ಕರ್ನಾಟಕ

karnataka

ಸಾವರ್ಕರ್ ಫ್ಲೆಕ್ಸ್ ತೆರವು ಗಲಾಟೆ: ಇಂದು ಶಿವಮೊಗ್ಗ, ಭದ್ರಾವತಿಯ ಶಾಲೆ ಕಾಲೇಜುಗಳಿಗೆ ರಜೆ

By

Published : Aug 15, 2022, 9:39 PM IST

Updated : Aug 16, 2022, 6:28 AM IST

ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಇರಿಸಲಾಗಿದ್ದ ವೀರ ಸಾವರ್ಕರ್ ಫ್ಲೆಕ್ಸ್ ತೆರವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ, ಎಸ್​ಪಿ ಲಕ್ಷ್ಮಿ ಪ್ರಸಾದ್ ಮತ್ತು ಡಿಸಿ ಸೆಲ್ವಮಣಿ ಮಾತನಾಡಿದ್ದಾರೆ.

Veer Savarkar Flex eviction case
ವೀರ ಸಾವರ್ಕರ್ ಫ್ಲೆಕ್ಸ್ ತೆರವು ಪ್ರಕರಣ

ಶಿವಮೊಗ್ಗ: ವೀರ ಸಾವರ್ಕರ್ ಫ್ಲೆಕ್ಸ್ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ಪ್ರತಿಕ್ರಿಯಿಸಿ, "ಘಟನೆಯಲ್ಲಿ ಓರ್ವನಿಗೆ ಚಾಕುವಿನಿಂದ ಇರಿಯಲಾಗಿದೆ. ಹಲವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ" ಎಂದು ಹೇಳಿದ್ದಾರೆ.

ಎಸ್​ಪಿ ಲಕ್ಷ್ಮಿ ಪ್ರಸಾದ್ ಮಾತನಾಡಿ, "ಓರ್ವನಿಗೆ ಚಾಕು ಇರಿತವಾಗಿದೆ. ಎರಡು ಗುಂಪುಗಳು ಮುಖಾಮುಖಿಯಾಗಿದ್ದವು. ನಾವು ಲಾಠಿ ಚಾರ್ಚ್ ಮಾಡಿ ಬೇರ್ಪಡಿಸಿದ್ದೇವೆ. ಎಲ್ಲೂ ಜನ ಸೇರುವಂತಿಲ್ಲ. ಶಿವಮೊಗ್ಗ ನಗರ ಮತ್ತು ಭದ್ರಾವತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹೆಚ್ಚಿನ ಪೊಲೀಸರನ್ನು ಕರೆಸಿಕೊಳ್ಳಲಾಗುತ್ತಿದೆ" ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

ಆಸ್ಪತ್ರೆಗೆ ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ. ಸಂಬಂಧಿಕರಿಗೆ ಧೈರ್ಯ ತುಂಬಿದ ಸಚಿವರು, "ಆತನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು" ಎಂದು ಹೇಳಿದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಫ್ಲೆಕ್ಸ್ ತೆರವು, ಗಲಾಟೆ: 144 ಸೆಕ್ಷನ್​ ಜಾರಿ

"ಪ್ರೇಮ್ ಸಿಂಗ್ ಎಂಬಾತ ಕಸ್ತೂರಿ ಬಾ ರಸ್ತೆಯ ನಮ್ಮ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ರಾಜಸ್ಥಾನದವನು. ಕಿಡಿಗೇಡಿಗಳು ಚಾಕುವಿನಿಂದ ಇರಿದ ತಕ್ಷಣ ನಾವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ" ಎಂದು ಬಟ್ಟೆ ಅಂಗಡಿ ಮಾಲೀಕ ಹರೀಶ್ ಲಾಲ್ ತಿಳಿಸಿದರು.

ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಇರಿಸಲಾಗಿದ್ದ ವೀರ ಸಾವರ್ಕರ್ ಫ್ಲೆಕ್ಸ್ ತೆರವು ಮಾಡಿದ ಬೆನ್ನಲ್ಲೇ ಕೆಲಕಾಲ ಗಲಾಟೆ ನಡೆದಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಹೀಗಿದ್ದರೂ ಕೆಲ ಗಂಟೆಯಲ್ಲೇ ಯುವಕನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ. ಶಿವಮೊಗ್ಗ ನಗರ ಹಾಗೂ ಭದ್ರಾವತಿ ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಇಂದು (ಆ.16) ರಜೆ ನೀಡಲಾಗಿದೆ.

ಸೆಕ್ಷನ್ 144 ಹಿನ್ನೆಲೆ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಇಂದು ರಜೆ ಘೋಷಿಸಿದ್ದಾರೆ. ವಿಶ್ವವಿದ್ಯಾಲಯಕ್ಕೆ ಪ್ರತಿ ದಿನ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಿಂದ ಪ್ರಯಾಣಿಸುವ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ನೀಡಲಾಗಿದೆ. ಆದರೆ ಉಪನ್ಯಾಸಕರು ಮತ್ತು ಅಧ್ಯಾಪಕೇತರ ಸಿಬ್ಬಂದಿ ಎಂದಿನಂತೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Last Updated : Aug 16, 2022, 6:28 AM IST

ABOUT THE AUTHOR

...view details