ಕರ್ನಾಟಕ

karnataka

ಸಂಸ್ಕೃತಿ, ಕಲೆ, ಸಂಗೀತ ಪರಂಪರೆ ಬೆಳೆಸುವಲ್ಲಿ ಡಾ.ಗಂಗೂಬಾಯಿ ವಿವಿ ಕಾರ್ಯ ಶ್ಲಾಘನೀಯ: ರಾಜ್ಯಪಾಲ ಗೆಹ್ಲೋಟ್

By ETV Bharat Karnataka Team

Published : Oct 31, 2023, 7:42 PM IST

Governor Gehlot appreciates Dr. Gangubai University: ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕಾರ್ಯವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಶ್ಲಾಘಿಸಿದ್ದಾರೆ.

Awarded an honorary doctorate
ಶ್ರೀ ಗಣಪತಿ ಸಚ್ಛಿದಾನಂದ ಸ್ವಾಮೀಜಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು

ಮೈಸೂರು/ಬೆಂಗಳೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದ ಪ್ರಯುಕ್ತ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗೆ ನೀಡಲಾಗಿರುವ ಗೌರವ ಡಾಕ್ಟರೇಟ್ ಪದವಿಯನ್ನು ರಾಜಭವನದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯು ಜ್ಞಾನ, ವಿಜ್ಞಾನ, ಕಲೆ ಮತ್ತು ಸಂಗೀತದ ಅಮೂಲ್ಯ ಪರಂಪರೆ ಒಳಗೊಂಡಿದೆ. ಹೆಸರಾಂತ ಶಾಸ್ತ್ರೀಯ ಸಂಗೀತ ಗಾಯಕಿ, ಗೌರವಾನ್ವಿತ ಗಂಗೂಬಾಯಿ ಹಾನಗಲ್ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಈ ವಿಶ್ವವಿದ್ಯಾಲಯವು ಸಂಸ್ಕೃತಿ, ಕಲೆ ಮತ್ತು ಸಂಗೀತದ ಅಮೂಲ್ಯ ಪರಂಪರೆಯನ್ನು ಮುನ್ನಡೆಸುವಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಡಾ.ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಶಿಕ್ಷಣ, ಕಲೆ, ಸಂಗೀತ ಮತ್ತು ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮಹನೀಯರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಅದರಂತೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಚ್ಚಿದಾನಂದ ಸ್ವಾಮೀಜಿ ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಭಾಗದಲ್ಲಿ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಸ್ವಾಮೀಜಿಗಳಿಗೆ ಸಂಗೀತದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ವರ್ಲ್ಡ್ ಕ್ಲಾಸಿಕಲ್ ತಮಿಳು ವಿಶ್ವವಿದ್ಯಾಲಯ, ಲಂಡನ್ ವತಿಯಿಂದ ಸ್ವಾಮೀಜಿಗಳಿಗೆ ಡಾಕ್ಟರ್ ಆಫ್ ಲೆಟರ್ಸ್ ಗೌರವ ಪದವಿ ನೀಡಿ ಗೌರವಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ಸಂಗೀತ ಆಲಿಸಲು ವಯಸ್ಸಿನ ಮಿತಿ ಇಲ್ಲ. ಪ್ರತಿಯೊಬ್ಬರೂ ಕೇಳಿ ಆನಂದಿಸಬಹುದು. ಸಣ್ಣ ಮಗುವಿನಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಸಂಗೀತ ಆಕರ್ಷಿಸುತ್ತದೆ. ಪ್ರತಿದಿನ ಮಲಗುವ ಮುನ್ನ ಎಲ್ಲರೂ ಸಂಗೀತ ಕೇಳುವುದರಿಂದ ಮನಸ್ಸು ನಿರಾಳ ಆಗುತ್ತದೆ, ಶಾಂತಿ ಸಿಗುತ್ತದೆ ಎಂದರು.

ಸಂಗೀತದ ಮಹಿಮೆಯನ್ನು ವಿವರಿಸಿದ ಅವರು, ಸಂಗೀತದ ಮಹಿಮೆಯಿಂದ ಕಾಲ, ಕಾಲಕ್ಕೆ ವೃಕ್ಷದಲ್ಲಿ ಫಲವನ್ನೂ, ಗಿಡಗಳಲ್ಲಿ ಹೂವುಗಳನ್ನು ಕಾಣಬಹುದು ಎಂದು ಶ್ರೀಗಳು ಅಭಿಪ್ರಾಯಪಟ್ಟರು. ವಿವಿ ಕುಲಪತಿ ನಾಗೇಶ್ ವಿ.ಬೆಟ್ಟಕೋಟೆ, ಸಿಂಡಿಕೇಟ್ ಸದಸ್ಯರು ಹಾಜರಿದ್ದರು.

ಇದನ್ನೂಓದಿ:ಕನ್ನಡ ರಾಜ್ಯೋತ್ಸವ ಸಂಭ್ರಮ: ಬೆಳಗಾವಿಯಲ್ಲಿ ಟೀಶರ್ಟ್ ಖರೀದಿ ಜೋರು.. ಕುಂದಾನಗರಿಯಿಂದ ಲಂಡನ್​ಗೂ ತಲುಪಿದ ಕನ್ನಡಾಭಿಮಾನ

ABOUT THE AUTHOR

...view details