ಕರ್ನಾಟಕ

karnataka

ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ನಾಳೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಚಾಲನೆ

By ETV Bharat Karnataka Team

Published : Oct 15, 2023, 10:43 PM IST

Updated : Oct 15, 2023, 11:00 PM IST

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಅಕ್ಟೋಬರ್ 16ರಿಂದ 3 ದಿನ ದಸರಾ ಉತ್ಸವ ಆಯೋಜಿಸಲಾಗಿದೆ.

ಶ್ರೀರಂಗಪಟ್ಟಣ ದಸರಾ ಮಹೋತ್ಸವ
ಶ್ರೀರಂಗಪಟ್ಟಣ ದಸರಾ ಮಹೋತ್ಸವ

ಶ್ರೀರಂಗಪಟ್ಟಣ ದಸರಾ ಮಹೋತ್ಸವ

ಮಂಡ್ಯ: ನಾಡಿನೆಲ್ಲಡೆ ಮೈಸೂರು ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಭಾನುವಾರ ಮೈಸೂರು ದಸರಾಗೆ ಅದ್ದೂರಿ ಚಾಲನೆಯೂ ಸಿಕ್ಕಿದೆ. ಮೈಸೂರು ದಸರಾದ ಮೂಲನೆಲೆ ಶ್ರೀರಂಗಪಟ್ಟಣ. ಹೀಗಾಗಿ ಶ್ರೀರಂಗಪಟ್ಟಣದ ದಸರಾ ಮಹೋತ್ಸವ ಸೋಮವಾರದಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ. ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಜಂಬೂಸವಾರಿಗೆ ಚಾಲನೆ ನೀಡುವರು.

ಶ್ರೀರಂಗಪಟ್ಟಣದ ಕಿರಂಗೂರು ಬಳಿ ಬನ್ನಿ ಮಂಟಪದಲ್ಲಿ ಮಧ್ಯಾಹ್ನ 12.30ಕ್ಕೆ ನಂದಿ ಧ್ವಜ ಪೂಜೆ, ಮಧ್ಯಾಹ್ನ 2.30 ರಿಂದ 3.15ರ ವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸಿ, ಜಂಬೂ ಸವಾರಿ ಮೆರವಣಿಗೆಗೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡುವರು. ಜಂಬೂಸವಾರಿಯಲ್ಲಿ ಅಂಬಾರಿ ಆನೆಯಾದ ಮಹೇಂದ್ರ ಹಾಗೂ ಅಕ್ಕಪಕ್ಕದಲ್ಲಿ ವಿಜಯ, ವಿಜಯಲಕ್ಷೀ ಆನೆಗಳು ಸಾಗಲಿವೆ.

ಬನ್ನಿಮಂಟಪದಿಂದ ಬ್ಯಾಂಡ್, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆಕೋಲಾಟ, ಗಾರುಡಿಗೊಂಬೆ, ತಮಟೆ, ದೊಣ್ಣೆವರಸೆ ಸೇರಿದಂತೆ ಸ್ತಬ್ದ ಚಿತ್ರಗಳ ಮೆರವಣಿಗೆ ರಂಗನಾಥ ದೇವಾಲಯದವರೆಗೆ ಸಾಗಲಿದೆ. ಸಂಜೆ ಶ್ರೀರಂಗ ವೇದಿಕೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶ್ರೀರಂಗಪಟ್ಟಣ ದಸರಾ ಹಬ್ಬದ ಇತಿಹಾಸ: ಶ್ರೀರಂಗಪಟ್ಟಣ ದಸರಾ ಹಬ್ಬವನ್ನು 1610ರಲ್ಲಿ ಅಂದಿನ ವಿಜಯನಗರ ಸಾಮ್ರಾಜ್ಯದ ದೊರೆ ಪ್ರಾರಂಭಿಸಿದ್ದರು. 1799ರ ವರೆಗೆ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದ್ದ ದಸರಾ ನಂತರ ಮೈಸೂರಿಗೆ ಸ್ಥಳಾಂತರವಾಗುತ್ತದೆ. ಶ್ರೀರಂಗಪಟ್ಟಣ ದಸರಾ ಮೈಸೂರಿನ ದಸರಾಗಿಂತಲೂ ಹಳೆಯ ಕಾಲದ್ದಾಗಿದೆ.

ದಸರಾ ಮಹೋತ್ಸವ ಅಂಗವಾಗಿ ಯುವ ದಸರಾ, ಮಹಿಳಾ ದಸರಾ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ವಸ್ತು ಪ್ರದರ್ಶನ, ಆಹಾರಮೇಳ, ಹಾಲು ಕರೆಯುವ ಸ್ವರ್ಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಹೀಗಾಗಿ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಬೃಹತ್ ವೇದಿಕೆಯನ್ನು ಕೂಡ ನಿರ್ಮಾಣ ಮಾಡಲಾಗಿದೆ. ಇಡೀ ನಗರ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.

ಗಜಪಡೆ ಆಗಮನ:ದಸರಾದಲ್ಲಿ ಭಾಗಿಯಾಗಲು ಭಾನುವಾರ ಶ್ರೀರಂಗಪಟ್ಟಣಕ್ಕೆ ಗಜಪಡೆ ಆಗಮಿಸಿದೆ. ಮೈಸೂರಿನಿಂದ ಬಂದ ಮೂರು ಆನೆಗಳಿಗೆ ಜಿಲ್ಲಾಡಳಿತದಿಂದ ವಿಶೇಷ ಪೂಜೆ ಸಲ್ಲಿಸಿ, ಸ್ವಾಗತಿಸಲಾಗಿದೆ. ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಬಳಿ ಮಹೇಂದ್ರ, ವರಲಕ್ಷ್ಮಿ ಹಾಗೂ ವಿಜಯಾ ಆನೆಗಳಿಗೆ ಶಾಸಕ ಶಾಸಕ ರಮೇಶ್ ಬಾಬು ಬಂಡೀಸಿದ್ದೇಗೌಡ ಪೂಜೆ ಸಲ್ಲಿಸಿದರು. ಆನೆಗಳಿಗೆ ಜಿಲ್ಲಾಡಳಿತದಿಂದ ಬೆಲ್ಲ, ಕಬ್ಬು ಮುಂತಾದ ಆಹಾರ ನೀಡಿ ಸ್ವಾಗತ ಕೋರಲಾಯಿತು. ದಸರಾ ಮಹೋತ್ಸವದ ಹಿನ್ನೆಲೆ ಕೆ.ಆರ್.ಎಸ್.ನ ಬೃಂದಾವನವು ಆಕರ್ಷಕ ಕಾರಂಜಿ ಹಾಗೂ ವಿದ್ಯುತ್​ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಕಾರಂಜಿ ಹಾಗೂ ವಿದ್ಯುತ್ ದೀಪಾಲಂಕಾರವನ್ನು ಸಚಿವ ಎನ್.ಚಲುವರಾಯಸ್ವಾಮಿ ವಿದ್ಯುಕ್ತವಾಗಿ ಉದ್ಘಾಟಿಸಿದರು.

ಇದನ್ನೂಓದಿ:ಮೈಸೂರು ಅರಮನೆಯಲ್ಲಿ ಶರನ್ನವರಾತ್ರಿ ಸಂಭ್ರಮ: ರತ್ನಖಚಿತ ಸಿಂಹಾಸನದಲ್ಲಿ ಯದುವೀರ್ ಖಾಸಗಿ ದರ್ಬಾರ್

Last Updated : Oct 15, 2023, 11:00 PM IST

ABOUT THE AUTHOR

...view details