ಮೈಸೂರು: ಜಮೀನಿನಲ್ಲಿ ದನ ಮೇಯಿಸುತ್ತಿದ್ದ ವೇಳೆ ರೈತನ ಮೇಲೆ ಹುಲಿ ದಾಳಿ ನಡೆಸಿ, ಕೊಂದು ತಿಂದಿರುವ ಘಟನೆ ಸರಗೂರು ತಾಲೂಕಿನ ಮೊಳೆಯೂರು ವಲಯ ಅರಣ್ಯ ಪ್ರದೇಶ ಬಳಿ ನಡೆದಿದೆ. ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಬೇಗೂರು ಗ್ರಾಮದ ರೈತ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಾಲಾಜಿ ನಾಯ್ಕ(42) ಹುಲಿ ದಾಳಿಗೆ ಬಲಿಯಾದ ದುರ್ದೈವಿ.
ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಬಾಲಾಜಿ ನಾಯ್ಕ ಎಂದಿನಂತೆ ಸೋಮವಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮೊಳೆಯೂರು ವಲಯದ ಅಂಚಿನಲ್ಲಿಯೇ ಇರುವ ಬಿ.ಮಟಕೆರೆ - ಹೊಸಕೋಟೆ ಮಾರ್ಗದ ಪಕ್ಕದ ತಮ್ಮ ಜಮೀನಿನಲ್ಲಿ ದನಗಳನ್ನು ಮೇಯಿಸುತ್ತಿದ್ದರು. ಈ ವೇಳೆ, ಆಹಾರ ಅರಸಿ ಕಾಡಿನಿಂದ ಬಂದಿದ್ದ ಹುಲಿಯೊಂದು ದನಗಳ ಮೇಲೆ ದಾಳಿ ಮಾಡಲು ಮುಂದಾಗಿದೆ. ಗಾಬರಿಗೊಂಡ ದನಗಳು ಚದುರಿಹೋಗಿವೆ. ಜಾನುವಾರುಗಳು ಸಿಗದ ಪರಿಣಾಮ ದನ ಕಾಯುತ್ತ ಕುಳಿತ್ತಿದ್ದ ರೈತ ಬಾಲಜಿ ನಾಯ್ಕನ ಮೇಲೆ ಹುಲಿ ದಾಳಿ ನಡೆಸಿದೆ.
ದಾಳಿಗೆ ರೈತ ಬಾಲಾಜಿ ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತ ದೇಹವನ್ನು ಹುಲಿ ಕಾಡಿನೊಳಗೆ ಎಳೆದೊಯ್ದಿದೆ. ಈ ದೃಶ್ಯವನ್ನು ಪಕ್ಕದ ಜಮೀನಿನಲ್ಲಿ ದನಗಾಯಿಯೊಬ್ಬರು ಕಂಡು ಗಾಬರಿಯಾಗಿ ಕಿರುಚಾಡಿದ್ದಾರೆ. ಕೂಡಲೇ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಬಂದು ನೋಡುವಷ್ಟರಲ್ಲೇ ಹುಲಿ ಬಾಲಾಜಿ ನಾಯ್ಕನನ್ನು ಕೊಂದು ಅವರ ಎಡ ಕಾಲು, ದೇಹದ ಕೆಲ ಭಾಗಗಳು, ತಲೆಯ ಭಾಗವನ್ನು ತಿಂದಿದೆ ಎನ್ನಲಾಗಿದೆ.