ಕರ್ನಾಟಕ

karnataka

ರಾಜ್ಯದಲ್ಲಿ ಹಿಜಾಬ್ ನಿಷೇಧ ಹಿಂತೆಗೆದುಕೊಳ್ಳುತ್ತೇವೆ: ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Dec 22, 2023, 8:36 PM IST

Updated : Dec 22, 2023, 10:26 PM IST

Karnataka government to withdraw hijab ban: ಹಿಜಾಬ್ ನಿಷೇಧ ಆದೇಶವನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

CM Siddaramaiah
CM Siddaramaiah

ರಾಜ್ಯದಲ್ಲಿ ಹಿಜಾಬ್ ನಿಷೇಧ ವಾಪಸ್

ಮೈಸೂರು:ರಾಜ್ಯದಲ್ಲಿ ಹಿಜಾಬ್ ನಿಷೇಧ ಆದೇಶವನ್ನು ಸರ್ಕಾರ ವಾಪಸ್ ತೆಗೆದುಕೊಳ್ಳಲಿದೆ. ಯಾವ ಡ್ರೆಸ್ ಹಾಕಿಕೊಂಡರೆ ನಮಗೇನು? ಅದು ಅವರವರ ಇಚ್ಚೆ. ಯಾವ ಊಟವನ್ನಾದ್ರೂ ಮಾಡ್ರಪ್ಪ, ನಮಗೇನು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಂಜನಗೂಡು ತಾಲ್ಲೂಕಿನ ಕವಲಂದೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಮೈಸೂರು ಜಿಲ್ಲಾ ಪೊಲೀಸ್ ಘಟಕದಿಂದ ನಿರ್ಮಾಣ ಮಾಡಲಾಗಿದ್ದ ಪೊಲೀಸ್ ಠಾಣೆ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕೇಳಿಬಂದ ಹಿಜಾಬ್​ ಕುರಿತ ಪ್ರಶ್ನೆಗೆ, ಎಲ್ಲರೂ ಹಿಜಾಬ್ ಹಾಕಿಕೊಂಡು ಹೋಗಬಹುದು. ಆದೇಶ ಹಿಂಪಡೆಯಲು ಹೇಳಿದ್ದೇನೆ. ನಾನು ಧೋತಿ, ಜುಬ್ಬ ಹಾಕಿಕೊಳ್ಳುವೆ, ನೀನು ಪ್ಯಾಂಟ್ ಶರ್ಟ್ ಹಾಕಿಕೊಂಡರೆ ಹಾಕಿಕೋ, ಇದರಲ್ಲಿ ತಪ್ಪೇನಿದೆ?. ಮತಕ್ಕಾಗಿ ರಾಜಕಾರಣ ಮಾಡುವುದು ತಪ್ಪು. ಬಡವರಿಗಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತದೆ ಎಂದರು.

ಹಿಜಾಬ್ ವಿವಾದ ಕುರಿತ ಮಹತ್ವದ ಬೆಳವಣಿಗೆಗಳು:

  • 2021ರ ಡಿಸೆಂಬರ್ 28ರಂದು ಕರ್ನಾಟಕದಲ್ಲಿ ವಿವಾದ ಆರಂಭವಾಯಿತು. ಹಿಜಾಬ್ ಧರಿಸಿ ಬಂದಿದ್ದ 6 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ತರಗತಿಗೆ ಪ್ರವೇಶ ನಿರಾಕರಿಸಲಾಗಿತ್ತು.
  • ನಂತರ ನಡೆದ ಮಹತ್ವದ ಬೆಳವಣಿಗೆಯಲ್ಲಿ ಆಗಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಕಳೆದ ಫೆಬ್ರವರಿಯಲ್ಲಿ ಶಾಲಾ ತರಗತಿಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದನ್ನು ನಿಷೇಧಿಸಿತ್ತು. ಸಮಾನತೆ, ಸೌಹಾರ್ದತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ವಸ್ತ್ರಗಳನ್ನು ಧರಿಸದಂತೆ ಆದೇಶದಲ್ಲಿ ತಿಳಿಸಿತ್ತು.
  • ಸರ್ಕಾರದ ಪ್ರಕಾರ, ತರಗತಿಗಳಲ್ಲಿ ಹಿಜಾಬ್ ನಿಷೇಧ ಕ್ರಮವು ಸಂವಿಧಾನ ಮೂಲಭೂತ ಹಕ್ಕಾದ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯವನ್ನು ಮೀರುವುದಿಲ್ಲ.
  • ಸರ್ಕಾರದ ನಿಷೇಧ ಕ್ರಮವು ರಾಜ್ಯಾದ್ಯಂತ ಮುಸ್ಲಿಂ ಸಂಘಟನೆಗಳ ಪ್ರತಿಭಟನೆಗೆ ಕಾರಣವಾಗಿತ್ತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.
  • ಈ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌, ತರಗತಿಗಳಲ್ಲಿ ಹಿಜಾಬ್ ನಿಷೇಧಿಸಿದ ಸರ್ಕಾರದ ಕ್ರಮವನ್ನು ಎತ್ತಿ ಹಿಡಿಯಿತು. ಹಿಜಾಬ್ ಇಸ್ಲಾಂನ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ ಎಂದು ಕಳೆದ ಮಾರ್ಚ್‌ ತಿಂಗಳಲ್ಲಿ ಐತಿಹಾಸಿಕ ತೀರ್ಪು ನೀಡಿತ್ತು.
  • ಮುಂದೆ ಈ ವಿವಾದ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. 2022ರ ಅಕ್ಟೋಬರ್‌ನಲ್ಲಿ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್‌ನ ದ್ವಿಸದಸ್ಯ ಪೀಠ ಈ ಕುರಿತು ವಿಭಜಿತ ತೀರ್ಪು (split verdict) ನೀಡಿತು.

ಹಿಜಾಬ್​ ಬಗ್ಗೆ ಸಿಎಂ ಎಕ್ಸ್​ ಪೋಸ್ಟ್​​:"ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿಜಾಬ್ ನಿಷೇಧವನ್ನು ವಾಪಸ್ ಪಡೆಯಲು ತಿಳಿಸಿದ್ದೇನೆ" ಎಂದು ಸಿಎಂ ಬರೆದುಕೊಂಡಿದ್ದಾರೆ.

ಜನರೇ ನಮ್ಮ ಮಾಲೀಕರು:ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಮೈಸೂರು ಜಿಲ್ಲಾ ಪೊಲೀಸ್ ಘಟಕದಿಂದ ನಿರ್ಮಾಣ ಮಾಡಲಾಗಿದ್ದ ಪೊಲೀಸ್ ಠಾಣೆ ಉದ್ಘಾಟಿಸಿದ ಬಳಿಕ ಮಾತನಾಡುತ್ತಾ ಸಿಎಂ, ಜನರು ಕೊಡುವ ತೆರಿಗೆ ಹಣದಲ್ಲಿ ನಾವು ಮತ್ತು ಅಧಿಕಾರಿಗಳು ಸಂಬಳ ತೆಗೆದುಕೊಳ್ಳುತ್ತೇವೆ. ನಾವು ಜನಸೇವೆ ಮಾಡಲು ಬಂದಿದ್ದೇವೆ. ಜನರು ನಮಗೆ ಮತ ನೀಡಿ ಕಳುಹಿಸಿದ್ದಾರೆ. ಜನರ ಹಣದಲ್ಲಿ ನಾವು ಸಂಬಳ ತೆಗೆದುಕೊಳ್ಳುತ್ತಿದ್ದೇವೆ ಎಂಬುದು ಪ್ರತಿಯೊಬ್ಬ ಅಧಿಕಾರಿಗಳಲ್ಲೂ ಇರಬೇಕು ಎಂದು ತಿಳಿಸಿದರು.

ಪ್ರತಿ ಪೊಲೀಸ್ ಠಾಣೆಯಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಬರುವ ಜನರನ್ನು ಪೊಲೀಸರು ಗೌರವದಿಂದ ಕುಳ್ಳಿರಿಸಿ, ಕಷ್ಟ ಸುಖಗಳನ್ನು ಕೇಳಬೇಕು. ಪ್ರತಿಯೊಂದು ಪೊಲೀಸ್ ಠಾಣೆಯೂ ಜನಸ್ನೇಹಿ ಪೊಲೀಸ್ ಠಾಣೆ ಆಗಬೇಕು. ನಾಗರಿಕ ಭಾಷೆ ಬಳಸಲು ಪೊಲೀಸರು ಕಲಿತುಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿರಬೇಕು. ಉತ್ತಮ ಜನಸ್ನೇಹಿ ಪೊಲೀಸರಿದ್ದಾಗ ಮಾತ್ರ ಜನರು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪೊಲೀಸ್ ಠಾಣೆ ಇರುವುದು ದರ್ಪ, ದಬ್ಬಾಳಿಕೆ ಮಾಡಿದವರಿಗೆ ಅಲ್ಲ. ದುರ್ಬಲ ಜನರಿಗೆ ಕಾನೂನಿನಿಂದ ಪೊಲೀಸರು ನ್ಯಾಯ ಕೊಡಿಸಬೇಕು. ಆಗ ಮಾತ್ರ ಜನಸ್ನೇಹಿ ಪೊಲೀಸರಾಗಲು ಸಾಧ್ಯ. ಕೆಲವೆಡೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಹಣ ಇದ್ದವರಿಗಷ್ಟೇ ನ್ಯಾಯ ಸಿಗುತ್ತಿದೆ ಅನ್ನೋದು ಆಗಬಾರದು. ಪೊಲೀಸರು ಯಾವುದೇ ಕಾರಣಕ್ಕೂ ಶ್ರೀಮಂತರು ಹಾಗೂ ಬಲಾಢ್ಯರ ಜೊತೆ ಸೇರಬಾರದು. ಅವರು ಕೊಡುವ ಹಣಕ್ಕೆ ಬಲಿಯಾಗಬಾರದು ಎಂದು ಸಿಎಂ ಕಿವಿಮಾತು ಹೇಳಿದರು.

ಗುಪ್ತಚರ ಇಲಾಖೆಯಿಂದ ಅಪರಾಧಕ್ಕೆ ತಡೆ: ಗುಪ್ತಚರ ಇಲಾಖೆ ಹೆಚ್ಚು ಕ್ರಿಯಾಶೀಲವಾಗಿದ್ದರೆ ಅಪರಾಧ ಘಟಿಸುವುದಕ್ಕಿಂತ ಮೊದಲೇ ತಡೆಯುವುದು ಸಾಧ್ಯವಿದೆ. ಠಾಣೆಯ ಅಧಿಕಾರಿಗಳಿಗೆ ಗೊತ್ತಿಲ್ಲದೆ ಯಾವ ಕಾನೂನುಬಾಹಿರ ಚಟುವಟಿಕೆಗಳೂ ನಡೆಯಲು ಸಾಧ್ಯವಿಲ್ಲ. ಪೊಲೀಸರು ಠಾಣೆಯಲ್ಲೇ ಕುಳಿತು ಮಹಜರ್ ಬರೆಯಬಾರದು. ಸ್ಥಳಕ್ಕೆ ಹೋಗಿ ಮಹಜರ್ ಮಾಡಬೇಕು. ರೌಡಿಗಳ ಚಲನವಲನದ ಬಗ್ಗೆ ಠಾಣಾಧಿಕಾರಿಗಳಿಗೆ, ಠಾಣೆಯ ಸಿಬ್ಬಂದಿಗೆ ಮಾಹಿತಿ ಇರಬೇಕು ಎಂದು ಸೂಚಿಸಿದರು.

5ನೇ ಗ್ಯಾರಂಟಿ ವಿಚಾರ: ಜನವರಿ 12ಕ್ಕೆ 5ನೇ ಗ್ಯಾರಂಟಿಯಾದ ಯುವ ನಿಧಿಯನ್ನು ಜಾರಿ ಮಾಡುತ್ತಿದ್ದೇವೆ. ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ತಿಂಗಳಿಗೆ 3 ಸಾವಿರ ಹಣ ನೀಡುತ್ತಿದ್ದೇವೆ. ಈಗಾಗಲೇ 4 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಇದನ್ನು ಮಹಿಳೆಯರು ಹೆಚ್ಚಾಗಿ ಸದುಪಯೋಗಪಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಬಿಜೆಪಿಯವರು ಗ್ಯಾರಂಟಿ ಯೋಜನೆ ಲಾಭ ಪಡೀತಿಲ್ವಾ?: ನಾವು ಎಲ್ಲ ಜಾತಿ, ಎಲ್ಲಾ ಧರ್ಮದವರಿಗೆ ಮಾತ್ರವಲ್ಲ ಎಲ್ಲಾ ಪಕ್ಷದವರಿಗೂ ಅನುಕೂಲ ಆಗುವ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಬಿಜೆಪಿಯವರು 10 ಕೆ.ಜಿ ಅಕ್ಕಿ, ಉಚಿತ ಬಸ್​, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳ ಲಾಭ ಪಡೀತಿಲ್ವಾ ಎಂದು ಪ್ರಶ್ನಿಸಿದದರು. ಸುಳ್ಳು ಹೇಳುವವರ, ನಮ್ಮ ಸರ್ಕಾರದ ಲಾಭ ಪಡೆದು, ಅದರ ವಿರುದ್ಧ ಆಡುವವರ ಜತೆ ಹೋಗಬೇಡಿ ಎಂದರು.

ಇದನ್ನೂ ಓದಿ:ವಿಶೇಷ ವಿಮಾನದಲ್ಲಿ ಪ್ರಯಾಣ: ವಿರೋಧಿಸುವ ನೈತಿಕತೆ ಬಿಜೆಪಿಗರಿಗೆ ಇದೆಯೇ?- ಸಿಎಂ ಸಿದ್ದರಾಮಯ್ಯ

Last Updated : Dec 22, 2023, 10:26 PM IST

ABOUT THE AUTHOR

...view details