ಕರ್ನಾಟಕ

karnataka

ಡಿಸಿ ರೋಹಿಣಿ ಸಿಂಧೂರಿ ಗ್ರಾಮ ವಾಸ್ತವ್ಯ: 625 ಅರ್ಜಿಗಳಿಗೆ ಪರಿಹಾರ

By

Published : Feb 21, 2021, 3:24 AM IST

ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರು ತರಿಕಲ್ಲು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿ, ಗ್ರಾಮಸ್ಥರಿಂದ ಸಮಸ್ಯೆಗಳ ಅಹವಾಲು ಸ್ವೀಕರಿಸಿದರು.

ಡಿಸಿ ರೋಹಿಣಿ ಸಿಂಧೂರಿ ಗ್ರಾಮ ವಾಸ್ತವ್ಯ
ಡಿಸಿ ರೋಹಿಣಿ ಸಿಂಧೂರಿ ಗ್ರಾಮ ವಾಸ್ತವ್ಯ

ಮೈಸೂರು:ಕಂದಾಯ ಇಲಾಖೆ ವತಿಯಿಂದ ಜಾರಿಗೆ ತಂದಿರುವ`'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮದ ಅಂಗವಾಗಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ತರಿಕಲ್ಲು ಗ್ರಾಮದಲ್ಲಿ ಶನಿವಾರ ವಾಸ್ತವ್ಯ ಹೂಡಿದರು.

ಕಾರ್ಯಕ್ರಮದ ಅಂಗವಾಗಿ 685 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 625 ಅರ್ಜಿಗಳಿಗೆ ಪರಿಹಾರ ಒದಗಿಸಲಾಯಿತು. ಸಾರ್ವಜನಿಕವಾಗಿ 261 ಆಧಾರ್ ಕಾರ್ಡ್, 21 ಪಡಿತರ ಕಾರ್ಡ್, 30 ಮಾಶಾಸನ ಪತ್ರ, 161 ವಿವಿಧ ಮಾಶಾಸನ ಪತ್ರಗಳು, ನಿವೇಶನ ಪತ್ರ ವಿತರಣೆ, ತರಿಕಲ್ಲು ಮತ್ತು ರಂಗಯ್ಯನ ಕೊಪ್ಪಲಿನಲ್ಲಿ ಎರಡು ಸ್ಮಶಾನಗಳಿಗೆ ಸಂಬಂಧಿಸಿದಂತೆ ಅರ್ಜಿಗಳಿಗೆ ಪರಿಹಾರ ನೀಡಲಾಗಿದೆ. ಈ ಪೈಕಿ 60 ಅರ್ಜಿದಾರರ ಸಮಸ್ಯೆಯನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಅರ್ಜಿಗಳಿಗೂ ಪರಿಹಾರ ನೀಡಲಾಗಿದೆ.

ಧರ್ಮಾಪುರ ಗ್ರಾಪಂ ವ್ಯಾಪ್ತಿಗೆ ಒಳಪಡುವ ತರಿಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಹೂಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಖಾತೆ, ಪಹಣಿ, ಪೋಡಿ, ಪಿಂಚಣಿ, ಪಡಿತರ ಸಮಸ್ಯೆಗಳು, ಸಂತ್ರಸ್ತರ ಸಮಸ್ಯೆ ಹಾಗೂ ಗ್ರಾಮದ ಇತರ ಸಮಸ್ಯೆಗಳನ್ನು ಆಲಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಡಿಸಿ ರೋಹಿಣಿ ಸಿಂಧೂರಿ ಗ್ರಾಮ ವಾಸ್ತವ್ಯ

ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಈ ಊರಿನ ಸಾವಿರ ಕಂಬಗಳ ದೇವಸ್ಥಾನ ಎಂಬ ಪ್ರತೀತಿಯ ಕಾಶಿ ಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅಹವಾಲು ಸ್ವೀಕರಿದ ಬಳಿಕ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, 15 ವರ್ಷದ ಹಿಂದೆ ಆಶ್ರಯ ಯೋಜನೆಯಡಿ ಮಂಜೂರು ಮಾಡಿದ್ದ ನಿವೇಶನ ಹಸ್ತಾಂತರವಾಗದೆ, ಗ್ರಾಮದ ಜನರು ವಸತಿ ಸೌಲಭ್ಯದಿಂದ ವಂಚಿತರಾಗಿದ್ದರು. ಈ ಬಗ್ಗೆ ಕೂಡಲೇ ಕ್ರಮವಹಿಸಲಾಗಿದೆ ಎಂದರು.

ಬಹುಮುಖ್ಯವಾಗಿ ಹಾಡಿಯಲ್ಲಿ ವಾಸಿಸುವ ಗಿರಿಜನರಿಂದ ಸಮಸ್ಯೆ ಹೆಚ್ಚಾಗಿ ಕೇಳಿಬಂದಿದೆ. ಅವರ ಪೂರ್ವಜರ ಹೆಸರಿನಲ್ಲಿ ದರ್ಖಾಸ್ ಜಮೀನು ಮಂಜೂರು ಆಗಿದ್ದು, ಈ ಜಮೀನುಗಳಿಗೆ ಪೌತಿ ಖಾತೆ ದೊರಕಿಲ್ಲ ಎಂಬ ಸಮಸ್ಯೆ ಕೇಳಿಬಂದಿದೆ. ಈ ಬಗ್ಗೆ ಈಗಾಗಲೇ ಅವರ ಅಹವಾಲನ್ನು ಸ್ವೀಕರಿಸಿದ್ದು, ಕಾನೂನಿಕ ಪ್ರಕಾರ ಪೌತಿ ಖಾತೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ರಂಗಯ್ಯನ ಕೊಪ್ಪಲು ಹಾಡಿ ಜನರ ಸಮಸ್ಯೆಗೆ ಪರಿಹಾರದ ಭರವಸೆ:

ತರೀಕಲ್ಲು ಗ್ರಾಮದ ಸಮೀಪದಲ್ಲಿರುವ ರಂಗಯ್ಯನಕೊಪ್ಪಲು ಹಾಡಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಹಾಡಿಯಲ್ಲಿ ವಾಸಿಸುತ್ತಿರುವ ಜನರ ಸಮಸ್ಯೆಯನ್ನು ಸುದೀರ್ಘವಾಗಿ ಆಲಿಸಿ, ಪರಿಹಾರದ ಭರವಸೆ ನೀಡಿದರು.

ಸಾರ್ವಜನಿಕರ ಸ್ಮಶಾನಕ್ಕೆ ಭೇಟಿ:

ತರಿಕಲ್ಲು ಗ್ರಾಮದ ಸಾರ್ವಜನಿಕ ಸ್ಮಾಶಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಗ್ರಾಮದಲ್ಲಿ ವಾಸಿಸುವ ಜನಸಂಖ್ಯೆ ಅನುಗುಣವಾಗಿ ಸ್ಮಶಾನದ ಜಾಗ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ: ಧರ್ಮಾಪುರ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ಉತ್ತರಿಸಿದರು.

ABOUT THE AUTHOR

...view details