ಕರ್ನಾಟಕ

karnataka

ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ: ತಹಶೀಲ್ದಾರ್‌ಗೆ ಸಚಿವ ಕೃಷ್ಣಭೈರೇಗೌಡ ತರಾಟೆ

By ETV Bharat Karnataka Team

Published : Jan 17, 2024, 10:33 AM IST

Updated : Jan 17, 2024, 12:04 PM IST

ರಾಯಚೂರಿನಲ್ಲಿ ಮಂಗಳವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಸಚಿವ ಕೃಷ್ಣಭೈರೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ
ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ

ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ

ರಾಯಚೂರು:"ಒಳ್ಳೆಯ ಮಾತಿಗೆ ನಿಮ್ಮಲ್ಲಿ ಮರ್ಯಾದೆ ಇಲ್ವಾ?. ಗೌರವ ಕೊಟ್ಟು ಕೇಳಿದರೆ ಸರಿಯಾಗಿ ಉತ್ತರ ಕೊಡುವುದಿಲ್ವಾ?. ನಿಮ್ಮ ಭಾಷೆಯಲ್ಲೇ ಕೇಳಬೇಕಾ?. ಇಷ್ಟು ದಿನ ಏನ್ ಕತ್ತೆ ಕಾಯುತ್ತಿದ್ದೀರಾ?" ಎಂದು ತಹಶೀಲ್ದಾರ್‌ರನ್ನು ಕಂದಾಯ ಸಚಿವ ಕೃಷ್ಣಭೈರೇಗೌಡ ತೀವ್ರ ತರಾಟೆಗೆ ತೆಗೆದುಕೊಂಡರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಈ ವೇಳೆ ತಹಶೀಲ್ದಾರ್ ಕಚೇರಿಯಲ್ಲಿ ಜನರ ಅರ್ಜಿಗಳನ್ನು ಇ-ಆಫೀಸ್ ಮೂಲಕ ಸ್ವೀಕರಿಸಬೇಕು, ಮ್ಯಾನುವಲ್​ ಆಗಿ ಅರ್ಜಿಗಳನ್ನು ತೆಗೆದುಕೊಳ್ಳಬೇಡಿ ಎಂದು ಸಚಿವರು ಎಚ್ಚರಿಕೆ ನೀಡಿದರು.

ಕೆಲವರು ಹಾಗೆಯೇ ಅರ್ಜಿಗಳನ್ನು ತೆಗೆದುಕೊಳ್ಳುತ್ತಿರುವ ಮಾಹಿತಿ ಪಡೆದ ಸಚಿವರು, "ಐದು ತಿಂಗಳಿನಿಂದ ಎಲ್ಲಾ ಕಡತಗಳನ್ನು ಇ-ಫೈಲಿಂಗ್​ ಮಾಡಿಯೇ ನೋಡಬೇಕು ಎಂದು ಸೂಚಿಸುತ್ತಿದ್ದೇನೆ. ಯಾರಿಗೆ ಯಾಮಾರಿಸುತ್ತಿದ್ದೀರಿ?. ನಿಮಗೆ ಕಷ್ಟವಾದರೂ ಏನು?. ಕಡತಗಳು ಮೂಮೆಂಟ್ ಆಗಬಾರದು, ಜನರ ಕಣ್ಣಿಗೆ, ಮೇಲೆಯವರ ಕಣ್ಣಿಗೆ ಕಾಣಬಾರದು ಅಲ್ಲವೇ?. ಕಡತಗಳು ಈ ಟೇಬಲ್​ನಿಂದ ಆ ಟೇಬಲ್​ಗೆ 3 ತಿಂಗಳು, ಮತ್ತೆ ಆ ಆಫೀಸ್​ನಿಂದ ಈ ಆಫೀಸ್​ಗೆ 6 ತಿಂಗಳು. ಒಟ್ಟಿನಲ್ಲಿ ಜನರು ಹೈರಾಣಾಗಬೇಕು. ಇಷ್ಟೆ ಅಲ್ವಾ ನಿಮ್ಮ ಉದ್ದೇಶ?" ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಲಬುರಗಿ ಜಿಲ್ಲೆಯವರು ತಂತ್ರಾಂಶದಲ್ಲಿ ಕೆಲಸ ಮಾಡುತ್ತಿದ್ದಾರೆ. ನಿಮ್ಮದೇನು ಸಮಸ್ಯೆ? ಎಂದು ಗದರಿದಾಗ ಅಧಿಕಾರಿ "ಮಾಡುತ್ತೇವೆ ಸರ್" ಎಂದು ಉತ್ತರಿಸಿದರು.

ಸಭೆಯ ಕೊನೆಯಲ್ಲಿ ಸಚಿವರು, "ಫ್ರೆಬವರಿ 1ನೇ ತಾರೀಖಿನಿಂದ ಯಾವುದೇ ಕಾರಣಕ್ಕೂ ಮ್ಯಾನುವಲ್​ ಆಗಿ ಫೈಲ್‌ಗಳನ್ನು ಸ್ವೀಕರಿಸಬಾರದು. ಇ-ಆಫೀಸ್ ಮೂಲಕವೇ ಸ್ವೀಕರಿಸಬೇಕು" ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. "ಈ ವಿಚಾರವಾಗಿ ಜಿಲ್ಲೆಯ ಮೇಲೆ ನನ್ನ ನಿಗಾ ಇರುತ್ತದೆ. ಈ ವ್ಯವಸ್ಥೆ ಜಾರಿಗೆ ತರುವಲ್ಲಿ ಅಧಿಕಾರಿಗಳು ವಿಫಲಗೊಂಡರೆ ಏನು ಮಾಡಬೇಕೋ ಅದನ್ನು ಮಾಡಿ ತೋರಿಸುತ್ತೇನೆ" ಎಂದು ಎಚ್ಚರಿಸಿದರು.

ಇದನ್ನೂ ಓದಿ:ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಅದಿರು ಸಾಗಾಣಿಕೆಗೆ ಅನುಮತಿ ಕೋರಿದ್ದ ಅರ್ಜಿ ವಜಾ

Last Updated : Jan 17, 2024, 12:04 PM IST

ABOUT THE AUTHOR

...view details