ಕರ್ನಾಟಕ

karnataka

ನಂಜನಗೂಡು: ಮಹಿಳೆಯನ್ನು ಬಲಿ ಪಡೆದಿದ್ದ ಹುಲಿ ಕೊನೆಗೂ ಸೆರೆ

By ETV Bharat Karnataka Team

Published : Nov 28, 2023, 10:30 AM IST

Updated : Nov 28, 2023, 2:43 PM IST

Bandipur Tiger captured: ಮಹಿಳೆಯನ್ನು ಬಲಿ ಪಡೆದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ.

ಹುಲಿ ಸೆರೆ
ಹುಲಿ ಸೆರೆ

ಮೈಸೂರು: ಮಹಿಳೆ ಹಾಗೂ ಜಾನುವಾರುಗಳನ್ನು ಬಲಿ ಪಡೆದಿದ್ದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಹೆಡಿಯಾಲ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ನಂಜನಗೂಡು ತಾಲೂಕಿನ ಕಾಡಂಚಿನ ಪ್ರದೇಶವಾದ ಬಳ್ಳೂರು ಹುಂಡಿ ಗ್ರಾಮದ ಕಾಡಂಚಿನಲ್ಲಿ ಸೋಮವಾರ ಮಧ್ಯರಾತ್ರಿ ಹುಲಿ ಬೋನಿಗೆ ಬಿದ್ದಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ 207 ಕಾರ್ಯಾಚರಣೆಯಲ್ಲಿ ತೊಡಗಿದ್ದರು. 50ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಡ್ರೋನ್ ಕ್ಯಾಮೆರಾದ ಮೂಲಕವೂ ಹುಲಿ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು. ಅಂತೆಯೇ ಇಂದು ಬೆಳಗ್ಗೆ ಓಂಕಾರ ಮತ್ತು ಹೆಡಿಯಾಲ ವಲಯದ ಗಡಿಯಲ್ಲಿ ಜಾನುವಾರು ಮಾಂಸ ತಿನ್ನಲು ಬಂದ ವೇಳೆ ಅರವಳಿಕೆ ಮದ್ದು ನೀಡಿ ಹುಲಿ ಸೆರೆ ಹಿಡಿಯಲಾಗಿದೆ. ಹುಲಿಯನ್ನು ಮೈಸೂರಿನ‌ ಕೂರ್ಗಳ್ಳಿ ಸಮೀಪದ ಪ್ರಾಣಿಗಳ ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಆರೋಗ್ಯ ತಪಾಸಣೆ ನಂತರ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ.

ಇದನ್ನೂ ಓದಿ:ಮೈಸೂರು: ಮಹಿಳೆ ಬಲಿ ಪಡೆದ ಹುಲಿ ಸೆರೆಗೆ 3 ಸಾಕಾನೆ, 207 ಸಿಬ್ಬಂದಿಯಿಂದ ಕಾರ್ಯಾಚರಣೆ

ಓಂಕಾರ ಮತ್ತು ಹೆಡಿಯಾಲ ವಲಯದ ಗಡಿಯಲ್ಲಿನ ಕಲ್ಲಾರೆಕಂಡಿ ಬಳಿ ಅಳವಡಿಸಿದ್ದ ಕ್ಯಾಮರಾದಲ್ಲಿ ನ.27 ರಂದು ಹುಲಿ ಬಂದು ಜಾನುವಾರು ಮಾಸು ತಿಂದು ಹೋಗಿರುವುದು ಸೆರೆಯಾಗಿತ್ತು. ಇದನ್ನು ಗಮನಿಸಿದ ಇಲಾಖೆಯ ಪಶು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಅದೇ ಜಾಗದ ಸುತ್ತಮುತ್ತ ಅಡಗಿ ಕುಳಿತಿದ್ದರು. ಮರುದಿನ 28 ರಂದು ಬೆಳಗಿನ ಜಾವ ಜಾನುವಾರು ಮಾಂಸವನ್ನು ತಿನ್ನಲು ಹುಲಿ ಮತ್ತೆ ಬಂದಾಗ ಅರವಳಿಕೆ ಮದ್ದು ನೀಡಿ ಬಳಿಕ ಬಲೆ ಹಾಕಿ ಸೆರೆ ಹಿಡಿಯಲಾಗಿದೆ. ನಂತರ ಅಲ್ಲಿಂದ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ತಂದು ಬಿಡಲಾಗಿದೆ. ಹುಲಿ ಆರೋಗ್ಯ ಸದ್ಯ ಉತ್ತಮ ಸ್ಥಿತಿಯಲ್ಲಿದೆ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ರಮೇಶ್ ಕುಮಾರ್ ಪ್ರಕಟಣೆ ಹೊರಡಿಸಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿ, ಆನೆ ಕಾರ್ಯಪಡೆ ಸಿಬ್ಬಂದಿ, ಇಲಾಖೆಯ ಪಶು ವೈದ್ಯಾಧಿಕಾರಿಗಳು, ಚಿರತೆ ಕಾರ್ಯಪಡೆ ಸಿಬ್ಬಂದಿ, 100 ಗಿರಿಜನರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಸದ್ಯ ಹುಲಿ ಸೆರೆ ಹಿಡಿಯುವ ಮೂಲಕ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ನಂಜನಗೂಡು ತಾಲೂಕಿನ ಹೆಡಿಯಾಲ ಸಮೀಪವಿರುವ ಬಳ್ಳೂರುಹುಂಡಿ ಗ್ರಾಮದಲ್ಲಿ ನ. 24 ರಂದು 52 ವರ್ಷದ ರತ್ನಮ್ಮ ಹುಲಿ ದಾಳಿಯಿಂದ ಸಾವನ್ನಪ್ಪಿದ್ದರು. ಮಧ್ಯಾಹ್ನ ತಮ್ಮ ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ರತ್ನಮ್ಮ ಮೇಲೆ ಹುಲಿ ದಾಳಿ ಮಾಡಿ ಹೊತ್ಯೊಯ್ದಿತ್ತು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಶೋಧ ಕಾರ್ಯ ನಡೆಸಿದಾಗ ರತ್ನಮ್ಮ ಮೃತದೇಹ ಕಾಡಂಚಿನ ಪ್ರದೇಶದಲ್ಲಿ ಪತ್ತೆಯಾಗಿತ್ತು.

ಇದೇ ಸ್ಥಳದಲ್ಲಿ ಸುಮಾರು ಒಂದು ತಿಂಗಳ ಹಿಂದೆ ವೀರಭದ್ರ ಭೋವಿ ಎಂಬ ದನ ಗಾಹಿ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿತ್ತು. ಹುಲಿಯನ್ನು ಸೆರೆಗೆ ಸ್ಥಳೀಯರು ಆಗ್ರಹಿಸಿದ್ದರು. ಇನ್ನು ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಮೊಳೆಯೂರು ವಲಯ ಅರಣ್ಯ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ರೈತನ ಮೇಲೆ ಕೂಡ ಹುಲಿ ದಾಳಿ ಮಾಡಿ ಎಳೆದೊಯ್ದಿತ್ತು. ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಬೇಗೂರು ಗ್ರಾಮದ ರೈತ ಮತ್ತು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಾಲಾಜಿ ನಾಯ್ಕ (42) ಮೃತದೇಹ ಕಾಡಿನಲ್ಲಿ ಪತ್ತೆಯಾಗಿತ್ತು.

Last Updated :Nov 28, 2023, 2:43 PM IST

ABOUT THE AUTHOR

...view details