ಕರ್ನಾಟಕ

karnataka

ಶಿವಮೊಗ್ಗ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ

By

Published : Aug 7, 2023, 5:14 PM IST

Updated : Aug 7, 2023, 6:59 PM IST

ಸಿಎಂ ಸಿದ್ದರಾಮಯ್ಯ ರೈತ ವಿರೋಧಿಯಾಗಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

bjp-raita-morcha-protested-against-government-for-anti-farmer-policy-in-shivamogga
ಶಿವಮೊಗ್ಗ: ಸರ್ಕಾರ ರೈತ ವಿರೋಧಿ‌ ನೀತಿ ಖಂಡಿಸಿ ಬಿಜಪಿ ರೈತ ಮೋರ್ಚಾದಿಂದ ಪ್ರತಿಭಟನೆ

ರಾಜ್ಯ ಸರ್ಕಾರದ ವಿರುದ್ಧ ಶಿವಮೊಗ್ಗ ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ

ಶಿವಮೊಗ್ಗ: ರಾಜ್ಯ ಸರ್ಕಾರ ರೈತ ವಿರೋಧಿ‌ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು. ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿದ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಬಿಜೆಪಿ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು.

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿ, "ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು‌ 3 ತಿಂಗಳಾಗಿಲ್ಲ. ಸರ್ಕಾರದಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕೆಂದು ಇಂದು ಪ್ರತಿಭಟನೆ ನಡೆಸಿದ್ದೇವೆ. ಕೇಂದ್ರ ಸರ್ಕಾರ ರೈತರಿಗೆ 6 ಸಾವಿರ ರೂ ನೀಡಿದರೆ, ರಾಜ್ಯ ಸಿಎಂ ಆಗಿದ್ದ ಯಡಿಯೂರಪ್ಪನವರು 4 ಸಾವಿರ ರೂ ನೀಡುತ್ತಿದ್ದರು. ಆದರೆ ಸಿಎಂ ಸಿದ್ದರಾಮಯ್ಯನವರು ರೈತರಿಗೆ ಇನ್ನೂ 4 ರಿಂದ 5 ಸಾವಿರ ಸೇರಿಸಿ‌ ಕೊಡುತ್ತಾರೆ ಅಂದುಕೊಂಡಿದ್ದೆವು. ಆದರೆ ಯಡಿಯೂರಪ್ಪನವರು‌‌ ನೀಡುತ್ತಿದ್ದ 4 ಸಾವಿರ ರೂವನ್ನು ರೈತರಿಗೆ‌ ನೀಡದೆ, ಬೇರೆ ಕಾರಣಕ್ಕೆ ಬಳಸಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ" ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

"ಬಜೆಟ್​ನಲ್ಲಿ ಕೃಷಿ‌ ಇಲಾಖೆಗೆ 10 ಸಾವಿರ ಕೋಟಿ ರೂ ಇಟ್ಟಿದ್ದರು. ಅದರಲ್ಲಿ 5 ಸಾವಿರ‌ ಕೋಟಿ ರೂ ಅನ್ನು ಬೇರೆ ಬೇರೆ ಗ್ಯಾರಂಟಿಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಬೇರೆ ಬೇರೆ ಸ್ಕೀಂಗಳಿಗೆ ಇಟ್ಟಿದ್ದ ಹಣವನ್ನು ತೆಗೆದು‌ಕೊಳ್ಳುತ್ತಿದ್ದಾರೆಯೇ ವಿನಃ, ಗ್ಯಾರಂಟಿಗಾಗಿಯೇ ಇಟ್ಟ ಹಣವನ್ನು ಬಳಸಿಕೊಳ್ಳುತ್ತಿಲ್ಲ. ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾನಿಧಿ ನಿಲ್ಲಿಸಲಾಗಿದೆ. ಜಿಲ್ಲೆಗೊಂದು ಗೋಶಾಲೆಯನ್ನು ಬಿಜೆಪಿ ಸರ್ಕಾರ ತೆರೆದಿತ್ತು. ಈಗ ಅದನ್ನು ರಾಜ್ಯ ಸರ್ಕಾರ ರದ್ದು‌ ಮಾಡಿದೆ. ಸಿಎಂ ಸಿದ್ದರಾಮಯ್ಯ ರೈತ ವಿರೋಧಿಯಾಗಿದ್ದಾರೆ. ನಮ್ಮ ಸರ್ಕಾರ ರೈತರಿಗಾಗಿ ತಂದ ಯೋಜನೆಯನ್ನು ಮರು ಜಾರಿ ಮಾಡಬೇಕೆಂದು ಪ್ರತಿಭಟನೆ ನಡೆಸಲಾಗುತ್ತಿದೆ" ಎಂದು ಹೇಳಿದರು.

ನಂತರ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, "ಜಿಲ್ಲಾ ರೈತ ಮೋರ್ಚಾದ ವತಿಯಿಂದ ಸರ್ಕಾರದ ರೈತ ವಿರೋಧಿ‌ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದೇವೆ. ಬಜೆಟ್​ನಲ್ಲಿ ಕೃಷಿಗಾಗಿ ಇಟ್ಟಂತಹ 5 ಸಾವಿರ‌ ಕೋಟಿ ರೂಗಳನ್ನು ಗ್ಯಾರಂಟಿಗೆ ಬಳಸಿರುವಂತದ್ದು ಮತ್ತು ಹಿಂದೆ ಯಡಿಯೂರಪ್ಪನವರು ಪ್ರತಿ ರೈತರಿಗೆ ನೀಡಿದ್ದ 4 ಸಾವಿರ ರೂ ಹಣವನ್ನು ರದ್ದು ಮಾಡಿರುವುದು, ಹಾಲಿನ ದರ ಏರಿಕೆ ಮಾಡಿ, ಆ ಹಣವನ್ನು ರೈತರಿಗೆ ನೀಡದೆ ಇರುವಂತದ್ದು, ಈ ಎಲ್ಲ ವಿಷಯಗಳ ವಿರುದ್ಧ ಇಂದು ಪ್ರತಿಭಟನೆ ನಡೆಸಿದ್ದೇವೆ. ತಕ್ಷಣ ಸರ್ಕಾರ ತನ್ನ ನೀತಿಯನ್ನು ಬದಲಾಯಿಸಿಕೊಳ್ಳಬೇಕು. ರಾಜ್ಯ ಸರ್ಕಾರ ತನ್ನ ತಪ್ಪನ್ನು ಸರಿಪಡಿಸಿಕೊಳ್ಳದೆ ಇದ್ದರೆ ಮುಂದೆ ಬಿಜೆಪಿ ರಾಜ್ಯಾದ್ಯಾಂತ ಹೋರಾಟ ನಡೆಸಬೇಕಾಗುತ್ತದೆ" ಎಂದು ಎಚ್ಚರಿಕೆ ಕೊಟ್ಟರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ ಸೇರಿದಂತೆ ಜಿಲ್ಲೆಯ ಹಲವು ಮುಖಂಡರುಗಳು ಉಪಸ್ಥಿತರಿದ್ದರು. ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ:ಹೊಟ್ಟೆ ಕಿಚ್ಚು, ಅಸೂಯೆಗೆ ಮದ್ದಿಲ್ಲ.. ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್​

Last Updated : Aug 7, 2023, 6:59 PM IST

ABOUT THE AUTHOR

...view details