ಕರ್ನಾಟಕ

karnataka

ಮಂಡ್ಯ: ಜೈಂಟ್ ವ್ಹೀಲರ್​​​ಗೆ ತಲೆಕೂದಲು ಸಿಲುಕಿ ಬಾಲಕಿಗೆ ಗಂಭೀರ ಗಾಯ

By

Published : Jan 29, 2023, 1:38 PM IST

Updated : Jan 30, 2023, 4:15 PM IST

ಜೈಂಟ್ ವೀಲರ್​ಗೆ ಬಾಲಕಿಯ ತಲೆಕೂದಲು ಸಿಲುಕಿ ಆಕೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

Girl seriously injured after getting caught in joint wheeler
ಜೈಂಟ್ ವ್ಹೀಲರ್​​​ಗೆ ತಲೆಕೂದಲು ಸಿಲುಕಿ ಬಾಲಕಿಗೆ ಗಂಭೀರ ಗಾಯ

ಜೈಂಟ್ ವ್ಹೀಲರ್​​​ಗೆ ತಲೆಕೂದಲು ಸಿಲುಕಿ ಬಾಲಕಿಗೆ ಗಂಭೀರ ಗಾಯ

ಮಂಡ್ಯ:ಜೈಂಟ್ ವ್ಹೀಲರ್​​​ಗೆ ಬಾಲಕಿಯ ತಲೆಕೂದಲು ಸಿಲುಕಿ ಗಂಭೀರ ಗಾಯಗೊಂಡಿದ್ದಾಳೆ. ಜಿಲ್ಲೆಯ ಶ್ರೀರಂಗಪಟ್ಟಣದ ರಂಗನಾಥ ಮೈದಾನದಲ್ಲಿ ಶನಿವಾರ ತಡರಾತ್ರಿ ಅವಘಡ ಸಂಭವಿಸಿದೆ. ಬೆಂಗಳೂರಿನ ಶ್ರೀವಿದ್ಯಾ(14) ಗಂಭೀರ ಗಾಯಗೊಂಡಿರುವ ಬಾಲಕಿ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯದ ಮೈದಾನದಲ್ಲಿ ರಥಸಪ್ತಮಿ ಅಂಗವಾಗಿ ರಂಗನಾಥ ಜಾತ್ರೆ ನಡೆಯುತ್ತಿತ್ತು. ಜಾತ್ರೆಯಲ್ಲಿ ಜೈಂಟ್ ವ್ಹೀಲರ್​ ಗೇಟ್ ಹಾಕಲಾಗಿತ್ತು. ಇದರಲ್ಲಿ​ ಆಡಲು ಬಂದಿದ್ದ ಬಾಲಕಿಯ ತಲೆ ಕೂದಲು ಸಿಲುಕಿಕೊಂಡು ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಶ್ರೀ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ಆಚರಣೆಗಾಗಿ ಪಟ್ಟಣದ ಸಂಬಂಧಿಕರ ಮನೆಗೆ ಆಗಮಿಸಿದ್ದ ಬಾಲಕಿ ತನ್ನ ಸಂಬಂಧಿ ಯುವತಿಯರೊಂದಿಗೆ ತೊಟ್ಟಿಲಿನಲ್ಲಿ ಕುಳಿತು ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ತಲೆಕೂದಲು ಸಿಕ್ಕಿಕೊಂಡಿದೆ. ಬಾಲಕಿ ಹಾಗೂ ಅವಳ ಪಕ್ಕದಲ್ಲಿ ಕುಳಿತುಕೊಂಡಿದ್ದ ಪೋಷಕರು ಕೂದಲನ್ನು ಬಿಡಿಸಿಕೊಳ್ಳಲು ಜೋರಾಗಿ ಎಳೆದಿದ್ದಾರೆ. ಆದರೆ, ಬಲಿಷ್ಠವಾಗಿರುವ ಜೈಂಟ್ ವ್ಹೀಲರ್​ ಜೋರಾಗಿ ತಿರುಗುವಾಗ ಬಾಲಕಿಯ ತಲೆಯ ಕೂದಲು ಚರ್ಮದ ಸಮೇತವಾಗಿ ಕಿತ್ತುಕೊಂಡು ಬಂದಿದೆ.

ಗಂಭೀರ ಗಾಯ:ತಲೆಯ ಕೂದಲು ಚರ್ಮದ ಸಮೇತವಾಗಿ ಕಿತ್ತುಕೊಂಡು ಬಂದಿದ್ದು ಬಾಲಕಿ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವ ಉಂಟಾಗುತ್ತಿತ್ತು. ತಕ್ಷಣ ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಘಟನೆಯ ಕುರಿತ ಮಾತನಾಡಿದ ಸ್ಥಳೀಯ ಸೋಮಶೇಖರ್​ ಎಂಬುವರು ''28ನೇ ತಾರೀಖಿನಂದು ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ರಥೋತ್ಸವ ಕಾರ್ಯಕ್ರಮವಿತ್ತು, ರಥೋತ್ಸವದ ಪ್ರಯುಕ್ತ ಜಾತ್ರೆಯನ್ನು ಆಯೋಜಿಸಲಾಗಿತ್ತು. ರಥೋತ್ಸವ ಕಾರ್ಯಕ್ರಮಕ್ಕೆ ದೂರದ ಊರಿನಿಂದ ಭಕ್ತರು ಆಗಮಿಸಿದ್ದರು. ಮನರಂಜನೆಗಾಗಿ ಜಾತ್ರೆಯಲ್ಲಿ ಅಳವಡಿಸಿದ್ದ ಜೈಂಟ್​​ ವ್ಹೀಲರ್​ಗೆ ಆಡಲು ಬಂದ ಬಾಲಕಿಯ ತಲೆಕೂದಲು ಸಿಕ್ಕಿಕೊಂಡಿದ್ದು, ಚರ್ಮದ ಸಹಿತ ಕಿತ್ತು ಬಂದಿದೆ. ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ರವಾನಿಸಲಾಯಿತು'' ಎಂದು ಹೇಳಿದರು.

ಜಾತ್ರೆಯಲ್ಲಿ ಜೈಂಟ್​ ವ್ಹೀಲರ್​ ಅನ್ನು​ ಅಳವಡಿಸಲು ಯಾವುದೇ ಅನುಮತಿ ಪಡೆದಿಲ್ಲ. ಪುರಸಭೆ, ತಾಲೂಕು ಆಡಳಿತ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು, ಈಗ ಆ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ತಾಲೂಕು ಆಡಳಿತ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಂಡು ಗಾಯಗೊಂಡ ಬಾಲಕಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಸೋಮಶೇಖರ್​ ಹೇಳಿದರು.

ಜಾಯಿಂಟ್​ ವ್ಹೀಲರ್​​​ ಕಾರ್ಮಿಕರಿಗೆ ಹಿಗ್ಗಾಮುಗ್ಗಾ ತಳಿಸಿದ ಸಾರ್ವನಿಕರು : ಘಟನೆ ಬಳಿಕ ಭಯದಿಂದ ಓಡಿಹೋಗುತ್ತಿದ್ದ ಜೈಂಟ್​ ವ್ಹೀಲರ್​​ ಕಾರ್ಮಿಕರನ್ನು ಜಾತ್ರೆಗೆ ಬಂದಿದ್ದ ಸಾರ್ವಜನಿಕರು ಅಟ್ಟಾಡಿಸಿ ಹಿಡಿದು ಥಳಿಸಿದ್ದಾರೆ, ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು, ಪರಿಸ್ಥಿತಿ ತಿಳಿಗೊಳಿಸಿ ಜೈಂಟ್​ ವ್ಹೀಲರ್​ ಕಾರ್ಮಿಕರಾದ ಮೂವರು ಪುರುಷರು ಹಾಗೂ ಓರ್ವ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಈ ರೀತಿಯ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಉಳ್ಳಾಲ ಉರೂಸ್: ಜಾಯಿಂಟ್ ವ್ಹೀಲ್ ತುಂಡಾಗಿ ನಾಲ್ವರು ಮಕ್ಕಳಿಗೆ ಗಾಯ

Last Updated : Jan 30, 2023, 4:15 PM IST

ABOUT THE AUTHOR

...view details