ಕರ್ನಾಟಕ

karnataka

ಜೆಡಿಎಸ್​ ಶಾಸಕರು ಚೈಲ್ಡಿಶ್ ಆಗಿ ಬಿಹೇವ್ ಮಾಡೋದು ಬಿಡಲಿ, ಪ್ರತಾಪ್ ಸಿಂಹ ಸ್ವಂತ ಹಣದಿಂದ ರೋಡ್ ಮಾಡಿಸ್ತಿಲ್ಲ: ಸುಮಲತಾ

By

Published : Aug 19, 2021, 11:07 AM IST

ಮಂಡ್ಯ ದಿಶಾ ಸಭೆಯಲ್ಲಿ ನಡೆದ ವಾಗ್ವಾದಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ಶಾಸಕರ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಕಿಡಿಕಾರಿದರು.

Mandya MP Sumalatha
ಸಂಸದೆ ಸುಮಲತಾ

ಮಂಡ್ಯ: ದಿಶಾ ಸಭೆಗ ಜೆಡಿಎಸ್​ ಶಾಸಕರು ಯಾಕೆ ಬಂದ್ರು ಅನ್ನೋದು ಎಲ್ಲರಿಗೂ ಗೊತ್ತಿದೆ. ಅಲ್ಲದೆ 7 ಸಭೆಗೆ ಬಾರದವರು 8ನೇ ಸಭೆಗೆ ಬಂದಿದ್ದಾರೆ ಅಂದರೆ ಏನರ್ಥ? ಎಂದು ಸಂಸದೆ ಸುಮಲತಾ ಅಂಬರೀಶ್ ಕಿಡಿ ಕಾರಿದರು.

ಕೆಆರ್​ಎಸ್​ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸಭೆಯಲ್ಲಿ ಅಭಿವೃದ್ದಿಗೆ ಸಂಬಂಧಿಸಿದಂತೆ ಚರ್ಚೆ ಮಾಡಬಹುದಿತ್ತು. ಆದರೆ, ಅಕ್ರಮ ಗಣಿಗಾರಿಕೆಯನ್ನು ಸಮರ್ಥನೆ ಮಾಡಲು ಸಭೆಗೆ ಬಂದಿದ್ದರು. ಇದು ಜಿಲ್ಲೆಯ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಗರಂ ಆದ ಸಂಸದೆ

'ಯಾರ ಮನೆಯಿಂದಲೂ ಹಣ ತಂದು ಯಾವ ಯೋಜನೆಯನ್ನು ಮಾಡ್ತಿಲ್ಲ'

ಹೆದ್ದಾರಿ ನಿರ್ಮಾಣದ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದೆ, ಯೋಜನೆ ನಾನೇ ತಂದೆ ಅನ್ನೋದು ಮೂರ್ಖತನ. ಯಾರ ಮನೆಯಿಂದಲೂ ಹಣ ತಂದು ಯಾವ ಯೋಜನೆಯನ್ನೂ ಮಾಡ್ತಿಲ್ಲ. ಸಾರ್ವಜನಿಕರ ಹಣದಲ್ಲಿ ಯೋಜನೆಗಳು ಆಗೋದು. ಜನರ ಪರವಾಗಿ ನಿಂತುಕೊಳ್ಳುವುದು ನನ್ನ ಜವಾಬ್ದಾರಿ ಎಂದರು.

ಪ್ರತಾಪ್ ಸಿಂಹ ಯಾವ ಉದ್ದೇಶಕ್ಕೆ ನನ್ನನ್ನು ವಿರೋಧಿಸುತ್ತಿದ್ದಾರೆ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ‌. ಆ‌ ವಿಚಾರವನ್ನು ಎಲ್ಲಿ ಹೇಳಬೇಕೋ ಅಲ್ಲೇ ಹೇಳ್ತೀನಿ. ದೊಡ್ಡ ಯೋಜನೆ ಅನ್ನೋದು ಒಬ್ಬರ ಕೈಯಲ್ಲಿ ಆಗಲ್ಲ. ಅವರು ಯೋಜನೆಯನ್ನು ನಾನೊಬ್ಬನೇ ಮಾಡ್ತಿದ್ದೀನಿ ಎನ್ನುವ ಮನೋಭಾವ ಹೊಂದಿದ್ದಾರಾ ಎಂದು ಪ್ರಶ್ನಿಸಿದರು.

'ಸಭೆ ನಿಲ್ಲಿಸುವ ಉದ್ದೇಶದಿಂದಲೇ ಜೆಡಿಎಸ್​ನವರು ಬಂದಿದ್ದು'

ಸುಮಲತಾ ಆಪ್ತರನ್ನು ಸಭೆಯಿಂದ ಹೊರಗಿಡಿ ಎಂಬ ಜೆಡಿಎಸ್​ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿ, ನನ್ನ ಸಿಬ್ಬಂದಿ ಎಲ್ಲರೂ ಅಧಿಕೃತರು. ದಿಶಾ ಸಭೆ ಗೌಪ್ಯ ಸಭೆಯಲ್ಲ. ಜೆಡಿಎಸ್​ ಶಾಸಕರು ಬಂದಿದ್ದೇ ಸಭೆಗೆ ಅಡ್ಡಿಪಡಿಸಲು. ಅವರು ಬರ್ತಾರೆ ಎಂದಾಗ ಸಭೆ ನಿಲ್ಲಿಸುವ ಉದ್ದೇಶಕ್ಕೆ ಬರ್ತಿದ್ದಾರೆ ಅನ್ನೋದು ಗೊತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

'ನಾನು ಹೆದರುವವಳಲ್ಲ'

ಕೋವಿಡ್ ಸಂದರ್ಭದಲ್ಲೂ ಸಭೆಗೆ ಬಾರದವರು ಇವತ್ತು ಬಂದಿದ್ದಾರೆ. ನನ್ನ ಆಪ್ತ ಕಾರ್ಯದರ್ಶಿ ನನ್ನ‌ ಹೆಸರಿನಲ್ಲಿ ಸಹಿ ಮಾಡ್ತಿಲ್ಲ, ಆಪ್ತ ಕಾರ್ಯದರ್ಶಿ ಎಂದೇ ಸಹಿ ಮಾಡ್ತಿದ್ದಾರೆ. ಜೆಡಿಎಸ್​ ಶಾಸಕರು ಚೈಲ್ಡಿಶ್ ಆಗಿ ಬಿಹೇವ್ ಮಾಡೋದು ಬಿಡಲಿ. ನನ್ನನ್ನು ಹೆದರಿಸಿ ಬೆದರಿಸಿದ್ರೆ ನಾನು ಹೆದರುವವಳಲ್ಲ. ನನ್ನ ಶಕ್ತಿ ಹಾಗೂ ಸ್ಪೂರ್ತಿ ಬಗ್ಗೆ ಅವರಿಗೆ ಗೊತ್ತಿಲ್ಲ. ಅಕ್ರಮ ಗಣಿಗಾರಿಕೆ ನಿಂತಿದ್ದರಿಂದಲೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ, ಇದು 100 ಪ್ರತಿಶತಃ ಸತ್ಯ. ಜೆಡಿಎಸ್​ ಶಾಸಕರಿಗೆ ಚಿಕಿತ್ಸೆಯ ಅಗತ್ಯ ಇದೆ ಎಂದು ಸಂಸದೆ ಸುಮಲತಾ ಹೇಳಿದರು.

ಕೆಆರ್​ಎಸ್​ ಡ್ಯಾಂಗೆ ಭೇಟಿ :ಮೆಟ್ಟಿಲು ಬಳಿ ತಡೆಗೋಡೆ ಕುಸಿದ ಹಿನ್ನೆಲೆ ಕೃಷ್ಣರಾಜ ಅಣೆಕಟ್ಟೆಗೆ ಸುಮಲತಾ ಅಂಬರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಆರ್​ಎಸ್​ ಸುರಕ್ಷತೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೇ ತಡೆಗೋಡೆ ಕುಸಿದಿರುವುದರಿಂದ, ತಡೆಗೋಡೆ ಪುನರ್​​ನಿರ್ಮಾಣ ಕಾಮಗಾರಿ ವೀಕ್ಷಿಸಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಕೆಆರ್​ಎಸ್​ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದೆ ಸುಮಲತಾ

ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಸಭೆ :ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಕೆಆರ್‌ಎಸ್​ನ ಕಾವೇರಿ ಸಭಾಂಗಣದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಸಂಸದೆ ಸಭೆ ನಡೆಸಿದರು.

ಬೇಸರ ಹೊರಹಾಕಿದ ಸಂಸದೆ:ಸಭೆಗೆ ಬರಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಯಾರ ಬಳಿ ಮಾಹಿತಿ ಇದೆಯೋ ಅವರು ಸಭೆಗೆ ಬರುತ್ತಿಲ್ಲ. ಕೆಆರ್​ಎಸ್​ ಅಧೀಕ್ಷಕ ಇಂಜಿನಿಯರ್ ವಿಜಯ್‌ಕುಮಾರ್ ಈ ವರೆಗೂ ಸಭೆಗೆ ಬಂದಿಲ್ಲ ಎಂದು ಸಂಸದೆ ಸುಮಲತಾ ಬೇಸರ ಹೊರಹಾಕಿದರು.

ಜೆಡಿಎಸ್​ ಶಾಸಕ ರವೀಂದ್ರ ಶ್ರೀಕಂಠಯ್ಯ ಮಧ್ಯಾಹ್ನ ಮಂಡ್ಯದಲ್ಲಿ ಕೆಆರ್​ಎಸ್​ ಅಧೀಕ್ಷಕ ಇಂಜಿನಿಯರ್​ಗೆ ಅರ್ಜಿ ಕೊಟ್ಟಿದ್ದರು. ಸಂಸದರು ನೀರಾವರಿ ನಿಗಮದ ಅಧಿಕಾರಿಗಳ ಸಭೆ ನಡೆಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇತ್ತ ಶಾಸಕರ ಆಕ್ಷೇಪದ ನಡುವೆಯೂ ಅಧಿಕಾರಿಗಳ ಜೊತೆ ಸಂಸದೆ ಸುಮಲತಾ ಸಭೆ ನಡೆಸಿದ್ದಾರೆ.

ದೃಷ್ಟಿ ಪೂಜೆ ಮಾಡಲು ಅನುಮತಿ ಇದೆಯಾ?ನೀರಾವರಿ ನಿಗಮದ ಅಧಿಕಾರಿಗಳ ಸಭೆ ನಡೆಸಲು ಸಂಸದರಿಗೆ ಅವಕಾಶವಿಲ್ಲ ಎಂಬ ಶಾಸಕ ರವೀಂದ್ರ ಶ್ರೀಕಂಠಯ್ಯ ವಾದಕ್ಕೆ ಟಾಂಗ್ ನೀಡಿದ ಸುಮಲತಾ ಅಂಬರೀಶ್, ಡ್ಯಾಂನಲ್ಲಿ ದೃಷ್ಟಿ ಪೂಜೆ ಮಾಡಲು ಅನುಮತಿ ಇದೆಯಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಅಲ್ಲದೆ, ಆ ಸಂಬಂಧ ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ಜೂನಿಯರ್ ಇಂಜಿನಿಯರ್ ಕಿಶೋರ್​ ಅವರಿಗೆ ಸಂಸದೆ ತಾಕೀತು ಮಾಡಿದರು.

ABOUT THE AUTHOR

...view details