ಕರ್ನಾಟಕ

karnataka

ರಂಗೇರಿದ ರಾಮನಗರ ಚುನಾವಣಾ ಅಖಾಡ: ಯಾರ್‍ಯಾರ ಮಧ್ಯೆ ನಡೆಯಲಿದೆ ಪೈಪೋಟಿ ಗೊತ್ತಾ?

By

Published : Apr 14, 2023, 12:59 PM IST

Updated : Apr 14, 2023, 1:51 PM IST

ರಾಮನಗರ ಜಿಲ್ಲಾ ಕ್ಷೇತ್ರಗಳಲ್ಲಿ ಚುನಾವಣಾ ಅಖಾಡಕ್ಕೆ ಇಳಿಯುವ ವಿವಿಧ ಪಕ್ಷಗಳ ಅಭ್ಯರ್ಥಿಗಳ ವಿವರ ಇಲ್ಲಿದೆ ನೋಡಿ..

Assembly Election Candidates of Ramnagar Kshetra
Assembly Election Candidates of Ramnagar Kshetra

ರಾಮನಗರ:ರೇಷ್ಮೆನಗರಿ ರಾಮನಗರ ಜಿಲ್ಲೆಯ ಎಲ್ಲ ಕ್ಷೇತ್ರಗಳ ನಿರೀಕ್ಷೆಯಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಹೆಸರುಗಳನ್ನು ಬಹುತೇಕ ಫಿಕ್ಸ್ ಆಗಿದೆ. ಜಿಲ್ಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಸಿ.ಪಿ.ಯೋಗೇಶ್ವರ್, ಹೆಚ್.ಸಿ.ಬಾಲಕೃಷ್ಣ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಘಟಾನುಘಟಿ ರಾಜಕಾರಣಿಗಳ ಭವಿಷ್ಯ ನಿರ್ಧಾರಕ್ಕೆ ವೇದಿಕೆ ಸಜ್ಜಾಗುತ್ತಿದೆ. ಈ ಭಾರಿ ಜಿಲ್ಲೆಯಲ್ಲಿ ಪ್ರಮುಖವಾಗಿ ಮೂರು ಪಕ್ಷಗಳು ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಹೆಚ್​ ಡಿ ಕುಮಾರಸ್ವಾಮಿ

ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ v/s ಯೋಗೇಶ್ವರ್: ಚನ್ನಪಟ್ಟಣದಿಂದ ಬಿಜೆಪಿ ಅಭ್ಯರ್ಥಿ ಆಗಲಿರುವ ಸಿ.ಪಿ. ಯೋಗೇಶ್ವರ್‌ ಏಳನೇ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯೋಗೇಶ್ವರ್‌ 2011ರ ಉಪ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು.

2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೆಚ್​.ಡಿ. ಕುಮಾರಸ್ವಾಮಿ ಎದುರು ಪರಾಭವಗೊಂಡಿದ್ದರು. ಈ ಬಾರಿ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ವದಂತಿ ಸಹ ಹಬ್ಬಿತ್ತು. ಅಂತಿಮವಾಗಿ ಕಮಲ ಚಿಹ್ನೆಯಿಂದಲೇ ಸಿಪಿವೈ ಸ್ಪರ್ಧೆ ಖಚಿತವಾಗಿದೆ. ಸ್ವಾಭಿಮಾನಿ ಸಂಕಲ್ಪ ನಡಿಗೆ ಯಾತ್ರೆ ಮೂಲಕ ಈಗಾಗಲೇ ಅವರು ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ.

ಮತ್ತೊಂದೆಡೆ ಇವರ ಪ್ರತಿ ಸ್ಪರ್ದಿಯಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪೈಪೋಟಿ ನೀಡಲು ಸಿದ್ದರಾಗಿದ್ದಾರೆ. ಕಳೆದ ಭಾರಿ ಚುನಾವಣೆಯಲ್ಲಿ 20 ಸಾವಿರಕ್ಕೂ ಹೆಚ್ಚು ಲೀಡ್ ಮತ ಪಡೆದು ಜಯಶೀಲರಾಗಿದ್ದರು. ನಂತರ ಈ ಕ್ಷೇತ್ರದಿಂದ ಗೆದ್ದು 14 ತಿಂಗಳ ಕಾಲ ರಾಜ್ಯದ ಸಿಎಂ ಆಗಿದ್ದರು. ಈಗ ಮತ್ತೊಮ್ಮೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ.

ಸಿ.ಪಿ.ಯೋಗೇಶ್ವರ್

ಕಳೆದ ಬಾರಿ ಚುನಾವಣೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕ್ಷೇತ್ರದಿಂದಲೂ ಸ್ಪರ್ಧಿಸಿ ಎರಡೂ ಕ್ಷೇತ್ರದಿಂದಲೂ ಗೆದ್ದಿದ್ದರು. ಆದರೆ, ಈ ಭಾರಿ ಕೇವಲ ಚನ್ನಪಟ್ಟಣ ಕ್ಷೇತ್ರದಿಂದ ಮಾತ್ರ ಸ್ಪರ್ಧೆ ಮಾಡೋದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿರುವ ಕ್ಷೇತ್ರದಲ್ಲಿ ಜೆಡಿಎಸ್ ಅಲೆ ಸ್ವಲ್ಪ ಹೆಚ್ಚಾಗಿಯೇ ಇದೆ ಎನ್ನಲಾಗುತ್ತಿದೆ.

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಹುಡುಕಾಟ ಜೋರಾಗಿದೆ. ಸಂಭವನೀಯ ಅಭ್ಯರ್ಥಿ ಎಂದೆ ಕರೆಸಿಕೊಂಡಿದ್ದ ಪ್ರಸನ್ನ ಪಿ ಗೌಡ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದು, ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಗಂಗಾಧರ್ ರವರೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

ಎ.ಮಂಜುನಾಥ್

ಮಾಗಡಿ ಕ್ಷೇತ್ರದಲ್ಲಿ ಅಖಾಡ ಜೋರು - ಜೆಡಿಎಸ್ ಅಭ್ಯರ್ಥಿಯಾಗಿ ಎ.ಮಂಜುನಾಥ್:- ಮಾಗಡಿ ಕ್ಷೇತ್ರದಿಂದ ಮೂರು ಪಕ್ಷದಿಂದಲೂ ಕೂಡ ಅಭ್ಯರ್ಥಿಗಳು ಬಹುತೇಕ ಫಿಕ್ಸ್ ಆಗಿದ್ದಾರೆ. ಜೆಡಿಎಸ್ ಪಕ್ಷದಿಂದ ಹಾಲಿ ಶಾಸಕರಾದ ಎ.ಮಂಜುನಾಥ್ ರವರಿಗೆ ಈ ಭಾರಿ ಜೆಡಿಎಸ್​ ಪಕ್ಷದಿಂದ ಟಿಕೆಟ್ ಖಾಯಂ ಆಗಿದೆ. ಕ್ಷೇತ್ರದಲ್ಲಿ ಶಾಸಕರಾಗಿದ್ದ ವೇಳೆ ಮಾಡಿದ ಅಭಿವೃದ್ಧಿ ಶ್ರೀರಕ್ಷೆಯೇ ಈ ಭಾರಿ ಗೆಲುವಿಗೆ ಕಾರಣ ಆಗಲಿದೆ ಎಂದು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಹೆಚ್.ಸಿ.ಬಾಲಕೃಷ್ಣ:- ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಿಂದ ಹೆಚ್.ಸಿ.ಬಾಲಕೃಷ್ಣ ಐದನೇ ಬಾರಿಗೆ ಶಾಸಕರಾಗಲು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಕಳೆದ ಭಾರಿ ಕಾಂಗ್ರೆಸ್ ಪಕ್ಷದಿಂದ ನಿಂತು ಪರಾಜಯಗೊಂಡಿದ್ದರು. ಆದರೆ, ಈ ಭಾರಿ ಶತಾಯಗತಾಯ ಗೆದ್ದು ಬರಬೇಕೆಂದು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಹೆಚ್.ಸಿ.ಬಾಲಕೃಷ್ಣ

ಬಿಜೆಪಿ ಅಭ್ಯರ್ಥಿಯಾಗಿ ಕೆ.ಆರ್. ಪ್ರಸಾದ್ ಗೌಡ :- ಇದಲ್ಲದೇ ಕ್ಷೇತ್ರದ ಕಣಮಿಣಕಿ ಗ್ರಾಮದವರಾದ ಪ್ರಸಾದ್ ಗೌಡ ಈ ಬಾರಿ ಮಾಗಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಮಾಗಡಿ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದ ಪ್ರಸಾದ್‌ ಗೌಡ, ಚುನಾವಣೆ ಘೋಷಣೆಗೂ ಮುನ್ನ ಬಡಜನರಿಗೆ ಉಚಿತ ನಿವೇಶನ ಹಂಚಿಕೆ, ಮಹಿಳೆಯರಿಗೆ ಮೂಗುತಿ, ಧಾರ್ಮಿಕ ಪ್ರವಾಸಗಳ ಆಯೋಜನೆ ಮೊದಲಾದ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದರು. ಪಕ್ಷದ ಟಿಕೆಟ್ ಖಾತ್ರಿಯಾಗುವ ಮುನ್ನವೇ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಆಪ್ತರಾಗಿದ್ದು, ಅದು ಸಹ ಅಭ್ಯರ್ಥಿ ಆಯ್ಕೆಯಲ್ಲಿ ಕೆಲಸ ಮಾಡಿದೆ. ಇವರು ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಕೆ.ಆರ್. ಪ್ರಸಾದ್ ಗೌಡ

ರೇಷ್ಮೆನಗರಿ ನಗರಿ ಅಖಾಡ ಬಲು ಜೋರು:ರಾಮನಗರ ವಿಧಾನಸಭೆ ಕ್ಷೇತ್ರ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರವಾಗಿದೆ. ಈ ಭಾರಿ ಕ್ಷೇತ್ರದಲ್ಲಿ ಪ್ರಮುಖ ಮೂರು ಪಕ್ಷದಿಂದಲೂ ಅಭ್ಯರ್ಥಿಗಳು ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.

ನಿಖಿಲ್​ ಕುಮಾರಸ್ವಾಮಿ

ಜೆಡಿಎಸ್ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿ -ಜೆಡಿಎಸ್ ಭದ್ರ ಕೋಟೆ ಎಂದೆ ಕರೆಸಿಕೊಂಡಿರುವ ಈ ಕ್ಷೇತ್ರದಲ್ಲಿ ಮೊದಲ ಭಾರಿಗೆ ಶಾಸಕರಾಗಲು ಜೆಡಿಎಸ್ ಪಕ್ಷದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸಜ್ಜಾಗಿದ್ದಾರೆ. ಹಾಲಿ ಇವರ ತಾಯಿ ಅನಿತಾ ಕುಮಾರಸ್ವಾಮಿರವರೇ ಕ್ಷೇತ್ರದ ಶಾಸಕರಾಗಿದ್ದು, ಮಗ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ರಾಮನಗರ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ಈಗಾಗಲೆ ಕ್ಷೇತ್ರದಾದ್ಯಂತ ನಿಖಿಲ್ ಕೂಡ ಭಾರಿ ಪ್ರಚಾರ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಇಕ್ಬಾಲ್ ಹುಸೇನ ಕಣಕ್ಕೆ :- ಕಾಂಗ್ರೆಸ್ ಪಕ್ಷದಿಂದ ಅಲ್ಪ ಸಂಖ್ಯಾತರಾದ ಇಕ್ಬಾಲ್ ಹುಸೇನ್ ಕಣಕ್ಕೆ ಇಳಿಯಲಿದ್ದಾರೆ‌. ಈಗಾಗಲೇ ಕಳೆದ ಎರಡು ಮೂರು ತಿಂಗಳಿಂದ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿ ತಮ್ಮ ಪರ ಮತಯಾಚನೆ ನಡೆಸುತ್ತಿದ್ದಾರೆ. ಡಿಕೆ ಬ್ರದರ್ಸ್ ಬೆಂಬಲದೊಂದಿಗೆ ಈ ಭಾರಿ ಕ್ಷೇತ್ರ ಅಭ್ಯರ್ಥಿಯಾಗಿರುವ ಇವರು ಈ ಭಾರಿ ಚುನಾವಣೆಯಲ್ಲಿ ಭಾರಿ ಪೈಪೋಟಿ ನೀಡುವುದರಲ್ಲಿ ಯಾವುದೇ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಇಕ್ಬಾಲ್ ಹುಸೇನ

ರಾಮನಗರದಿಂದ ಬಿಜೆಪಿಯಿಂದ ಗೌತಮ್ ಗೌಡ ಸ್ಪರ್ಧೆ : ರಾಮನಗರ ವಿಧಾನಸಭಾ ಕ್ಷೇತ್ರದಿಂದ ನಿರೀಕ್ಷೆಯಂತೆ ಗೌತಮ್ ಗೌಡ ಅವರಿಗೆ ಅವಕಾಶ ಲಭಿಸಿದೆ. ರೇಷ್ಮೆ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಗೌತಮ್‌ ರಾಮನಗರದಲ್ಲಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣರ ಅಭಿನಂದನಾ ಸಮಾರಂಭದ ನೇತೃತ್ವ ವಹಿಸಿ ಗಮನ ಸೆಳೆದಿದ್ದರು.

ಸಚಿವರನ್ನೂ ಒಳಗೊಂಡು ಹಿರಿಯರ ಆಶೀರ್ವಾದ ಬೇಡುತ್ತ ಪಕ್ಷದ ಟಿಕೆಟ್ ಗಿಟ್ಟಿಸುವ ತವಕದಲ್ಲಿ ಇದ್ದರು. ಗೌತಮ್‌ ಗೌಡ ತಂದೆ ಮರಿಲಿಂಗೇಗೌಡ ಈ ಹಿಂದೆ ಜೆಡಿಎಸ್‌ನಿಂದ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆ ಆಗಿದ್ದರು. ಅವರು ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಗನಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದರು. ಗೌತಮ್‌ ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಅನೇಕ ಬಾರಿ ಸ್ವಪಕ್ಷೀಯರ ವಿರೋಧವನ್ನೂ ಎದುರಿಸಿದ್ದರು. ಗೌತಮ್ ಗೌಡ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಭಾರಿ ಇವರು ಕೂಡ ಪೈಪೋಟಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಡಿಕೆ ಶಿವಕುಮಾರ್​

ರಂಗೇರಲಿದೆ ಕನಕಪುರ ಅಖಾಡ:ಈ ಭಾರಿ ಕನಕಪುರ ಕ್ಷೇತ್ರ ಚುನಾವಣೆ ಭಾರಿ ರಂಗು ಪಡೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ಬಲಿಷ್ಟ ಅಭ್ಯರ್ಥಿ ಯಾರು ಇಲ್ಲ ಎಂದು ನಿರಾಳಾರಾಗಿದ್ದ ಡಿ.ಕೆ.ಶಿವಕುಮಾರ್ ವಿರುದ್ದ ಬಲಿಷ್ಟ ಅಭ್ಯರ್ಥಿಯನ್ನೇ ಬಿಜೆಪಿ ಕಣಕ್ಕೆ ಇಳಿಸಿದ್ದು, ಜೆಡಿಎಸ್ ಪಕ್ಷ ಕಾದು ನೋಡುವ ತಂತ್ರ ಹೆಣೆಯುತ್ತಿದೆ.

ಕಾಂಗ್ರೆಸ್ ಪಕ್ಷದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್:- ಸತತ ಏಳು ಭಾರಿ ಶಾಸಕರಾಗಿರುವ ಕನಕಪುರದ ಬಂಡೆ ಎಂದೆ ಚಿರಪರಿಚಿತರಾಗಿರುವ ಡಿ.ಕೆ.ಶಿವಕುಮಾರ್ ಈ ಭಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಸೋಲಿಲ್ಲದ ಸರದಾರ ಹಾಗೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಕ್ಷೇತ್ರದಲ್ಲಿ ಜನ ಮೆಚ್ಚಿದ ನಾಯಕರಾಗಿ ಬೆಳೆದಿದ್ದಾರೆ. ಇದಲ್ಲದೆ ಮುಂದೆ ಸಿಎಂ ಆಗಬೇಕೆಂಬ ಕನಸನ್ನು ಕೂಡ ಕಂಡಿದ್ದಾರೆ.

ಕನಕಪುರದಲ್ಲಿ ಡಿ.ಕೆ. ಶಿವಕುಮಾರ್‌ ಸೋಲಿಲ್ಲದ ಸರದಾರನಾಗಿದ್ದು, ಸತತ ಏಳು ಬಾರಿ ಗೆಲುವು ದಾಖಲಿಸಿದ್ದಾರೆ. ಈ ಬಾರಿ ಕೂಡ ಇಲ್ಲಿ ಏಕಮುಖವಾದ ಚುನಾವಣೆ ನಡೆಯಲಿದೆ ಎಂಬ ನಿರೀಕ್ಷೆ ಇತ್ತು. ಇದೀಗ ಬಿಜೆಪಿ ತನ್ನಲ್ಲಿನ ಒಕ್ಕಲಿಗ ಸಮುದಾಯದ ಪ್ರಬಲ ನಾಯಕನನ್ನು ಕೆಪಿಸಿಸಿ ಅಧ್ಯಕ್ಷರ ಎದುರು ನಿಲ್ಲಿಸಿದ್ದು, ಈ ಮೂಲಕ ಅವರನ್ನು ತವರಿನಲ್ಲಿ ತಕ್ಕ ಮಟ್ಟಿಗೆ ಕಟ್ಟಿಹಾಕುವ ಪ್ರಯತ್ನ ಮಾಡುತ್ತಿದೆ. ಕನಕಪುರದಲ್ಲಿ ಪಕ್ಷ ಸಂಘಟನೆ ಕಾಂಗ್ರೆಸ್‌ – ಜೆಡಿಎಸ್‌ನಷ್ಟು ಪ್ರಬಲವಾಗಿಲ್ಲ. ಕನಕಪುರದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಬಲ್ಲ ನಾಯಕರ ಕೊರತೆ ಇತ್ತು. ಇದೀಗ ಉಳಿದಿರುವ ದಿನಗಳಲ್ಲಿ ಪಕ್ಷ ಸಂಘಟನೆ ಜೊತೆಗೆ ಚುನಾವಣೆಗೆ ಅಶೋಕ್ ಅವರು ಸಿದ್ದರಾಗಬೇಕಿದೆ.

ಸಚಿವ ಆರ್. ಅಶೋಕ್

ಕನಕಪುರಕ್ಕೆ ಬಿಜೆಪಿಯಿಂದ ಸಚಿವ ಆರ್. ಅಶೋಕ್:-ಸಚಿವ ಆರ್. ಅಶೋಕ್ ತಮ್ಮ ಸ್ವಕ್ಷೇತ್ರವಾದ ಪದ್ಮನಾಭ ನಗರದ ಜೊತೆ ಕನಕಪುರದಲ್ಲೂ ಅವರು ಸ್ಪರ್ಧಿಸುತ್ತಿದ್ದಾರೆ. ಆರ್. ಅಶೋಕ್ ಅವರು ಕನಕಪುರದಲ್ಲಿ ರಾಜಕೀಯ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ. ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಾಧನೆ ಹೇಳಿಕೊಳ್ಳುವಂತೆ ಇಲ್ಲ. ಪ್ರತಿ ಬಾರಿಯೂ ಇಲ್ಲಿ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತ ಬಂದಿದ್ದಾರೆ.

2018 ರ ಚುನಾವಣೆಯಲ್ಲಿ ಇಲ್ಲಿ ನಂದಿನಿ ಗೌಡ ಕಣಕ್ಕೆ ಇಳಿದಿದ್ದರು. ಈ ಬಾರಿ ಅವರ ಜೊತೆಗೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಅಪ್ಪಾಜಿ ಗೌಡ ಸೇರಿದಂತೆ ಹಲವರ ಹೆಸರು ಕೇಳಿ ಬಂದಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 6,273 ಮತ ಗಳಿಸಲಷ್ಟೇ ಶಕ್ತರಾಗಿದ್ದರು. 2013ರಲ್ಲಿ ಇಲ್ಲಿ ಕಮಲ ಪಾಳಯದ ಅಭ್ಯರ್ಥಿ 1,807 ಮತ ಪಡೆದು ಮುಖಭಂಗ ಅನುಭವಿಸಿದ್ದರು. ಸದ್ಯ ಕನಕಪುರದಲ್ಲಿರುವ ಕಾಂಗ್ರೆಸ್ ಅಲೆಯ ನಡುವೆ ಕಮಲ ಅರಳಿಸುವ ಭಾರಿ ಸವಾಲು ಅಶೋಕ್ ಅವರಿಗೆ ಎದುರಾಗಿದೆ ಎಂದು ಹೇಳಬಹುದು.

ಗೌತಮ್ ಗೌಡ

ರಾಮನಗರ ಹಾಗೂ ಮಾಗಡಿ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಬಿಜೆಪಿ ಸರ್ಕಾರ ಇರುವುದರಿಂದ ಅವರು ಕೂಡ ಭಾರಿ ಪೈಪೋಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಟಿಕೆಟ್ ಆಕಾಂಕ್ಷಿಗಳಿಗೆ ನಿರಾಸೆ:ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಅದರಲ್ಲೂ ಪ್ರಬಲ ಆಕಾಂಕ್ಷಿಗಳಾಗಿದ್ದ ಮಾಗಡಿಯ ರಂಗಧಾಮಯ್ಯ, ರಾಮನಗರದ ಡಿ. ನರೇಂದ್ರ, ಡಾ. ಪುಣ್ಯವತಿ ತೀವ್ರ ನಿರಾಸೆ ಅನುಭವಿಸುವಂತಾಗಿದೆ. ಅವರ ಪ್ರತಿಕ್ರಿಯೆ ಏನು ಎಂಬುದನ್ನು ಕಾದು ನೋಡಬೇಕಿದೆ. ಇದಲ್ಲದೆ ಈ ಭಾರಿ ಚುನಾವಣೆ ಈ ಜಿಲ್ಲೆ ಭಾರಿ ರಂಗು ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಲಾಗಿತ್ತಿದೆ.

ಇದನ್ನೂ ಓದಿ:ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ರಾಜೀನಾಮೆ: ಜೆಡಿಎಸ್​ನಿಂದ ಸ್ಪರ್ಧಿಸುವ ಸಾಧ್ಯತೆ

Last Updated : Apr 14, 2023, 1:51 PM IST

ABOUT THE AUTHOR

...view details