ಕರ್ನಾಟಕ

karnataka

ಶಿವಮೊಗ್ಗ: ಮರಗಳ ಬುಡಕ್ಕೆ ಡಾಂಬರೀಕರಣ, ಸಾರ್ವಜನಿಕರಿಂದ ಆಕ್ರೋಶ

By ETV Bharat Karnataka Team

Published : Jan 9, 2024, 8:44 PM IST

Updated : Jan 9, 2024, 10:25 PM IST

ರಾಷ್ಟ್ರೀಯ ಹೆದ್ದಾರಿ 776 ಸಿ ರಸ್ತೆಯಲ್ಲಿ ಗುತ್ತಿಗೆದಾರರು ಮರಗಳ ಬುಡಕ್ಕೆ ಡಾಂಬರೀಕರಣ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Etv Bharat
Etv Bharat

ಪರಿಸರ ಪ್ರೇಮಿ ಅಖಿಲೇಶ್ ಚಿಪ್ಪಳಿ

ಶಿವಮೊಗ್ಗ:ರಾಣೆಬೆನ್ನೂರು ಹಾಗೂ ಬೈಂದೂರು ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ, ರಾಷ್ಟ್ರೀಯ ಹೆದ್ದಾರಿ 776 ಸಿ ಎಂದು ನಾಮಕರಣ ಮಾಡಿ ಕಾಮಗಾರಿ ನಡೆಸಲಾಗುತ್ತಿದೆ. ಅರಣ್ಯ ಇಲಾಖೆ ಈ ಮಾರ್ಗದಲ್ಲಿರುವ ಕೆಲ ಮರಗಳನ್ನು ಕಟಾವು ಮಾಡಲು ಅನುಮತಿ ನೀಡಿಲ್ಲ. ಅನುಮತಿ ದೊರಕದಿದ್ದರಿಂದ ಗುತ್ತಿಗೆದಾರರು ಮರಗಳ ಬುಡಕ್ಕೆ ಡಾಂಬರೀಕರಣ ಮಾಡಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೈಂದೂರು – ರಾಣೆಬೆನ್ನೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೆಗೇರಿಸಿ, ಸಾಗರ ತಾಲೂಕಿನ ಆನಂದಪುರದಿಂದ ಹೊಸನಗರ ಪಟ್ಟಣದ ವರೆಗಿನ ರಸ್ತೆಯನ್ನು 218 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಗಲೀಕರಣ ಹಾಗೂ ರಸ್ತೆ ನಿರ್ಮಾಣ ಮಾಡಲಾಗಿದೆ. ಆನಂದಪುರ ಗ್ರಾಮದಿಂದ ಹೊಸನಗರದ ವರೆಗೆ ಸುಮಾರು 483 ಮರಗಳ ತೆರವು ಮಾಡಬೇಕಿತ್ತು. ಅರಣ್ಯ ಇಲಾಖೆಯು ಈಗ 250 ಮರಗಳ ತೆರವಿಗೆ ಅನುಮತಿ ನೀಡಿದೆ. ಉಳಿದ 233 ಮರಗಳ ತೆರವಿಗೆ ಅನುಮತಿ ನೀಡಿಲ್ಲ. ಅಲ್ಲದೇ ರಸ್ತೆ ಅಗಲೀಕರಣಕ್ಕೆ ಬೇಕಾದ ಭೂಮಿಯನ್ನು ಅರಣ್ಯ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿಲ್ಲ.

ಈ ಕಾಮಗಾರಿ 2 ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಮೊದಲು ಅರಣ್ಯ ಇಲಾಖೆರವರು ಮರ ಕಡಿಯಲು ಅನುಮತಿ ನೀಡಿದ್ದರು. ಕಳೆದ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಅರಣ್ಯ ಉಳಿವಿಗಾಗಿ ಹೊಸ ಕಾಯಿದೆ ತಂದಿದ್ದು, ಇದರಲ್ಲಿ ರಸ್ತೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ ಭೂಮಿ ನೀಡಿದರೆ ಅಷ್ಟೇ ಪ್ರಮಾಣದ ಭೂಮಿಯನ್ನು ಅರಣ್ಯ ಇಲಾಖೆಗೆ ಬೇರೆ ಕಡೆ ಮಂಜೂರು ಮಾಡಬೇಕು ಎಂಬ ನಿಯಮವಿದೆ. ಇದರಿಂದ ಮರ ತೆರವಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಎಫ್​ಸಿ (ಫಾರೆಸ್ಟ್ ಕ್ಲಿಯರೆನ್ಸ್) ನೀಡಬೇಕಾಗುತ್ತದೆ. ಈ ಎಫ್​ಸಿಯನ್ನು ನೀಡದ ಕಾರಣಕ್ಕೆ ಮರಗಳ ಕಟಾವಿಗೆ ಅನುಮತಿ ನೀಡಿಲ್ಲ. ಗುತ್ತಿಗೆದಾರರು ಕಾಮಗಾರಿ ಮುಗಿಸುವ ಅವಸರದಲ್ಲಿ ಮರದ ಬುಡಕ್ಕೆ ಡಾಂಬರೀಕರಣ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಬಗ್ಗೆ ಪರಿಸರ ಪ್ರೇಮಿ ಅಖಿಲೇಶ್ ಚಿಪ್ಪಳಿ ಮಾತನಾಡಿ, "ಶಿವಮೊಗ್ಗ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನಾವಶ್ಯಕವಾಗಿ ಅನೇಕ ಹೆದ್ದಾರಿಗಳನ್ನು ಮಾಡುತ್ತಿದೆ. ಅದರಲ್ಲಿ ಒಂದು ಈ 776 ಸಿ ಹೆದ್ದಾರಿ. ಶಿಕಾರಿಪುರ, ರಾಣೆಬೆನ್ನೂರು ಮೂಲಕ ತಲುಪುವ ಈ ರಸ್ತೆಯನ್ನು ಹೆದ್ದಾರಿಯನ್ನಾಗಿ ಮಾಡಲಾಗುತ್ತಿದೆ. ರಸ್ತೆ ಬದಿಯಲ್ಲಿರುವ ಪಾರಂಪರಿಕ ಸುಮಾರು ಮುನ್ನೂರರಿಂದ ನಾನೂರು ವರ್ಷಗಳ ಮರಗಳನ್ನು ಕಡಿಯಲಾಗುತ್ತಿದೆ. ಅದಕ್ಕೆ ಅರಣ್ಯ ಇಲಾಖೆ ಅನುಮತಿ ಕೊಟ್ಟಿಲ್ಲ. ಹೆದ್ದಾರಿ ಅಂಗಲೀಕರಣ ಮಾಡಲು ಆ ಮಾರ್ಗದಲ್ಲಿ ವಾಹನ ಸಂಚಾರ ಹೆಚ್ಚಾಗಿರಬೇಕು. ಆ ಅಂಕಿ - ಅಂಶಗಳನ್ನು ಇವರು ತಿದ್ದಿದ್ದಾರೆ" ಎಂದು ಆರೋಪಿಸಿದರು.

"ಹೆದ್ದಾರಿ 776 ಸಿ ಬಟ್ಟೆಮಲ್ಲಪ್ಪದ ಬಳಿ ರಸ್ತೆ ಮಧ್ಯೆ ಇರುವ ಮರಗಳ ಬುಡಕ್ಕೆ ಡಾಂಬರೀಕರಣ ಮಾಡಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ, ನಿತಿನ್​ ಗಡ್ಕರಿ ಹಾಗೂ ರಾಷ್ಟ್ರ ಮಟ್ಟದ ನಾಯಕರಿಗೆ ಗೊತ್ತಾಗುವುದಿಲ್ಲ. ಅಕ್ರಮವಾಗಿ ಡಾಂಬರೀಕರಣ ಮಾಡಿ ಹೆದ್ದಾರಿ ಮಾಡುತ್ತಿದ್ದಾರೆ. ಹಣಕ್ಕಾಗಿ ನೈಸರ್ಗಿಕ ನೆಲೆಗಳನ್ನು ಹಾಳು ಮಾಡುವುದು ದೊಡ್ಡ ಅಪರಾಧ" ಎಂದು ಕಿಡಿಕಾರಿದರು.

ಇದನ್ನೂ ಓದಿ:ಅರಣ್ಯ ಇಲಾಖೆ ಭೂಮಿ ಲೀಸ್​ಗೆ ಪಡೆದು ಹಣ ಪಾವತಿಸದ ಕಂಪನಿಗಳಿಂದ ಭೂಮಿ ವಾಪಸ್​ಗೆ ನಿರ್ಧಾರ: ಸಚಿವ ಖಂಡ್ರೆ

Last Updated : Jan 9, 2024, 10:25 PM IST

ABOUT THE AUTHOR

...view details