ಕರ್ನಾಟಕ

karnataka

ಇದೇ ತಿಂಗಳು ಚುನಾವಣಾ ದಿನಾಂಕ ಘೋಷಣೆ ಆಗಬಹುದು: ಹೆಚ್ ಡಿ. ಕುಮಾರಸ್ವಾಮಿ

By

Published : Mar 2, 2023, 7:27 PM IST

ಈ ತಿಂಗಳ ಕೊನೆಯ ವಾರದಲ್ಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಹೆಚ್​ ಡಿ ಕುಮಾರಸ್ವಾಮಿ
ಹೆಚ್​ ಡಿ ಕುಮಾರಸ್ವಾಮಿ

ಮೈಸೂರು: ಚುನಾವಣೆಗೆ ಅಧಿಕೃತ ದಿನಾಂಕ ಪ್ರಕಟಣೆ ಸಮೀಪ ಬಂದಿದೆ, ಇದೆ ತಿಂಗಳ 20 ರಿಂದ 30ನೇ ತಾರೀಖಿನ ಒಳಗೆ ಚುನಾವಣಾ ದಿನಾಂಕ ಘೋಷಣೆ ಆಗಬಹುದು, ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು. ಇಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ತಿಂಗಳು 20 ರಿಂದ 30 ನೇ ತಾರೀಖಿನೊಳಗೆ ಚುನಾವಣೆ ದಿನಾಂಕ ಘೋಷಣೆ ಆಗಬಹುದು. ನಮ್ಮ ಪಕ್ಷವನ್ನು ಐಸಿಯುನಲ್ಲಿ ಇದೆ ಎಂದು ಹೇಳುತ್ತಿದ್ದ ಜನರು, ಈಗ ನಮ್ಮ ಪಂಚರತ್ನ ಯಾತ್ರೆಯಲ್ಲಿ ಬರುತ್ತಿರುವ ಜನ ಸಮೂಹವನ್ನು ನೋಡಿ, ಅವರು ಯಾತ್ರೆಗಳನ್ನ ಮಾಡುತ್ತಿದ್ದಾರೆ. ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಎಂದು, ಏತಕ್ಕೆ ಹೆಸರನ್ನು ಇಟ್ಟಿದ್ದಾರೊ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ:ಸಮ್ಮಿಶ್ರ ಸರ್ಕಾರ ನಡೆಸಬೇಕಾದರೆ ಸಾಲಮನ್ನಾ ವಿಷಯದಲ್ಲಿ ಒಂದು ದಿನ ಸಲಹೆ ನೀಡಲಿಲ್ಲ. ಬಜೆಟ್ ಮಂಡಿಸಲು ಸಹಕಾರ ನೀಡಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಹಗಲು ಇರುಳು ದುಡಿದೆ, ಆದರೂ ಸಹಕಾರ ಸಿಗಲಿಲ್ಲ. ನನ್ನನ್ನು ಕೊಟ್ಟ ಕುದುರೆಯನ್ನು ಏರದವ ವೀರನೂ ಅಲ್ಲ ಧೀರನೂ ಅಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಆದರೆ‌ ಕುಂಟುವ ಕುದುರೆ ಕೊಟ್ಟು ಏರು ಏರು ಎನ್ನುವವರು ಮನೆ ಮುರುಕರು. ನನ್ನನ್ನು ನೆಮ್ಮದಿಯಾಗಿ ಹಾಗೂ ಸ್ವತಂತ್ರವಾಗಿ ಅಧಿಕಾರ ನಡೆಸಲು ಅವಕಾಶ ಕೊಡಲಿಲ್ಲ. ಎಲ್ಲ ಅವಮಾನಗಳನ್ನ, ಅಪ ಪ್ರಚಾರಗಳನ್ನ ಸಹಿಸಿಕೊಂಡು ಬಂದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು :ಕಾಂಗ್ರೆಸ್ ನಾಯಕರು ನಗರ ಪ್ರದೇಶಗಳಲ್ಲಿ ಪ್ರಜಾಧ್ವನಿ ಯಾತ್ರೆ ಮಾಡುವುದಲ್ಲ, 500 ರೂಪಾಯಿ ಕೊಟ್ಟು ಜನರನ್ನ ಕರೆತರುವುದಲ್ಲ, ಬದಲಾಗಿ ಉತ್ತರ ಕರ್ನಾಟಕದ ಹಳ್ಳಿ ಭಾಗಗಳಿಗೆ ಹೋಗಿ ಅಲ್ಲಿ ಜನರ ಕಷ್ಟ ಕೇಳಿ, ಅದಕ್ಕೆ ಬದಲಾಗಿ ಬೆಳಗಾದರೆ ಭಾಗ್ಯಗಳನ್ನು ಕೊಟ್ಟು, ಜನರನ್ನು ಉದ್ಧಾರ ಮಾಡುತ್ತೇವೆಂದು ಹೇಳುವ ನಾಯಕರು, ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತದೆ ಎಂದು ಟೀಕಿಸಿದರು. ಕಾಂಗ್ರೆಸ್ ಜೊತೆ ಸರ್ಕಾರ ಮಾಡಿ ತಪ್ಪು ಮಾಡಿದೆ ಎನಿಸಿತ್ತು. ಆದ್ರೆ ರೈತರ ಸಾಲಮನ್ನಾ ಮಾಡಿದ ತೃಪ್ತಿ ಇದೆ. ಸಮ್ಮಿಶ್ರ ಸರ್ಕಾರದಲ್ಲಿ ನನ್ನ ಇಮೇಜ್ ಡ್ಯಾಮೇಜ್ ಮಾಡಲು ಯತ್ನಿಸಿದರು. ಅದು ಸಾಧ್ಯವಾಗಲಿಲ್ಲ ಎಂದ ಕುಮಾರಸ್ವಾಮಿ, ಬಿಜೆಪಿಯವರು ಈಗ ಅಧಿಕಾರದ ರುಚಿ ನೋಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರಿಗೂ ಜೆಡಿಎಸ್​ನ ಭಯ. ಆದ್ದರಿಂದ ಇಬ್ಬರು ಜೆಡಿಎಸ್ ಅನ್ನು ಟೀಕೆ ಮಾಡುತ್ತಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ಇರುವುದು ಮೋದಿ, ಅಮಿತ್​ ಶಾ ಬಿಜೆಪಿ:ಮೋದಿ ಕರ್ನಾಟಕಕ್ಕೆ ಬಂದರು ಅವರು ಕರ್ನಾಟಕಕ್ಕೆ ಮಾಡಿದ ಕೆಲಸಗಳ ಬಗ್ಗೆ ಮಾತನಾಡುವುದಿಲ್ಲ, ರೈತರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಸತ್ತು ಸ್ವರ್ಗದಲ್ಲಿ ಇರುವ ವೀರೇಂದ್ರ ಪಾಟೀಲ್, ನಿಜಲಿಂಗಪ್ಪ ಅವರನ್ನು ಸ್ಮರಿಸುತ್ತಾರೆ. ಈಗ ಇರುವುದು ಕರ್ನಾಟಕದಲ್ಲಿರುವುದು ಬಿಜೆಪಿ ಅಲ್ಲ, ಅಮಿತ್ ಶಾ, ನಡ್ಡಾ, ಮೋದಿ ಅವರ ಬಿಜೆಪಿ ಎಂದು ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಜೆಡಿಎಸ್​ಗೆ ವೋಟು ಹಾಕಬೇಡಿ ಎಂದು ಹೇಳುತ್ತಾರೆ.

ಆದರೆ ನಾವು ಎಲ್ಲಿಯೂ ಬೇರೆಯವರ ಬಗ್ಗೆ ಮಾತನಾಡುವುದಿಲ್ಲ. ಅವರಿಗೆ ವೋಟು ಹಾಕಬೇಡಿ, ಇವರಿಗೆ ವೋಟು ಹಾಕಬೇಡಿ ಎಂದು ಹೇಳುವುದಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳಿಗೂ ಜೆಡಿಎಸ್ ಕಂಡರೆ ಭಯ. ಈ ಬಾರಿ ಜನರ ಆಶೀರ್ವಾದೊಂದಿಗೆ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಇನ್ನೂ ನಾಲ್ಕೈದು ದಿನಗಳಲ್ಲಿ ಮೂರ್ನಾಲ್ಕು ಜನ ಜೆಡಿಎಸ್ ಪಕ್ಷ ಬಿಟ್ಟು ಹೊರಗೆ ಹೋಗಬಹುದು ಎಂದು ಪರೋಕ್ಷವಾಗಿ ಪಕ್ಷ ತೊರೆಯಲು ಮುಂದಾದ ನಾಯಕರ ಕುರಿತು ಹೆಚ್​ಡಿಕೆ ಹೇಳಿದರು.

ಇದನ್ನೂ ಓದಿ:ಕಾಂಗ್ರೆಸ್​ ಟಿಕೆಟ್​ಗೆ ತೀವ್ರ ಪೈಪೋಟಿಯಿದ್ದು, ಸಂಧಾನ ಸಭೆ ನಡೆಸುತ್ತೇವೆ: ಡಿಕೆಶಿ

ABOUT THE AUTHOR

...view details