ಕರ್ನಾಟಕ

karnataka

ಮೈಸೂರು: ಡಿ.8 ರಿಂದ ರೈತ ಯುವಕರ ವಿವಾಹದ ಜಾಗೃತಿಗಾಗಿ ಪಾದಯಾತ್ರೆ

By ETV Bharat Karnataka Team

Published : Nov 22, 2023, 3:36 PM IST

Padayathra for farmer youths marriage: ಈ ಬಾರಿ ಕಾಲ ಭೈರವೇಶ್ವರನಿಗೆ ಹರಕೆ ಕಟ್ಟಿಕೊಂಡು ಪಾದಯಾತ್ರೆ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ಒಕ್ಕಲಿಗ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಎಚ್ ಎಲ್. ಯಮುನಾ ತಿಳಿಸಿದ್ದಾರೆ.

H L Yamuna Pressmeet
ಎಚ್ ಎಲ್. ಯಮುನಾ ಸುದ್ದಿಗೋಷ್ಠಿ

ಮೈಸೂರು: ಇತ್ತೀಚೆಗೆ ಎಲ್ಲ ಸಮುದಾಯದ ರೈತ ಯುವಕರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಡಿಸೆಂಬರ್ 8 ರಿಂದ 3 ದಿನಗಳ ಕಾಲ ಮೈಸೂರಿನಿಂದ ಶ್ರೀ ಕ್ಷೇತ್ರ ಆದಿಚುಂಚನಗಿರಿ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಒಕ್ಕಲಿಗ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಎಚ್ ಎಲ್. ಯಮುನಾ ತಿಳಿಸಿದರು.

ಬುಧವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಲ ಭೈರವೇಶ್ವರನಿಗೆ ಹರಕೆ ಕಟ್ಟಿಕೊಂಡು ಪಾದಯಾತ್ರೆ ಆರಂಭಿಸಲಾಗುತ್ತಿದೆ. ದೇಶದ ಬೆನ್ನೆಲುಬಾಗಿರುವ ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂಜರಿಯುತ್ತಿರುವುದು ಗಂಭೀರ ವಿಷಯವಾಗಿದೆ. ಇದೇ ರೀತಿ ಆದರೆ ಮುಂದೆ ಯಾವುದೇ ಯುವಕರು ಕೃಷಿ ಮಾಡಲು ಅಥವಾ ಕೃಷಿಯನ್ನು ವೃತ್ತಿಯಾಗಿ ಆಯ್ಕೆ ಮಾಡಲು ಮುಂದೆ ಬರುವುದಿಲ್ಲ. ಆ ರೀತಿ ಏನಾದರೂ ಆದರೆ ದೇಶದ ಜನರ ಪರಿಸ್ಥಿತಿ ಬಗ್ಗೆ ಚಿಂತಿಸಬೇಕಾಗುತ್ತದೆ. ಹಾಗಾಗಿ ಈ ಬಗ್ಗೆ ಸಮಾಜಕ್ಕೆ ಜಾಗೃತಿ ಮೂಡಿಸುವ ಸಲುವಾಗಿ ಈ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಅವಿವಾಹಿತ ಯುವಕರಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ: ಇತ್ತೀಚೆಗೆ ದೀಪಾವಳಿ ಜಾತ್ರೆ ಸಂದರ್ಭ ಮಲೆ ಮಹದೇಶ್ವರ ಬೆಟ್ಟಕ್ಕೆ ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಂದ ಅವಿವಾಹಿತ ರೈತ ಯುವಕರು ಮದುವೆ ಆಗಲೆಂದು ಹರಕೆ ಹೊತ್ತು ಪಾದಯಾತ್ರೆ ನಡೆಸಿದ್ದರು. ದೀಪಾವಳಿ ಜಾತ್ರೆ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಮದುವೆಯಾಗದ ಯುವಕರು ಸೇರಿ ಪಾದಯಾತ್ರೆ ಹೋಗುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡು ಬಂದಿದೆ. ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಮದುವೆಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿರುವ ಸಮಾಜದ ಮನಸ್ಥಿತಿಯನ್ನು ಬದಲಾಯಿಸಬೇಕು ಎಂದು ಯುವಕರು ಮಾದಪ್ಪನಿಗೆ ಹರಕೆ ಹೊತ್ತು ಪಾದಯಾತ್ರೆ ಮಾಡಿದ್ದರು.

ಕಳೆದ ಕೆಲವು ವರ್ಷಗಳ ಹಿಂದೆ ಸುಮಾರು 10- 20 ಯುವಕರು ಮದುವೆಗಾಗಿ ಹರಕೆ ಹೊತ್ತು ಪಾದಯಾತ್ರೆ ಪ್ರಾರಂಭಿಸಿದ್ದರು, ಈಗ ಆ ಸಂಖ್ಯೆ ನೂರಕ್ಕೆ ತಲುಪಿದೆ. ಅಂದರೆ ಪ್ರತೀ ವರ್ಷ ಹೆಣ್ಣು ಸಿಗದೇ ಮದುವೆಯಾಗದೆ ಅವಿವಾಹಿತರಾಗಿಯೇ ಉಳಿಯುತ್ತಿರುವ ರೈತ ಯುವಕರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಯುವಕರು ನೋವು ವ್ಯಕ್ತಪಡಿಸಿದ್ದರು.

ಸಿದ್ದರಾಮಯ್ಯ ಅವರು ಹಲವು ಭಾಗ್ಯಗಳನ್ನು ಈಗಾಗಲೇ ರಾಜ್ಯದ ಜನತೆಗೆ ನೀಡಿದ್ದಾರೆ. ಅದೇ ರೀತಿ ರೈತರ ಮಕ್ಕಳಿಗೆ ಹೆಣ್ಣು ಭಾಗ್ಯವನ್ನು ಕೊಡಬೇಕು. ನಮಗೆ ಹಣ ಬೇಡ, ವಿವಾಹ ಭಾಗ್ಯ ನೀಡಿ ಎಂದು ಯುವಕರು ಪಾದಯಾತ್ರೆ ವೇಳೆ ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ:ಚಾಮರಾಜನಗರ: ವಧು ಸಿಗಲೆಂದು ಮಲೆ ಮಾದಪ್ಪನ ಬೆಟ್ಟಕ್ಕೆ ಯುವಕರ ಪಾದಯಾತ್ರೆ

ABOUT THE AUTHOR

...view details