ಕರ್ನಾಟಕ

karnataka

ಕೆಕೊಡ್ಲು ಗ್ರಾಮದ ನಾಲ್ವರ ಆತ್ಮಹತ್ಯೆ ಪ್ರಕರಣ: ಮೂವರ ವಿರುದ್ಧ ದೂರು ದಾಖಲು

By ETV Bharat Karnataka Team

Published : Oct 19, 2023, 9:47 PM IST

ಕೆಲವು ದಿನಗಳ ಹಿಂದೆ ಅರಳಸುರಳಿ ಗ್ರಾಮದ ರಾಘವೇಂದ್ರ ಎಂಬವರು ಕುಟುಂಬಸಮೇತ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

kekodlu-village-four-suicide-case-complaint-filed-against-three
ಕೆಕೊಡ್ಲು ಗ್ರಾಮದ ನಾಲ್ವರು ಆತ್ಮಹತ್ಯೆ ಪ್ರಕರಣ: ಮೂವರ ವಿರುದ್ಧ ದೂರು ದಾಖಲು

ಶಿವಮೊಗ್ಗ:ಇತ್ತೀಚೆಗೆ ನಡೆದ ತೀರ್ಥಹಳ್ಳಿ ತಾಲೂಕು ಅರಳಸುರಳಿ ಗ್ರಾಮದ ಕೆಕೊಡ್ಲುವಿನ ರಾಘವೇಂದ್ರ ಹಾಗೂ ಅವರ ಕುಟುಂಬದವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಾಗಿದೆ. ಮೃತ ನಾಗರತ್ನ ಅವರ ಸಹೋದರ ತೇಜ್ ಪ್ರಕಾಶ್ ಅವರು ತಮ್ಮ ಅಕ್ಕ, ಭಾವ ಹಾಗೂ ಅವರ ಇಬ್ಬರು ಮಕ್ಕಳ ಸಾವಿಗೆ, ಆಸ್ತಿ ವಿಚಾರದಿಂದಾಗಿ ರಾಘವೇಂದ್ರ ಅವರ ಸಹೋದರರು ಹಾಗೂ ಅವರ ಅತ್ತಿಗೆ ವಿನೋದಾ ಕಾರಣ ಎಂದು ದೂರು ದಾಖಲಿಸಿದ್ದಾರೆ.

ರಾಘವೇಂದ್ರ ಅವರಿಗೆ ಕೃಷ್ಣಮೂರ್ತಿ, ಮಂಜುನಾಥ್​, ರಾಮಕೃಷ್ಣ ಹಾಗೂ ಡಾ.ಸುಧೀಂದ್ರ ಎನ್ನುವ ನಾಲ್ವರು ಸಹೋದರರಿದ್ದಾರೆ. ಇದರಲ್ಲಿ ಮಂಜುನಾಥ್​ ಎನ್ನುವವರಿಗೆ ಭೂಮಿಯಲ್ಲಿ ಈಗಾಗಲೇ ಪಾಲು ನೀಡಲಾಗಿದೆ. ಉಳಿದ ಮೂವರು ಸಹೋದರರು ತಮ್ಮ ಜಮೀನು ವ್ಯವಹಾರಕ್ಕೆ ರಾಘವೇಂದ್ರ ಅವರಿಗೆ ಜಿಪಿಎ ಮಾಡಿ ಕೊಟ್ಟಿದ್ದರು. ಈ ನಡುವೆ ಮಂಜುನಾಥ್ ಅವರ ಪತ್ನಿ ವಿನೋದಾ ಅವರು ರಾಘವೇಂದ್ರ ಅವರಿಂದ ವ್ಯವಹಾರಕ್ಕಾಗಿ 10 ಲಕ್ಷ ರೂಗಳನ್ನು ಸಾಲದ ರೂಪದಲ್ಲಿ ಪಡೆದುಕೊಂಡಿದ್ದರು. ರಾಘವೇಂದ್ರ ಜಮೀನಿನ ಮೇಲೆ ಬ್ಯಾಂಕ್​ನಿಂದ ಸಾಲ ಮಾಡಿ ಈ ಹಣ ಕೊಟ್ಟಿದ್ದರು.

ಈ ಬಗ್ಗೆ ಯಾವುದೇ ಪತ್ರ ನೋಂದಣಿಯಾಗಿರಲಿಲ್ಲ. ಆದರೆ ಇತ್ತೀಚೆಗೆ ಸುಮಾರು ಎರಡು ವರ್ಷಗಳಿಂದ ರಾಘವೇಂದ್ರ ಅವರ ಸಹೋದರರಾದ ಸುಧೀಂದ್ರ ಹಾಗೂ ಪಾರಾ ಕೃಷ್ಣಮೂರ್ತಿ ಜಾಗದ ಮೇಲೆ ಸಾಲ ತೆಗೆದು ವಿನೋದಾ ಅವರಿಗೆ ನೀಡಿರುವ ಹಣವನ್ನು ಹಿಂತಿರುಗಿಸುವಂತೆ ಭಾವನ ಕುಟುಂಬಕ್ಕೆ ಹಲವಾರು ಬಾರಿ ಬೈದು, ಹಲ್ಲೆಗೆ ಯತ್ನಿಸಿ, ಗಲಾಟೆ ಮಾಡಿ ಮಾನಸಿಕ ಹಿಂಸೆ ನೀಡಿದ್ದರು. ಜತೆಗೆ ಮನೆ ಖಾಲಿ ಮಾಡದಿದ್ದರೆ ಶಿವಮೊಗ್ಗದಿಂದ ಗೂಂಡಾಗಳನ್ನು ಕರೆಯಿಸಿ ಮನೆಯಿಂದ ಹೊರ ಹಾಕಿಸುವುದಾಗಿ ಹಾಗೂ ಬ್ಯಾಂಕ್​ನ ಸಾಲ ಕಟ್ಟುವಂತೆ ಬೆದರಿಕೆಯನ್ನೂ ಹಾಕಿದ್ದರು. ಬೆದರಿಕೆಗೆ ಮನನೊಂದು, ಮಾನಸಿಕ ಹಿಂಸೆಯನ್ನು ತಾಳಲಾರದೆ ಭಾವನ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ. ಇದರಿಂದ ಡಾ. ಸುಧೀಂದ್ರ, ಪಾರಾ ಕೃಷ್ಣಮೂರ್ತಿ ಹಾಗೂ ವಿನೋದಾ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. ದೂರು ಪಡೆದುಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ತೀರ್ಥಹಳ್ಳಿಯ ಅರಳಸುರಳಿ ಗ್ರಾಮದಲ್ಲಿ ಅರ್ಚಕ ವೃತ್ತಿ ಮಾಡಿಕೊಂಡಿದ್ದ ರಾಘವೇಂದ್ರ ಕೆಲವು ದಿನಗಳ ಹಿಂದೆ ಪತ್ನಿ ಪತ್ನಿ ನಾಗರತ್ನ, ಇಬ್ಬರು ಮಕ್ಕಳಾದ ಶ್ರೀರಾಮ ಹಾಗೂ ಭರತ್ ಸಮೇತ ಮನೆಯ ಹಾಲ್​ನಲ್ಲಿ ಕಟ್ಟಿಗೆ ರಾಶಿ ಹಾಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂವರು ಸ್ಥಳದಲ್ಲೇ ಸಜೀವ ದಹನವಾಗಿದ್ದರೆ, ಸುಟ್ಟ ಗಾಯಗಳಿಂದ ಗಂಭೀರವಾಗಿದ್ದ ಒಬ್ಬ ಪುತ್ರನನ್ನು ಗ್ರಾಮಸ್ಥರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆತ ಕೂಡ ಕೆಲವು ದಿನಗಳ ನಂತರ ಸಾವನ್ನಪ್ಪಿದ್ದರು.

ಇದನ್ನೂ ಓದಿ:ಶಿವಮೊಗ್ಗ: ಮನೆಯಲ್ಲಿ ಪತಿ, ಪತ್ನಿ, ಮಗ ಸಜೀವ ದಹನ; ಆತ್ಮಹತ್ಯೆ ಶಂಕೆ

ABOUT THE AUTHOR

...view details