ಕರ್ನಾಟಕ

karnataka

ಸ್ವತಂತ್ರವಾಗಿ ಸರ್ಕಾರ ರಚನೆಗೆ ನಮಗೊಂದು ಬಾರಿ ಅವಕಾಶ ಕೊಡಿ: HDK ಮನವಿ

By

Published : Oct 12, 2021, 4:34 PM IST

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ನಮ್ಮ ಪಕ್ಷದಿಂದ ಬೆಳೆದವರು ಈ ಪಕ್ಷ ಮುಗಿತು ಅಂತಾರೆ, ಆದರೆ ಜನರ ಪ್ರೀತಿ ವಿಶ್ವಾಸ ಇರುವವರೆಗೆ ಜೆಡಿಎಸ್ ಪಕ್ಷ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. 2023ರ ಚುನಾವಣೆಯಲ್ಲಿ ಸ್ವತಂತ್ರ ಸರ್ಕಾರ ರಚಿಸಲು ಜೆಡಿಎಸ್​​ ಅನ್ನು ಜನರು ಬೆಂಬಲಿಸಬೇಕಿದೆ ಎಂದು ಹೆಚ್​​ಡಿಕೆ ಹೇಳಿದ್ದಾರೆ.

ಮೈಸೂರು:ಒಂದು ಬಾರಿ ಸ್ವತಂತ್ರ ಸರ್ಕಾರ ರಚನೆಗೆ ಜೆಡಿಎಸ್ ಪಕ್ಷಕ್ಕೆ ಅವಕಾಶ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡಿದ್ದಾರೆ. ಬೆಳವಾಡಿಯ ಚಾಮುಂಡೇಶ್ವರಿ ನಗರದ ಚಾಮುಂಡೇಶ್ವರಿ ‌ದೇವಸ್ಥಾನವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ನಮ್ಮ ಪಕ್ಷದಿಂದ ಬೆಳೆದವರು ಈ ಪಕ್ಷ ಮುಗಿತು ಅಂತಾರೆ, ಆದರೆ ಜನರ ಪ್ರೀತಿ ವಿಶ್ವಾಸ ಇರುವವರೆಗೆ ಜೆಡಿಎಸ್ ಪಕ್ಷ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. 2023ರ ಚುನಾವಣೆಯಲ್ಲಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಜೆಡಿಎಸ್​​​ಗೆ ಒಂದು ಬಾರಿ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಬೆಳವಾಡಿಯ ಚಾಮುಂಡೇಶ್ವರಿ ನಗರದ ಚಾಮುಂಡೇಶ್ವರಿ ‌ದೇವಸ್ಥಾನವನ್ನು ಉದ್ಘಾಟನೆ ಮಾಡಿದ ಹೆಚ್​​ಡಿಕೆ

ಮೈಸೂರಿನ ಇಲವಾಲದ ಸುತ್ತಮುತ್ತಲಿನ 52 ಹಳ್ಳಿಗಳಿಗೆ ಕುಡಿಯುವ ‌ನೀರಿನ ಯೋಜನೆ ಅನುಷ್ಠಾನ ಮಾಡಿದ್ದೆ. ಇಂಡವಾಳು ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ ಹಣ ಕೊಟ್ಟರೂ ಅದನ್ನು ಇನ್ನೂ ಈ ಸರ್ಕಾರ ಅನುಷ್ಠಾನ ಮಾಡಿಲ್ಲ ಎಂದು ಆರೋಪಿಸಿದರು. ಕೊರೊನಾದಿಂದ ಹಲವು ಕುಟುಂಬ ಸಂಕಷ್ಟಕ್ಕೆ ಸಿಲುಕಿವೆ. ಆದರೆ ತೆರಿಗೆ ಹಣವನ್ನು ಸ್ವೇಚ್ಛಾಚಾರವಾಗಿ ಸರ್ಕಾರ ಲೂಟಿ ಮಾಡುತ್ತಿದೆ. ಆದರೆ ಜನರಿಗೆ ನೆರವಾಗುತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ದೂಷಿಸಿದರು.

ಸಂಕಷ್ಟದಲ್ಲಿ ಸಾಲ ಮನ್ನಾ ಮಾಡಿದೆ

ಆರ್ಥಿಕ ಸಂಕಷ್ಟದ ಸಮಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಮಾಡಿದೆ. ಅದೇ ರೀತಿ ಈ ಬಾರಿಯ ಚುನಾವಣೆಯಲ್ಲಿ ಸ್ವತಂತ್ರ ಸರ್ಕಾರ ರಚಿಸಲು ಅವಕಾಶ ನೀಡಿದರೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖಾಸಗಿ ಶಾಲೆ ಮೀರಿಸುವ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ತಾಲೂಕು ಕೇಂದ್ರದಲ್ಲಿ 30 ಬೆಡ್​​ನ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ, ರೈತರ ಬೆಳೆಗೆ ಒಳ್ಳೆಯ ಬೆಲೆ ಸಿಗುವ ವ್ಯವಸ್ಥೆ ಮಾಡುವುದು ಸೇರಿದಂತೆ ಪಂಚರತ್ನ ಯೋಜನೆ ರೂಪಿಸಲಾಗುವುದು ಎಂದು ಮಾಜಿ ಸಿಎಂ ಭರವಸೆ ನೀಡಿದರು.


10 ಕೆ.ಜಿ. ಅಕ್ಕಿ ಕೊಡುವುದರ ಬದಲು ನಿಮ್ಮನ್ನು ಸ್ವಾವಲಂಬಿ ಆಗಲು ನಾನು ಪಂಚರತ್ನ ಕಾರ್ಯಕ್ರಮ ಅನುಷ್ಠಾನ ಮಾಡುತ್ತೇನೆ. ಸಂಧ್ಯಾ ಸುರಕ್ಷಾ ಯೋಜನೆ ಜಾರಿ ಮಾಡುವುದಾಗಿ ಇದೇ ವೇಳೆ ಅವರು ಭರವಸೆ ನೀಡಿದರು.

ದೇವೇಗೌಡರು ಪ್ರಧಾನಿ ಆಗಿದ್ದಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದೇ ಒಂದು ರಕ್ತ ಪಾತ ಆಗಿರಲಿಲ್ಲ. ಆದರೆ, ಈಗ ಅಲ್ಲಿ ಪ್ರತಿದಿನ ಯೋಧರು ಹಾಗೂ ನಾಗರಿಕರ ರಕ್ತ ಪಾತವಾಗುತ್ತಿದೆ. ಹಣ ಲೂಟಿ ಮಾಡಿ ಚುನಾವಣೆಯಲ್ಲಿ ಜನರಿಗೆ ಹಣ ಹಂಚುತ್ತಾರೆ. ಮುಂದೆ ಚುನಾವಣೆಯಲ್ಲಿ ಹಣ ಪಡೆಯಬೇಡಿ. ಕಾಂಗ್ರೆಸ್, ಬಿಜೆಪಿ ಸರ್ಕಾರ ನೋಡಿದ್ದೀರಾ, ನರೇಂದ್ರ ಮೋದಿ ಕೂಡ ನೋಡಿದ್ದೀರಾ. ಆದ್ದರಿಂದ ಒಂದು ಬಾರಿ ಜೆಡಿಎಸ್ ಪಕ್ಷಕ್ಕೆ ಸ್ವತಂತ್ರ ಸರ್ಕಾರ ರಚನೆಗೆ ಅವಕಾಶ ನೀಡಿ ಎಂದು ಹೆಚ್.ಡಿ.ಕುಮಾರಸ್ವಾಮಿ ಇದೇ ವೇಳೆ ಮನವಿ ಮಾಡಿದರು.

ABOUT THE AUTHOR

...view details