ಕಾರನ್ನು ಪಡೆದು ಎಸ್ಕೇಪ್ ಆಗಿದ್ದಾರೆ‌. ಬೇಸತ್ತ ಇಮ್ತಿಯಾಜ್ ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಇಮ್ತಿಯಾಜ್​ಗೆ ಕರೆ ಮಾಡಿದ್ದ ಅನೀಸ್ ಅಹಮದ್ 'ಎಫ್ಐಆರ್ ಕಾಪಿ‌ ಜೊತೆ 5 ಲಕ್ಷ ಹಣ ತಂದರೆ ಮಾತ್ರ ಕಾರನ್ನು ವಾಪಸ್ ಕೊಡುವುದಾಗಿ' ಧಮ್ಕಿ ಹಾಕಿದ್ದಾನಂತೆ.

ಯಾವಾಗ ಇಮ್ತಿಯಾಜ್ ಹಣ ನೀಡುವುದಿಲ್ಲ ಎಂದು ಗೊತ್ತಯ್ತೋ, ಕಾರಿನ ಗಾಜು ಒಡೆದು, ಜಖಂಗೊಳಿಸಿ ಬಾಣಸವಾಡಿ ಬಳಿ ಬಿಟ್ಟು ಅನೀಸ್ ಪರಾರಿಯಾಗಿದ್ದಾನೆ. ಸದ್ಯ ಕಾರನ್ನು ವಶಕ್ಕೆ ಪಡೆದಿರುವ ಬಾಗಲೂರು‌ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.

ಕೆ.ಜಿ.ಹಳ್ಳಿಯ ನಟೋರಿಯಸ್ ರೌಡಿಶೀಟರ್ ಆಗಿರುವ ಅನೀಸ್ ಅಹಮದ್ ವಿರುದ್ಧ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ 20ಕ್ಕೂ ಅಧಿಕ‌ ಪ್ರಕರಣಗಳಿವೆ. 2020 ರಲ್ಲಿ ವಶಕ್ಕೆ ಪಡೆಯಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದ ಕೆ.ಜಿ.ಹಳ್ಳಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಇದೀಗ ಮತ್ತೆ ತನ್ನ ರೌಡೀಸಂ ಶುರು ಮಾಡಿದ್ದು, ಮತ್ತೊಮ್ಮೆ ಪೊಲೀಸರ ಅತಿಥಿಯಾಗಲಿದ್ದಾನೆ.

ವಿಜಯನಗರದಲ್ಲಿ ಭಕ್ತ ನೀರಿನಲ್ಲಿ ಮುಳುಗಿ ಸಾವು;ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಜಾತ್ರೆಗೆ ಆಗಮಿಸಿದ್ದ ಭಕ್ತನೊಬ್ಬ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕುಬ್ಬಾಳ ಗ್ರಾಮದ ಶರಣಪ್ಪ (25) ಮೃತ ವ್ಯಕ್ತಿ. ನದಿಯಲ್ಲಿ ಸ್ನಾನ ಮಾಡಲು ಹೋದಾಗ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾನೆ. ಶವಕ್ಕಾಗಿ ಶೋಧ ಕಾರ್ಯ ನಡೆದಿದೆ. ಈ ಕುರಿತು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಂಗಳೂರು ಜ್ಯುವೆಲ್ಲರಿ ಸಿಬ್ಬಂದಿ ಕೊಲೆ ಹಂತಕನ ಫೋಟೋ ರಿಲೀಸ್: ಪತ್ತೆಗೆ ಸಹಕಾರ ಕೋರಿದ ಪೊಲೀಸರು

ABOUT THE AUTHOR

...view details