ಕರ್ನಾಟಕ

karnataka

ಮೈಸೂರಿನಲ್ಲಿ 'ನನ್ನ ಮತ ಮಾರಾಟಕ್ಕಿಲ್ಲ' ಅಭಿಯಾನಕ್ಕೆ ಚಾಲನೆ

By

Published : Feb 1, 2023, 1:52 PM IST

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ನನ್ನ ಮತ ಮಾರಾಟಕ್ಕಿಲ್ಲ ಅಭಿಯಾನ. ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಇಂದು ಚಾಲನೆ.

My Vote Is Not For Sale campaign
'ನನ್ನ ಮತ ಮಾರಾಟಕ್ಕಿಲ್ಲ' ಅಭಿಯಾನಕ್ಕೆ ಚಾಲನೆ

'ನನ್ನ ಮತ ಮಾರಾಟಕ್ಕಿಲ್ಲ' ಅಭಿಯಾನಕ್ಕೆ ಚಾಲನೆ

ಮೈಸೂರು: ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ 'ನನ್ನ ಮತ ಮಾರಾಟಕ್ಕಿಲ್ಲ' ಅಭಿಯಾನಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಇಂದು (ಬುಧವಾರ) ಚಾಲನೆ ನೀಡಲಾಯಿತು. ರಾಜ್ಯದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಗೆ ನಡೆಯಲಿದೆ. ಈ ಹಿಂದೆಂದಿಗಿಂತಲೂ ರಾಜಕಾರಣಿಗಳು ಮತದಾರರಿಗೆ ಆಮಿಷ ಒಡ್ಡುವ ಸಾಧ್ಯತೆ ಬಹಳ ಇದೆ. ಆದರೆ, ನಾವು ಮತವನ್ನು ಮಾರಿಕೊಳ್ಳುವುದಿಲ್ಲ ಎಂದು ಎಲ್ಲರೂ ಪ್ರತಿಜ್ಞೆ ಮಾಡಿದರು.

ದಿಟ್ಟ ಕ್ರಮ ಅಗತ್ಯ:ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, "ಈ ಕೃತ್ಯಕ್ಕೆ ಚುನಾವಣಾ ಆಯೋಗ ಕಡಿವಾಣ ಹಾಕುವ ಕೆಲಸವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮುಖ್ಯ ಚುನಾವಣಾ ಆಯುಕ್ತರು ದಿಟ್ಟ ಕ್ರಮವಹಿಸುವ ಅವಶ್ಯಕತೆ ಇದೆ. ಪ್ರಜೆಗಳಾದ ನಾವು ಚುನಾವಣೆಗಳಲ್ಲಿ ಹಣ, ಹೆಂಡ ಇತರ ಆಮಿಷಗಳಿಗೆ ಮತ ಮಾರಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿ, ಮುಂದಿನ ಚುನಾವಣೆಯಲ್ಲಿ ಪ್ರಜ್ಞಾಪೂರ್ವಕವಾಗಿ ಮತ ಚಲಾಯಿಸುವ ಅವಶ್ಯಕತೆ ಇದೆ. ಆ ಮೂಲಕ ಸಂವಿಧಾನವನ್ನು ಉಳಿಸಿ, ಬೆಳೆಸುವ ದಿಟ್ಟ ಆಶಯವನ್ನು ಮತದಾರರು ಪ್ರದರ್ಶಿಸಬೇಕು" ಎಂದು ಹೇಳಿದರು.

ಪ್ರಜಾಪ್ರಭುತ್ವದ ಅಣಕ:ಇತ್ತೀಚಿಗೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಬಹಿರಂಗ ಸಭೆಯಲ್ಲಿ ಮತದಾರರಿಗೆ ಒಂದು ಮತಕ್ಕೆ 6 ಸಾವಿರ ರೂ.ಗಳನ್ನು ಕೊಟ್ಟು ಮತ ಖರೀದಿ ಮಾಡುತ್ತೇವೆ ಎಂದು ಹೇಳಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ಇವರ ಮೇಲೆ ಚುನಾವಣಾ ಆಯೋಗ ಕ್ರಮ ಜರುಗಿಸುವ ಮೂಲಕ ಆಯೋಗ ತನ್ನ ಶಕ್ತಿಯನ್ನು ತೋರಿಸಬೇಕು ಮತ್ತು ಪ್ರಜಾಪ್ರಭುತ್ವದ ಆಶಯವನ್ನು ಈಡೇರಿಸಬೇಕು. ಇಲ್ಲದಿದ್ದರೆ ಚುನಾವಣಾ ಆಯೋಗ ಇದ್ದು ಕೂಡ ಸತ್ತಂತೆ ಎಂದು ಬೇಸರ ವ್ಯಕ್ತಪಡಿಸಿದರು.

ದೃಢ ಸಂಕಲ್ಪ ಮಾಡಬೇಕು:ಪ್ರಸ್ತುತ ಸಮಾಜದಲ್ಲಿ ರಾಜಕಾರಣಿಗಳು ಮತ್ತು ಬಂಡವಾಳಶಾಹಿಗಳಿಂದ ಮತದಾರರು ತನ್ನ ಅಸ್ತಿತ್ವ ಕಳೆದುಕೊಂಡಿದ್ದಾರೆ. ಕಳೆದುಕೊಂಡಿರುವ ಮೌಲ್ಯವನ್ನು ಮರಳಿ ಪಡೆಯಬೇಕಾದರೆ ಮತವನ್ನು ಮಾರಿಕೊಳ್ಳುವ ಸಂಸ್ಕಂತಿಯಿಂದ ಆಚೆ ಬರಬೇಕು. ಮತದಾರರಾದ ನಾವು ಮತವನ್ನು ಮಾರಿಕೊಳ್ಳುವುದಿಲ್ಲ ಎಂದು ದೃಢ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವಕ್ಕೆ ಗಂಡಾಂತರ:ಹಣ, ಜಾತಿ, ಆಮಿಷಕ್ಕೆ ದಬ್ಬಾಳಿಕೆಗೆ ಮತಗಳು ಮಾರಾಟವಾಗುವುದು ಪ್ರಜಾಪ್ರಭುತ್ವಕ್ಕೆ ಗಂಡಾಂತರ. ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಿಂದ ಭಾರತದಲ್ಲಿ ಮಾದರಿಯಾದ, ಶ್ರೇಷ್ಠವಾದ ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಹೊಂದಿದ್ದೇವೆ. ಆದರ್ಶ ಪ್ರಜಾಪ್ರಭುತ್ವವನ್ನು ರಕ್ಷಿಸಿ, ಮತ್ತಷ್ಟು ಶಕ್ತಿಶಾಲಿಯಾಗಿ ಮಾಡಬೇಕಾದದ್ದು ನಮ್ಮೆಲ್ಲರ ಹೊಣೆ. ಹಿರಿಯರು, ಕಿರಿಯರು, ಮತ್ತು ಯುವ ಸಮುದಾಯ ಜವಾಬ್ದಾರಿಯಿಂದ ಪ್ರಜಾಪ್ರಭುತ್ವದ ಕಾವಲುಗಾರರಾಗಿ ಕೆಲಸ ಮಾಡಬೇಕು ಎಂದು ಕೆ.ಎಸ್.ಶಿವರಾಮು ಆಗ್ರಹಿಸಿದರು.

ಜನಾಂದೋಲನದ ಅಗತ್ಯವಿದೆ ಎಂದಿದ್ಧ ಕಾಗೇರಿ: ಕಳೆದ ವರ್ಷ ಮಂಗಳೂರಿನಲ್ಲಿ ನಡೆದ 'ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ' ಕಾರ್ಯಕ್ರಮದಲ್ಲಿ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ, ಇಂದು ಮತ ಮಾರಾಟಕ್ಕಿಲ್ಲ ಆಂದೋಲನ ನಡೆಯಬೇಕು ಎಂದು ಹೇಳಿದ್ದರು. ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಂಡಿದ್ದ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಹುಮುಖ್ಯವಾಗಿ ಯುವಕರು ಈ ವ್ಯವಸ್ಥೆಯ ಕಾವಲುಗಾರರಾಗಬೇಕು. ಪೊಲೀಸರು ವ್ಯವಸ್ಥೆಗಳ ಕಾವಲುಗಾರರೆಂದು ಬಿಡೋದು ನಮ್ಮ ಜವಾಬ್ದಾರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರಾಷ್ಟ್ರದ ಭವಿಷ್ಯ ನಿರ್ಮಿಸುವಲ್ಲಿ ಯುವಕರ ಪಾತ್ರ ಮಹತ್ವದ್ದು ಎಂದು ಹೇಳಿದ್ದರು.

ಇದನ್ನೂ ಓದಿ:ನನ್ನ ಮತ ಮಾರಾಟಕ್ಕಿಲ್ಲ, ಜನಾಂದೋಲನದ ಅಗತ್ಯವಿದೆ: ಸ್ಪೀಕರ್​ ಕಾಗೇರಿ

ABOUT THE AUTHOR

...view details