ಕರ್ನಾಟಕ

karnataka

ಸ್ಯಾಂಟ್ರೋ ರವಿಯಿಂದ ನೊಂದ ಅಮಾಯಕರಿಗೆ ಸಿಐಡಿ ನ್ಯಾಯ ಕೊಡಿಸಬೇಕು: ಸ್ಟಾಲಿನ್

By

Published : Jan 18, 2023, 2:30 PM IST

ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿಗೆ ಕೊಟ್ಟಿರುವುದು ಸ್ವಾಗತಾರ್ಹ. ಈತನಿಂದ ಕಳೆದ 20 ವರ್ಷಗಳಲ್ಲಿ ಹಲವಾರು ಜನ ಅಮಾಯಕರು ನೊಂದಿದ್ದಾರೆ. ಅನೇಕರ ಮೇಲೆ ಸುಳ್ಳು ಕೇಸ್​ಗಳನ್ನು ಕೊಟ್ಟು ಹೆಣ್ಣು ಮಕ್ಕಳನ್ನು, ದಕ್ಷ ಅಡಳಿತಾಧಿಕಾರಿಗಳನ್ನು ಸಿಲುಕಿಸಿ ನರಳಿಸಿದ್ದಾನೆ. ನೊಂದ ಅಮಾಯಕರಿಗೆ ಸಿಐಡಿ ನ್ಯಾಯ ಕೊಡಿಸಬೇಕು ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟಾಲಿನ್ ಹೇಳಿದ್ದಾರೆ.

stalin
ಸ್ಟಾಲಿನ್

ಈಟಿವಿ ಭಾರತದ ಜೊತೆ ಮಾತನಾಡಿದ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟಾಲಿನ್

ಮೈಸೂರು: ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿಗೆ ರಾಜ್ಯ ಸರ್ಕಾರ ವಹಿಸಿರುವುದು ಸ್ವಾಗತಾರ್ಹ. ಕಳೆದ 20 ವರ್ಷಗಳಿಂದ ಈತನಿಂದ ನೊಂದಿರುವ ಅಮಾಯಕರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಸಿಐಡಿ ಮಾಡಬೇಕು ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟಾಲಿನ್ ಒತ್ತಾಯಿಸಿದ್ದಾರೆ.

ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿಗೆ ಕೊಟ್ಟಿರುವುದು ಸ್ವಾಗತಾರ್ಹ. ಸಿಐಡಿ ನಮ್ಮ ರಾಜ್ಯದ ಅತ್ಯುನ್ನತ ತನಿಖಾ ಸಂಸ್ಥೆ. ಹಲವಾರು ಕ್ಲಿಷ್ಟಕರ ಪ್ರಕರಣಗಳನ್ನ ಬೇಧಿಸಿದೆ. ನಮ್ಮ ಸಂಸ್ಥೆಯ ವಿನಂತಿ ಏನೆಂದರೆ, ಸ್ಯಾಂಟ್ರೋ ರವಿಯನ್ನು ಈ ಒಂದು ಪ್ರಕರಣಕ್ಕೆ ಸೀಮಿತಗೊಳಿಸಿ ನ್ಯಾಯ ಕೊಡಿಸಿದರೆ ಸಾಲದು, ಈತನಿಂದ ಕಳೆದ 20 ವರ್ಷಗಳಲ್ಲಿ ಹಲವಾರು ಜನ ಅಮಾಯಕರು ನೊಂದಿದ್ದಾರೆ. ಅನೇಕರ ಮೇಲೆ ಸುಳ್ಳು ಕೇಸ್​ಗಳನ್ನ ಕೊಟ್ಟು ಹೆಣ್ಣು ಮಕ್ಕಳನ್ನು, ದಕ್ಷ ಅಡಳಿತಾಧಿಕಾರಿಗಳನ್ನು ಸಿಲುಕಿಸಿ ನರಳಿಸಿದ್ದಾನೆ. ಈ ಎಲ್ಲಾ ಘಟನೆಗಳ ಸಮಗ್ರ ತನಿಖೆಯನ್ನ ಮಾಡಬೇಕು. ಸಿಐಡಿ ತನಿಖೆ ಕೇವಲ ನೆಪ ಮಾತ್ರಕ್ಕೆ ಆಗಬಾರದು ಎಂಬುದು ನನ್ನ ಮನವಿ ಎಂದರು.

ನೊಂದವರಿಗೆ ನ್ಯಾಯ ದೊರಕಬೇಕು: ಸ್ಯಾಂಟ್ರೋ ರವಿ ವಿರುದ್ಧ ದೂರು ನೀಡಿರುವ ಸಂತ್ರಸ್ತೆ ತಂದೆ ಮದುವೆ ಮಾಡುವಾಗ 200 ಗ್ರಾಂ ಚಿನ್ನ ಕೊಟ್ಟಿದ್ದರು. ಅದನ್ನು ಸಹ ರವಿ ಕಿತ್ತುಕೊಂಡಿದ್ದಾನೆ. ಜೊತೆಗೆ ಚೆಕ್ ಬುಕ್, ಮೊಬೈಲ್ ಹಾಗೂ ಟು ವ್ಹೀಲರ್ ಬೈಕ್ ಇಟ್ಟುಕೊಂಡಿದ್ದಾನೆ. ಅದನ್ನು ಅವರಿಗೆ ವಾಪಸ್ ಕೊಡಿಸಬೇಕು. ಜೊತೆಗೆ ಸಂತ್ರಸ್ತೆಯ ಮೊಬೈಲ್​ನಲ್ಲಿ ಮಹತ್ವದ ದಾಖಲೆಗಳಿದ್ದು, ಅದನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ತನಿಖೆಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ:ಸ್ಯಾಂಟ್ರೋ ರವಿ ಒಬ್ಬ ಕ್ರಿಮಿನಲ್, ಆತನ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ: ಕೆ ಗೋಪಾಲಯ್ಯ

ನಾವು ಪೊಲೀಸರಿಗೆ ಹಿಡಿದು ಕೊಟ್ಟಿದ್ದೆವು: ಸ್ಯಾಂಟ್ರೋ ರವಿ ಮೈಸೂರಿನ ವಿಜಯನಗರ ಬಡಾವಣೆ ಸೇರಿದಂತೆ ಹಲವೆಡೆ ಇದೇ ರೀತಿಯ ಕೆಲಸಗಳನ್ನು ಮಾಡುತ್ತಿದ್ದನು. ಈತನನ್ನ ಕಳೆದ 22 ವರ್ಷಗಳ ಹಿಂದೆಯೇ ಪೊಲೀಸರಿಗೆ ಹಿಡಿದು ಕೊಡಲು ಸಹಕರಿಸಿದ್ದೆವು. ಹಲವಾರು ಬಾರಿ ಸಿಕ್ಕಿಬಿದ್ದಿದ್ದಾನೆ. ರವಿ ವಿರುದ್ಧ ತಿರುಗಿ ಬೀಳುವ ಯುವತಿಯರಾಗಲಿ, ಅಧಿಕಾರಿಗಳಾಗಲಿ, ಇತರೆ ಯಾವುದೇ ವ್ಯಕ್ತಿಗಳ ವಿರುದ್ಧ ನಕಲಿ ಕಂಪ್ಲೆಂಟ್ ನೀಡುತ್ತಿದ್ದ. ಜೊತೆಗೆ ಯುವತಿಯರು ಈತನ ವಿರುದ್ಧ ತಿರುಗಿ ಬಿದ್ದರೆ 10 ಲಕ್ಷ ಕೇಳಿದ್ದಾಳೆ ಎಂದು ದೂರು ನೀಡುತ್ತಿದ್ದ. ಉದಾಹರಣೆಗೆ 2000ನೇ ಇಸವಿಯಲ್ಲಿ 10 ಲಕ್ಷ, 2014ರಲ್ಲಿ 10 ಲಕ್ಷ, ಈಗ ದೂರು ನೀಡಿರುವ ಸಂತ್ರಸ್ತೆಯ ವಿರುದ್ಧವೂ ಸಹ 10 ಲಕ್ಷ ತೆಗೆದು ಕೊಂಡಿದ್ದಾಳೆ ಎಂದು ಆರೋಪಿಸಿದ್ದಾನೆ. ಈತ ಯಾವುದೇ ದೂರು ನೀಡಿದರೂ 10 ಲಕ್ಷ ಎಂಬುದು ಸಿಗ್ನೇಚರ್ ಅಮೌಂಟ್ ಎಂದು ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟಾಲಿನ್ ಹೇಳಿದರು.

ಈತ ತನ್ನ ವಿರುದ್ಧ ತಿರುಗಿ ಬಿದ್ದ ಹೆಣ್ಣು ಮಕ್ಕಳ ಮೇಲೆ ಕೇಸ್ ಹಾಕಿಸುತ್ತಿದ್ದ. ಅದೇನೆಂದರೆ, ಗಾಂಜಾ ಅಫೀಮು ಹೊಂದಿದ್ದಾರೆ ಎಂದು ಕೇಸ್ ಹಾಕಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ. ಈ ತರಹದ ಹಿಂಸೆಗಳನ್ನು ಕಳೆದ 20 ವರ್ಷಗಳಿಂದ ನೀಡುತ್ತಾ ಬಂದಿದ್ದಾನೆ. ಈತನ ಸುಳ್ಳು ಕೇಸ್​ಗಳಿಗೆ, ಮಾನಸಿಕ ಕಿರುಕುಳಕ್ಕೆ ಹಲವಾರು ಕುಟುಂಬಗಳು ನೊಂದಿವೆ. ಜೊತೆಗೆ ಈತನ ದೌರ್ಜನ್ಯಕ್ಕೆ ಕೆಲವು ಅಧಿಕಾರಿಗಳು ಸಹ ಸಿಲುಕಿದ್ದು, ಕೂಡಲೇ ಸಿಐಡಿ ತನಿಖಾಧಿಕಾರಿಗಳು ಈ ಎಲ್ಲಾ ದೃಷ್ಟಿಕೋನಗಳಿಂದ ತನಿಖೆ ಮಾಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ:ಸಿಐಡಿ ಪಾರದರ್ಶಕವಾಗಿ ತನಿಖೆ ನಡೆಸಲಿ: ಸ್ಯಾಂಟ್ರೋ ರವಿ ವಿರುದ್ಧ ಎರಡನೇ ಪ್ರಕರಣ ದಾಖಲಿಸಿದ ಮಹಿಳೆ

ABOUT THE AUTHOR

...view details