ಮೈಸೂರು: 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಲಿರುವ ಅಭಿಮನ್ಯು ನೇತೃತ್ವದ ಗಜಪಡೆಗೆ ಕಲಾವಿದರು ಸಿಂಪಲ್ ಆಗಿ ಶೃಂಗಾರಗೊಳಿಸಿದ್ದಾರೆ.
ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು, ಜಂಬೂ ಸವಾರಿಯಲ್ಲಿ ಪಾಲ್ಗೊಂಡಿರುವ ಅಭಿಮನ್ಯು, ಗೋಪಿ, ಕಾವೇರಿ, ವಿಜಯ ಹಾಗೂ ವಿಕ್ರಮ ಆನೆಗಳ ಮೇಲೆ ಚಿತ್ರ ಬಿಡಿಸಿದ್ದಾರೆ.
ಕಲಾವಿದ ನಾಗಲಿಂಗಪ್ಪ ನೇತೃತ್ವದ 5 ಮಂದಿ ಕಲಾವಿದರು ಗಜಪಡೆಗೆ ಬಣ್ಣ ಹಚ್ಚಿದ್ದು, ಇದಕ್ಕೂ ಮುನ್ನ ಗಜಪಡೆಗೆ ಮಜ್ಜನ ಮಾಡಿಸಿ ನಂತರ ಚಿತ್ರ ಬಿಡಿಸಲು ಆರಂಭಿಸಿದ್ದಾರೆ. ಆನೆಗಳ ಕಿವಿ ಮೇಲೆ ಶಂಕ, ಚಕ್ರ ಹಾಗೂ ಸೊಂಡಿಲಿನ ಮೇಲೆ ಗಂಡಭೇರುಂಡ, ಎಲೆ, ದಂತದ ಹಿಂಭಾಗ ಗಿಳಿ, ಎಲೆ, ಕೆನ್ನೆಯ ಮೇಲೆ ಹೂವು, ಬಳ್ಳಿ, ಮೊಗ್ಗು, ಕಾಲುಗಳ ಮೇಲೆ ಪಕ್ಷಿ ಚಿತ್ರಗಳನ್ನು ಬಿಡಿಸಿದ್ದಾರೆ.
ಕಣ್ಣುಗಳ ಸುತ್ತ ಎಲೆ ಆಕೃತಿ, ಹಣೆಯ ಮೇಲೆ ನಾಮ ಮತ್ತು ಸುರುಳಿ ಚಿತ್ರ ಬಿಡಿಸಿದ್ದು, ಆನೆಗಳು ಬಹಳ ಸುಂದರವಾಗಿ ಕಾಣುವಂತೆ ಚಿತ್ರ ಬಿಡಿಸಿದ್ದಾರೆ. ಆ ಮೂಲಕ ಸಿಂಪಲ್ ಜಂಬೂಸವಾರಿಗೆ ಗಜಪಡೆ ಸಿಂಪಲ್ ಆಗಿ ಶೃಂಗಾರಗೊಂಡಿವೆ.