ಕರ್ನಾಟಕ

karnataka

ಕೃಷ್ಣಾ ನದಿ ಸೇತುವೆ ರಸ್ತೆ ಶಿಥಿಲ; 45 ದಿನ ವಾಹನ ಸಂಚಾರ ಬಂದ್

By ETV Bharat Karnataka Team

Published : Jan 7, 2024, 11:10 AM IST

Updated : Jan 7, 2024, 11:17 AM IST

ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಶಕ್ತಿನಗರ ಸಮೀಪದ ಕೃಷ್ಣಾನದಿಯ ಸೇತುವೆ ರಸ್ತೆ ಸಂಪೂರ್ಣ ಹಾಳಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದುರಸ್ತಿ ಕಾರ್ಯ ಕೈಗೊಂಡಿದೆ.

DySP Satyanarayana Rao spoke in the preliminary meeting.
ಪೂರ್ವಭಾವಿ ಸಭೆಯಲ್ಲಿ ಡಿವೈಎಸ್ಪಿ ಸತ್ಯನಾರಾಯಣರಾವ್ ಮಾತನಾಡಿದರು.

ಕೃಷ್ಣಾ ನದಿ ಸೇತುವೆ ರಸ್ತೆ ಶಿಥಿಲ

ರಾಯಚೂರು: ಅಂತಾರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಕೃಷ್ಣಾನದಿ ಸೇತುವೆ ‌ರಸ್ತೆ ಸಂಪೂರ್ಣ ಶಿಥಿಲಗೊಂಡಿದ್ದು, ದುರಸ್ತಿ ಕಾಮಗಾರಿಯ ಹಿನ್ನೆಲೆಯಲ್ಲಿ ಮುಂದಿನ 45 ದಿನಗಳವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಉಪ‌ಅಧೀಕ್ಷಕ ಸತ್ಯನಾರಾಯಣರಾವ್ ತಿಳಿಸಿದ್ದಾರೆ. ರಾಯಚೂರು ತಾಲೂಕಿನ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಶನಿವಾರ, ಕೃಷ್ಣಾ ಸೇತುವೆ ರಸ್ತೆ ದುರಸ್ತಿ ಕಾಮಗಾರಿ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳ ಸಂಪರ್ಕ ಕಲ್ಪಿಸುವ ಶಕ್ತಿನಗರ ಬಳಿಯ ಕೃಷ್ಣಾನದಿಯ ಸೇತುವೆ ‌ರಸ್ತೆ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇತುವೆ ದುರಸ್ತಿ ಕಾರ್ಯ ಕೈಗೊಂಡಿದೆ. ಜ.10ರಿಂದ 45 ದಿನಗಳವರೆಗೆ ಶಕ್ತಿನಗರದ ಕೃಷ್ಣಾ ಸೇತುವೆ ಮಾರ್ಗವಾಗಿ ಚಲಿಸುವ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಯಚೂರು-ಹೈದರಾಬಾದ್ ಎನ್‌ಎಚ್-167ರ ಮಾರ್ಗದ ಕೃಷ್ಣಾ ಸೇತುವೆ ಮಾರ್ಗವಾಗಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೆಚ್ಚು ವಾಹನಗಳ ಸಂಚಾರದಿಂದ ಸೇತುವೆ ಮತ್ತಷ್ಟು ಹದಗೆಡುವ ಸಾಧ್ಯತೆಗಳಿವೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಹೆದ್ದಾರಿ ಪ್ರಾಧಿಕಾರದಿಂದ ಈಗಾಗಲೇ ಸೇತುವೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಮುಗಿಯುವವರೆಗೆ ವಾಹನ ಸಂಚಾರವನ್ನು ಸಂಪೂರ್ಣ ತಡೆಯಲಾಗುವುದು ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಈ ಸಭೆ‌ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರೊಂದಿಗೆ ಚರ್ಚಿಸಿ ಸಂಚಾರ ಬದಲಾವಣೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಈ ಹಿಂದೆ ಸೇತುವೆಯ ರಸ್ತೆ ಹಾಳಾಗಿದ್ದಾಗ ವಾಹನಗಳು ಸೇತುವೆ ನಡುವೆ ಕೆಟ್ಟು ನಿಂತು ಗಂಟೆಗಟ್ಟಲೆ ನಿಲುಗಡೆಯಾಗುತ್ತಿದ್ದವು. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡು ವಾಹನಗಳ ಚಾಲಕರು, ಮಾಲೀಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು ಎಂದು ಹೇಳಿದರು.

ಪರ್ಯಾಯ ಮಾರ್ಗ: ರಾಯಚೂರು-ಹೈದರಾಬಾದ್‌ಗೆ ಸಂಚರಿಸುವ ವಾಹನಗಳು ಬೇರೆ ಮಾರ್ಗದ ಮೂಲಕ ಸಾಗುವುದು ಸೂಕ್ತ. ಗೂಗಲ್, ತಿಂಥಿಣಿ ಬ್ರಿಡ್ಜ್, ಸೈದಾಪುರ ಮಾರ್ಗದ ಮೂಲಕ ಹೋಗಬಹುದು. ಈ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆದೇಶ ಹೊರಡಿಸಿ ಸಾರ್ವಜನಿಕವಾಗಿ ಮಾಹಿತಿ ಒದಗಿಸಲಾಗುವುದು ಎಂದು ಅವರು ವಿವರ ನೀಡಿದರು.

ಇದನ್ನೂಓದಿ:ರಾಮಮಂದಿರ ಉದ್ಘಾಟನೆಯಂದು ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

Last Updated : Jan 7, 2024, 11:17 AM IST

ABOUT THE AUTHOR

...view details