ಮಂಡ್ಯ :ಜಿಲ್ಲೆಯ ಜನರು ಮತ್ತು ರೈತರ ಆರ್ಥಿಕ ಶಕ್ತಿಯಾಗಿದ್ದ ಮೈಸೂರು ಸಕ್ಕರೆ ಕಾರ್ಖಾನೆ (ಮೈಷುಗರ್) ಈ ವರ್ಷವೂ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ದುರಸ್ತಿ ಮತ್ತು ಆರ್ಥಿಕ ನಷ್ಟದ ನೆಪವೊಡ್ಡಿ ಮೂರ್ನಾಲ್ಕು ವರ್ಷಗಳಿಂದ ಕಬ್ಬು ಅರೆಯುವಿಕೆ ಸ್ಥಗಿತಗೊಂಡಿರುವ ಮೈಷುಗರ್‌ನ ಯಂತ್ರಗಳು 2021ರಲ್ಲಿಯೂ ಚಾಲನೆಯಾಗುವುದು ಅನುಮಾನವಾಗಿದೆ.
ಮೈಶುಗರ್ನ ಸರ್ಕಾರವೇ ನಡೆಸಬೇಕೆ? ಕಾರ್ಯಾಚರಣೆ ಮತ್ತು ನಿರ್ವಹಣೆ (ಒಅಂಡ್ಎಂ) ವಿಧಾನದಡಿ ಆರಂಭಿಸಬೇಕೇ? ಅಥವಾ ಖಾಸಗಿಯವರಿಗೆ ಗುತ್ತಿಗೆಗೆ ನೀಡಬೇಕೆ? ಎಂಬ ಯಾವುದೇ ನಿರ್ಧಾರಕ್ಕೂ ಸರ್ಕಾರ ಇನ್ನೂ ಬಂದಿಲ್ಲ.
ಈ ತಕ್ಷಣಕ್ಕೆ ಯಾವುದೇ ನಿರ್ಧಾರಕ್ಕೆ ಬಂದರೂ ಅದರ ಅನುಷ್ಠಾನಕ್ಕೆ ಕನಿಷ್ಠ ನಾಲೈದು ತಿಂಗಳಾದರೂ ಕಾಲಾವಕಾಶ ಬೇಕು. ಅಷ್ಟರೊಳಗೆ ಈಗ ಮೈಷುಗರ್ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಕಬ್ಬು ಬೆಳೆಯ ಗತಿ ಏನೆಂಬುದು ಪ್ರಶ್ನೆಯಾಗಿದೆ.
ಮೈಷುಗರ್.. ಕಾರ್ಖಾನೆ ಈ ವರ್ಷವೂ ಪುನಾರಂಭಗೊಳ್ಳುವುದು ಅನುಮಾನ.. ರೈತರಿಗೆ ಸಂಕಷ್ಟ :ಮೈಷುಗರ್ ವ್ಯಾಪ್ತಿಯಲ್ಲಿ ಪ್ರಸ್ತುತ ಸರಿ ಸುಮಾರು 7 ಲಕ್ಷ ಟನ್ ಕಬ್ಬು ಬೆಳೆಯಲಾಗಿದೆ. ಈಗಾಗಲೇ ಇದರಲ್ಲಿ ಶೇ.60ಕ್ಕೂ ಹೆಚ್ಚು ಪ್ರಮಾಣದ ಕಬ್ಬಿಗೆ 11 ತಿಂಗಳು ಮುಗಿದಿದೆ. ತಕ್ಷಣಕ್ಕೆ ಕಾರ್ಖಾನೆ ಆರಂಭವಾಗದಿದ್ದರೆ ಅಥವಾ ಬೇರೆ ಕಾರ್ಖಾನೆಗಳಿಗೆ ವರ್ಗಾವಣೆ ಮಾಡಲು ಸಾಧ್ಯವಾಗದಿದ್ದರೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಈ ಮೊದಲೇ ಕೊರೊನಾದಿಂದ ಆರ್ಥಿಕವಾಗಿ ಜರ್ಜರಿತರಾಗಿರುವ ರೈತರಿಗೆ ತಾವು ಬೆಳೆದ ಕಬ್ಬು ಬೆಳೆ ಕಟಾವಾಗಿ, ಸಕಾಲದಲ್ಲಿ ಹಣ ಸಿಗದಿದ್ದರೆ ಆರ್ಥಿಕವಾಗಿ ಇನ್ನಷ್ಟು ದೊಡ್ಡ ಹೊಡೆತ ಅನುಭವಿಸಲಿದ್ದಾರೆ.
ಸರ್ಕಾರ ಅಥವಾ ಒ ಅಂಡ್ ಎಂ ವಿಧಾನದಲ್ಲಾದರೂ ಆರಂಭಿಸಬೇಕು :ಜಿಲ್ಲೆಯ ರೈತರು, ಹೋರಾಟಗಾರರ ವಿರೋಧ-ಮನವಿಗಳನ್ನು ಧಿಕ್ಕರಿಸಿ ಮೈಸೂರು ಸಕ್ಕರೆ ಗುತ್ತಿಗೆ ಪುನರ್ವಸತಿ ಕಾರ್ಯಾಚರಣೆ ವರ್ಗಾವಣೆ (Lease Rehabilitate ಕಾರ್ಖಾನೆಯನ್ನು Operate Transfer-ಎಲ್‌ಆರ್‌ಒಟಿ) ಆಧಾರದ ಮೇಲೆ ಖಾಸಗಿಯವರಿಗೆ 40 ವರ್ಷಕ್ಕೆ ಗುತ್ತಿಗೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಇದರೊಂದಿಗೆ ಸರ್ಕಾರಿ ಏಕೈಕ ಸಕ್ಕರೆ ಕಾರ್ಖಾನೆಯೂ ಖಾಸಗಿಯವರ ಪಾಲಾಗುವ ಸಾಧ್ಯತೆಯಿದೆ. ಜುಲೈ 8ರಂದು ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯು ಮೈಷುಗರ್‌ನ 10 ವರ್ಷಗಳಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆ (ಓ ಅಂಡ್ ಎಂ) ವಿಧಾನದಲ್ಲಿ ಖಾಸಗಿಯವರಿಗೆ ವಹಿಸಿಕೊಡಲು ನಿರ್ಣಯ ಕೈಗೊಂಡಿತ್ತು. ಬಳಿಕ ಇದೀಗ ತನ್ನದೇ ನಿರ್ಣಯವನ್ನು ಬದಲಿಸಿಕೊಂಡು ಕಾರ್ಖಾನೆಯನ್ನು ಸಂಪೂರ್ಣ ಗುತ್ತಿಗೆಗೆ ನೀಡಲು ನಿರ್ಧರಿಸಿದೆ.
ಇನ್ನು, 40 ವರ್ಷಗಳಿಗೆ ಗುತ್ತಿಗೆ ನೀಡಿರುವುದು ರೈತರ ಕಣ್ಣು ಕೆಂಪಾಗಿಸಿದೆ. ಸಚಿವ ಸಂಪುಟ ನಿರ್ಣಯದಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ನ.18ರಂದು ಮೈಷುಗರ್‌ನ 2021-22ನೇ ಸಾಲಿನ ಹಂಗಾಮಿನಿಂದ ಗುತ್ತಿಗೆಗೆ ನೀಡುವ ಬಗ್ಗೆ ಆದೇಶ ಹೊರಡಿಸಿದ್ದಾರೆ. ಜತೆಗೆ ಎಲ್‌ಆರ್‌ಒಟಿ ಆಧಾರದ ಮೇಲೆ ಇದ್ದಲ್ಲಿ ಇದ್ದಂತೆಯೇ ಖಾಸಗಿಯವರಿಗೆ ನೀಡಲು 17 ಷರತ್ತುಗಳನ್ನು ವಿಧಿಸಲಾಗಿದೆ. ಇದರ ಆಧಾರದ ಮೇಲೆ ಟೆಂಡರ್ ಕರೆಯಲು ಸಿದ್ಧತೆಯೂ ನಡೆದಿದೆ. ಸರ್ಕಾರದ ಈ ನಿರ್ಧಾರಕ್ಕೆ ರೈತರು, ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಸಕ್ಕರೆ ಲಾಬಿಗೆ ಮಣಿದಿರುವ ಸರ್ಕಾರ ಎಲ್‌ಆರ್‌ಟಿ ಆಧಾರದ ಮೇಲೆ ಖಾಸಗಿಯವರಿಗೆ ಮೈಷುಗರ್ನ್ನು ನೀಡಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಕಾರ್ಖಾನೆಯ ಖಾಸಗೀಕರಣ ಬೇಡ. ಸರ್ಕಾರವೇ ಮೈಷುಗರ್ನ್ನು ನಡೆಸಬೇಕು. ಇಲ್ಲವೇ ಒ ಅಂಡ್ ಎಂ ವಿಧಾನದಲ್ಲಾದರೂ ಆರಂಭಿಸಬೇಕೆಂದು ಆಗ್ರಹಿಸಿದ್ದಾರೆ.
ಆಲೆಮನೆಗಳಿಗೆ ಕಬ್ಬು ಸಾಗಣೆ :ಈಗಾಗಲೇ ಆಲೆಮನೆ ಪ್ರಾರಂಭವಾಗಿದೆ. ಕಟಾವಿಗೆ ಬಂದಿರುವ ಕಬ್ಬನ್ನು ರೈತರಿಂದ ಆಲೆಮನೆ ಮಾಲೀಕರು ಖರೀದಿಸಲು ಮುಂದಾಗಿದ್ದಾರೆ. ಪ್ರತಿ ಟನ್‌ಗೆ 1800ರಿಂದ 2000 ರೂ. ದರ ನೀಡಲಾಗುತ್ತಿದೆ. ಆಲೆಮನೆ ಮಾಲೀಕರು ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವನ್ನು ಭರಿಸುತ್ತಿದ್ದಾರೆ. ಮೈಷುಗರ್ ಕಾರ್ಖಾನೆ ಆರಂಭವಾಗಬರುವ ಮುನ್ಸೂಚನೆಯಿಂದ ಕೆಲವು ರೈತರು ಬಂದಷ್ಟೇ ಬರಲಿ, ನಿಗದಿತ ಅವಧಿಯೊಳಗೆ ಕಬ್ಬು ಕಟಾವು ಮಾಡಬೇಕು ಎಂಬ ಉದ್ದೇಶದಿಂದ ಆಲೆಮನೆಗಳಿಗೆ ನೀಡುತ್ತಿದ್ದಾರೆ.
ರಾಜರ ಹೆಸರನ್ನ ಉಳಿಸುವಂತೆ ಮನವಿ :ಮೈಷುಗರ್ ಕಾರ್ಖಾನೆ ಸರ್ಕಾರಿ ಸೌಮ್ಯದಲ್ಲೇ ಉಳಿಯಬೇಕು. ಇದು ಜಿಲ್ಲೆಯ ಜನರ ಒತ್ತಾಯವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಆ ಜನರ ಆಸೆಯನ್ನ ನಿರಾಸೆ ಮಾಡಬಾರದು. ಇದು ನಾಲ್ವಡಿ ಕೃಷ್ಣರಾಜ ಒಡೆಯರು ಕೊಟ್ಟಂತಹ ಕೊಡುಗೆಯಾಗಿದ್ದು, ರಾಜ್ಯದಲ್ಲಿ 75 ವರ್ಷದಿಂದ ಸರ್ಕಾರ ಮಾಡದಿರುವ ಕೆಲಸವನ್ನ ರಾಜರು ಮಾಡಿದ್ದಾರೆ. ರಾಜರ ಹೆಸರನ್ನ ಉಳಿಸುವಂತೆ ಮುಖ್ಯಮಂತ್ರಿಗೆ ಮಾಜಿ ಸಚಿವ ಡಿ. ಸಿ. ತಮ್ಮಣ್ಣ ಮನವಿ ಮಾಡಿದರು.
ಕೆಲವು ಜನಪ್ರತಿನಿಧಿಗಳು ಸೇರಿದಂತೆ ರೈತಪರ ಸಂಘಟನೆಗಳ ಹೋರಾಟದಿಂದ ಈ ವರ್ಷವೇ ಮೈಷುಗರ್ ಕಾರ್ಖಾನೆ ಸರ್ಕಾರಿ ಸೌಮ್ಯದಲ್ಲಿ ನಡೆದರೆ ಜಿಲ್ಲೆಯ ಜನರಿಗೆ ಮರುಜೀವ ಬಂದಂತಾಗುತ್ತದೆ.