ಕರ್ನಾಟಕ

karnataka

ಭಾರತ್ ಬಂದ್​​ಗೆ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ.. ಎಂದಿನಂತೆ ಜನಜೀವನ

By

Published : Sep 27, 2021, 2:12 PM IST

ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ ಮೂರು ಕಾಯ್ದೆಗಳನ್ನು ಹಿಂಪಡೆಯುವಂತೆ ರೈತ ಪರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್​​​ಗೆ ಮೈಸೂರಿನಲ್ಲಿ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಕೆಲವು ಸಂಘಟನೆಗಳು ನೈತಿಕ ಬೆಂಬಲ ಮಾತ್ರ ಘೋಷಿಸಿರುವುದರಿಂದ ಬಂದ್​​​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಭಾರತ್ ಬಂದ್​​ಗೆ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ
ಭಾರತ್ ಬಂದ್​​ಗೆ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ

ಮೈಸೂರು: ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್​ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನ ಜೀವನ ಎಂದಿನಂತಿದೆ. ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ ಮೂರು ಕಾಯ್ದೆಗಳನ್ನು ಹಿಂಪಡೆಯುವಂತೆ ರೈತ ಪರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್​​​ಗೆ ಮೈಸೂರಿನಲ್ಲಿ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಕೆಲವು ಸಂಘಟನೆಗಳು ನೈತಿಕ ಬೆಂಬಲವನ್ನು ಮಾತ್ರ ಘೋಷಿಸಿರುವುದರಿಂದ ಬಂದ್​​​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಭಾರತ್ ಬಂದ್​​ಗೆ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ

ಪುರಭವನದ ಬಳಿ ಎಸ್​​ಡಿಪಿಐ, ಪಿಎಫ್​​ಐ ಸೇರಿದಂತೆ ಬಂದ್​​ಗೆ ಬೆಂಬಲ ವ್ಯಕ್ತಪಡಿಸಿದ ಅನೇಕ ಸಂಘಟನೆಗಳ ಕಾರ್ಯಕರ್ತರು ಸಮಾವೇಶಗೊಂಡು ಅಲ್ಲಿಂದ ವಿವಿಧ ತಂಡಗಳನ್ನು ರಚಿಸಿಕೊಂಡು ನಗರದ ವಿವಿಧ ರಸ್ತೆಗಳತ್ತ ಬಂದ್​​​​ಗೆ ಬೆಂಬಲ ನೀಡುವಂತೆ ಆಗ್ರಹಿಸಿದರು.

ಪ್ರತಿಭಟನೆಗೆ ಸೀಮಿತವಾದ ಬಂದ್: ನಗರದ ಕೇಂದ್ರಿಯ ಬಸ್ ನಿಲ್ದಾಣದ ಬಳಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಪ್ರತಿಭಟನಾಕಾರರು ರಸ್ತೆಯಲ್ಲಿ ಮಲಗಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಸ್ ನಿಲ್ದಾಣದ ಸುತ್ತಮುತ್ತಲ ಅಂಗಡಿ - ಮುಂಗಟ್ಟುಗಳಷ್ಟೇ ಬಂದ್‌ ಆಗಿದ್ದವು. ಬಂದ್‌ ಪ್ರತಿಭಟನೆಗಷ್ಟೇ ಸೀನಿತವಾಗಿತ್ತು. ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮುಂದುವರಿದಿದೆ.

ನಗರದ ಸಯ್ಯಾಜಿರಾವ್ ರಸ್ತೆ ತಡೆದು ರೈತರು ಪ್ರತಿಭಟಿಸಿದರು. ಮೈಸೂರು ಮಹಾನಗರ ಪಾಲಿಕೆ ಕಚೇರಿ ಎದುರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡ ಹೊಸಕೋಟೆ ಬಸವರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾನಿರತ ರೈತ ನಾಯಕ ಕುರುಬೂರು ಶಾಂತಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಮಾನವ ಸರಪಳಿ ನಿರ್ಮಿಸಿ ಪ್ರೊಟೆಸ್ಟ್​ ಮಾಡಿದರು.

ನೈತಿಕ ಬೆಂಬಲ ಘೋಷಿಸಿದ ವಿವಿಧ ಸಂಘಟನೆಗಳು: ಮೈಸೂರು ಹೋಟೆಲ್ ಮಾಲೀಕರ ಸಂಘ ಕೋವಿಡ್ ಕಾರಣದಿಂದಾಗಿ ಉದ್ಯಮ ನಷ್ಟದಲ್ಲಿರುವುದರಿಂದ ನೈತಿಕ ಬೆಂಬಲ ಘೋಷಿಸಿದ್ದು, ಎಲ್ಲ ಹೋಟೆಲ್ ಹಾಗೂ ವಸತಿ ಗೃಹಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಅಲ್ಲದೇ ಮೈಸೂರು ಜಿಲ್ಲಾ ಪ್ರವಾಸಿ ವಾಹನಗಳ ಮಾಲೀಕರ ಸಂಘವು ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ಪ್ರವಾಸಿ ವಾಹನಗಳ ಸೌಲಭ್ಯ ಎಂದಿನಂತಿತ್ತು. ಆಟೋ ಹಾಗೂ ಟ್ಯಾಕ್ಸಿಗಳು ಸಾರ್ವಜನಿಕರು ಹಾಗೂ ಪ್ರವಾಸಿಗರಿಗರಿಗೆ ಲಭ್ಯವಿದ್ದವು. ಅನೇಕ ಅಂಗಡಿಗಳು ಬಂದ್ ಬೆಂಬಲಿಸಿ ಮುಚ್ಚಿದ್ದರೆ, ಹಲವಾರು ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಸಾರ್ವಜನಿಕರಿಗೆ ಹೆಚ್ಚೇನು ಅನಾನುಕೂಲವಾಗಿಲ್ಲ. ಸಾರಿಗೆ ಸಂಚಾರದಲ್ಲಿ ಹೆಚ್ಚೇನು ವ್ಯತ್ಯಯವಾಗಿರಲಿಲ್ಲ. ಮೈಸೂರು ಗ್ರಾಮಾಂತರ ವಿಭಾಗದಲ್ಲಿ ಹಾಗೂ ವಿವಿಧ ಜಿಲ್ಲೆಗಳಿಗೆ ಹೋಗುವ ಬಸ್ ಗಳ ಸಂಚಾರ ಎಂದಿನಂತೆ ಇತ್ತು. ಪೆಟ್ರೋಲ್ ಬಂಕ್ ಗಳು ಎಂದಿನಂತೆ ತೆರೆದಿದ್ದವು.

ಪೊಲೀಸ್ ಬಂದೋಬಸ್ತ್:ಭಾರತ್ ಬಂದ್​​ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಕೆಎಸ್​​ಆರ್​​ಪಿಯ 3 ತುಕಡಿಗಳು, ಸಶಸ್ತ್ರ ಪಡೆ, ಕಮಾಂಡೋ ಪಡೆ ಸೇರಿದಂತೆ ಎಲ್ಲ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅಲ್ಲದೇ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿತ್ತು.

ABOUT THE AUTHOR

...view details