ಕರ್ನಾಟಕ

karnataka

ವೀರ ಸಾವರ್ಕರ್ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಅಕ್ಷಮ್ಯ ಅಪರಾಧ‌‌: ಬಿ ಎಸ್ ಯಡಿಯೂರಪ್ಪ

By

Published : Aug 23, 2022, 3:22 PM IST

ಇಂತಹ ಪುಣ್ಯ ಭೂಮಿಯಲ್ಲಿ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡುತ್ತಿರುವುದು ನನ್ನ ಸೌಭಾಗ್ಯವಾಗಿದೆ. ಆದ್ರೆ ಸಾವರ್ಕರ್ ಬಗ್ಗೆ ಅಪಪ್ರಚಾರ ಕೂಡ ಮಾಡಲಾಗುತ್ತಿದೆ ಎಂದು ಬಿ ಎಸ್​ ಯಡಿಯೂರಪ್ಪ ಹೇಳಿದರು.

B S Yediyurappa
ಬಿ ಎಸ್ ಯಡಿಯೂರಪ್ಪ

ಮೈಸೂರು:ಕನ್ನಡ ನಾಡಿನಲ್ಲಿ ವೀರ ಸಾವರ್ಕರ್ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಅಕ್ಷಮ್ಯ ಅಪರಾಧ‌‌ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಕೋಟೆ ಆಂಜನೇಯ ದೇವಾಲಯದ ಮುಂಭಾಗ ಮಂಗಳವಾರ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಮಾಜಿ ಸಿಎಂ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಸೂರಿಗೆ ವಿಶೇಷ ಸ್ಥಾನಮಾನವಿದೆ. ಇಂತಹ ಪುಣ್ಯ ಭೂಮಿಯಲ್ಲಿ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡುತ್ತಿರುವುದು ನನ್ನ ಸೌಭಾಗ್ಯವಾಗಿದೆ. ಅಷ್ಟ ದಿಕ್ಕುಗಳಲ್ಲಿ ವೀರ ಸಾವರ್ಕರ್ ಅವರ ಜೀವನ ಮೌಲ್ಯ, ತ್ಯಾಗ ಪಸರಿಸಲಿ ಎಂದರು.

ಒಂದೆಡೆ ದೇಶ ವಿಶ್ವಗುರು ಆಗಲು ದಾಪುಗಾಲು ಹಾಕುತ್ತಿದ್ದರೆ, ಮತ್ತೊಂದೆಡೆ ದೇಶದ ಮೌಲ್ಯಗಳಿಗೆ ಮಸಿ ಬಳಿಯುವ ಕೆಲಸ ಆಗುತ್ತಿದೆ. ಸಾವರ್ಕರ್ ಬಗ್ಗೆ ಅಪಪ್ರಚಾರ ಕೂಡ ಆಗುತ್ತಿದೆ. ಸಾವರ್ಕರ್ ಸಂದೇಶವನ್ನು ಮನೆ ಮನಸ್ಸುಗಳಿಗೆ ತಿಳಿಸಬೇಕು ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕರೆ ನೀಡಿದ್ದರು. ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರಿಂದ ಸ್ವಾತಂತ್ರ್ಯ ಯೋಧ ಎಂದು ಬಿರುದು ಪಡೆದಿದ್ದರು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಇದನ್ನೂ ಓದಿ:ಮೊಟ್ಟೆ ಪ್ರಕರಣದಲ್ಲಿ ಸಿದ್ದರಾಮಯ್ಯರಿಂದ ಅನಗತ್ಯ ಗೊಂದಲ ಸೃಷ್ಟಿ: ಬಿಎಸ್​​ವೈ

ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಯೋಧ ಎಂದು ಕರೆಯಲು ವಿರೋಧಿಸುವವರು ಬಸವಣ್ಣನ ವಚನ ತಿಳಿದುಕೊಳ್ಳಬೇಕು. ಶರಣರ ಗುಣವನ್ನು ಮರಣದಲ್ಲಿ ನೋಡು ಎಂದು ನಮ್ಮ ಹಿರಿಯರು ಹೇಳಿದ್ದರು. ವೀರ ಸಾವರ್ಕರ್ ಬಗ್ಗೆ ಕನ್ನಡ ನಾಡಿನಲ್ಲಿ ಅಪಪ್ರಚಾರ ಸಲ್ಲದು ಎಂದು ಬಿಎಸ್​ವೈ ಕಿಡಿಕಾರಿದರು.

ಸಾವರ್ಕರ್ ಅಂತಿಮ ಯಾತ್ರೆಯಲ್ಲಿ ಎಲ್ಲಾ ಪಕ್ಷದ ನಾಯಕರು ಭಾಗಿಯಾಗಿದ್ದರು. ಇಡೀ ಮುಂಬೈ ನಗರವೇ ಆಂತಿಮ ಯಾತ್ರೆಗೆ ಸೇರಿತ್ತು. ಸಾವರ್ಕರ್ ಭಾರತ ಮಾತೆಯ ಹೆಮ್ಮಯ ಕುವರ, ಅವರ ಮಾತು ನಮಗೆ ದಾರಿದೀಪವಾಗಬೇಕು. ದೇಶಕ್ಕಾಗಿ ತಮ್ಮ ಪದವಿಯನ್ನೇ ತಿರಸ್ಕರಿಸಿದ ಮೊದಲ ಹೋರಾಟಗಾರ. ವಿದೇಶಿ ವಸ್ತು ಬಹಿಷ್ಕರಿಸಿ, ಬ್ಯಾರಿಷ್ಟರ್ ಪದವಿ ತಿರಸ್ಕರಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಾವರ್ಕರ್ ಕುರಿತು ಗುಣಗಾನದ ಮಾತುಗಳನ್ನಾಡಿದರು.

ABOUT THE AUTHOR

...view details