ಕರ್ನಾಟಕ

karnataka

ಭ್ರಷ್ಟ ಅಧಿಕಾರಿಗಳ ವಿರುದ್ಧ ತ್ವರಿತ ಕಾನೂನು ಕ್ರಮ: ಲೋಕಾಯುಕ್ತ ಬಿ.ಎಸ್. ಪಾಟೀಲ ಎಚ್ಚರಿಕೆ

By

Published : Jan 6, 2023, 7:32 PM IST

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತರು ಇಂದು ಎಲ್ಲಾ ಇಲಾಖೆಗಳ ಮುಖ್ಯಸ್ಥರ ಸಭೆ ನಡೆಸಿದರು. ಸಮರ್ಪಕವಾಗಿ ಕೆಲಸ ಮಾಡದ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದರು.

ಭ್ರಷ್ಟ ಅಧಿಕಾರಿಗಳ ವಿರುದ್ಧ ತ್ವರಿತ ಕಾನೂನು ಕ್ರಮ: ಲೋಕಾಯುಕ್ತ ಬಿ.ಎಸ್. ಪಾಟೀಲ ಎಚ್ಚರಿಕೆ
prompt-legal-action-against-corrupt-officials-lokayukta-bs-patil-warned

ಶಿವಮೊಗ್ಗ: ಕಡತ ವಿಲೇವಾರಿಯಲ್ಲಿ ವಿಳಂಬ, ಕರ್ತವ್ಯ ಲೋಪ, ಅಧಿಕಾರ ದುರುಪಯೋಗ, ಭ್ರಷ್ಟಾಚಾರದಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಬಿ.ಎಸ್. ಪಾಟೀಲ ಎಚ್ಚರಿಕೆ ನೀಡಿದರು.

ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಸಭೆಯನ್ನು ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಕೆರೆಗಳ ಸಂರಕ್ಷಣೆ, ಒತ್ತುವರಿ ತೆರವು ಮತ್ತು ಪುನರುಜ್ಜೀವನ ಕುರಿತಾಗಿ ಲೋಕಾಯುಕ್ತ ಸಂಸ್ಥೆ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿದೆ. ಕೆರೆಗಳ ಒತ್ತುವರಿ ತೆರವುಗೊಳಿಸಿ ಸಂರಕ್ಷಿಸಲು ಗುರಿಯನ್ನು ನಿಗದಿಪಡಿಸಲಾಗಿದ್ದು, ನಿಯಮಿತವಾಗಿ ಈ ಕುರಿತು ವಿಚಾರಣೆ ನಡೆಸಲಾಗುವುದು.

ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು 6 ಸಾವಿರಕ್ಕೂ ಅಧಿಕ ಕೆರೆಗಳಿದ್ದು, ಇವುಗಳ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಆದ್ಯತೆ ಮೇರೆಗೆ ಈ ಕಾರ್ಯವನ್ನು ಕೈಗೊಂಡು ವರದಿಯನ್ನು ಸಲ್ಲಿಸಬೇಕು. ಇದೇ ರೀತಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಕೆರೆಗಳ ಸ್ಥಿತಿಗತಿ ಕುರಿತು ವರದಿಯನ್ನು ಪ್ರತ್ಯೇಕವಾಗಿ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉದ್ಯೋಗ ಖಾತ್ರಿ: ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಕಲ್ಪಿಸುವ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಈ ಕುರಿತು 5 ಲಕ್ಷ ಪ್ರಕರಣಗಳು ಲೋಕಾಯುಕ್ತದ ಮುಂದಿವೆ. ಯುದ್ಧೋಪಾದಿಯಲ್ಲಿ ಪ್ರಕರಣಗಳ ವಿಲೇವಾರಿ ಮಾಡಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಜಾರಿಯ ಸರಿಯಾದ ದಾಖಲೆಗಳನ್ನು ನಿರ್ವಹಿಸದ ಪಿಡಿಒಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಯೋಜನೆ ಅನುಷ್ಠಾನ ಸಮರ್ಪಕವಾಗಿ ನಿರ್ವಹಿಸದಿದ್ದರೆ ಇಲಾಖೆಯ ಎಲ್ಲ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.

ವಸತಿ ಯೋಜನೆ ಅನುಷ್ಠಾನ: ವಿವಿಧ ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮವಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ದೂರುಗಳ ವಿಚಾರಣೆಯನ್ನು ಮಾಡಲಾಗುತ್ತಿದೆ. ಇದೇ ರೀತಿ ನೀರಾವರಿ, ಕೃಷಿ, ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲ ಇಲಾಖೆಗಳು ಜನಕಲ್ಯಾಣ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಪಟ್ಟಿ ಸಿದ್ಧಪಡಿಸಲು ಸೂಚನೆ: ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರಸ್ತುತ ಪೂರ್ಣ ಪ್ರಮಾಣದ ಅಧಿಕಾರಿ ಸಿಬ್ಬಂದಿಗಳಿದ್ದು, ನ್ಯಾಯಾಂಗ ವಿಭಾಗ, ಪೊಲೀಸ್ ವಿಭಾಗ, ಆಂತರಿಕ ಗುಪ್ತಚರ ವಿಭಾಗ, ಆಡಳಿತ ವಿಭಾಗ, ತಾಂತ್ರಿಕ ವಿಭಾಗ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಜನಕಂಟಕರಾಗಿರುವ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಅದರ ಪ್ರಕಾರ ದಾಳಿಗಳನ್ನು ನಡೆಸಿ ಭ್ರಷ್ಟ ವ್ಯವಸ್ಥೆಯನ್ನು ಮಟ್ಟ ಹಾಕಲು ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದೇ ರೀತಿ ಉತ್ತಮವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವೂ ನಡೆಯಬೇಕಿದೆ ಎಂದು ಹೇಳಿದರು.

ಎಚ್ಚರಿಕೆ: ಜನರು ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಕೈಜೋಡಿಸಬೇಕು. ಇದೇ ವೇಳೆ, ಕೆಲವರು ಸುಳ್ಳು ದೂರುಗಳನ್ನು ದಾಖಲಿಸಿ ವಸೂಲಿ ದಂಧೆಗೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಂತಹ ಪ್ರಕರಣಗಳಲ್ಲಿ ಲೋಕಾಯುಕ್ತ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಎಚ್ಚರಿಸಿದರು. ಎಸಿಬಿಯಿಂದ ಪೂರ್ಣ ಪ್ರಮಾಣದ ಕೇಸು ವರ್ಗಾವಣೆ ಆಗಿವೆ. ಎಲ್ಲಿ ಅವಶ್ಯಕತೆ ಇದೆಯೂ ಅಲ್ಲಿಗೆ ಹೋಗಿ ಕರೆದುಕೊಂಡು ಹೋಗಿ ಎಂದರು.

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಡಿ. ಪ್ರಕಾಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಹನುಮಂತಪ್ಪ, ಲೋಕಾಯುಕ್ತ ಡಿ.ವೈ.ಎಸ್.ಪಿ ಮೃತ್ಯುಂಜಯ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಫೈರ್ ಆಫೀಸರ್

ABOUT THE AUTHOR

...view details