ಕರ್ನಾಟಕ

karnataka

ಮಂಡ್ಯ: ಬಾಸ್​ ಎಂದು ಕರೆಯದ್ದಕ್ಕೆ ಯುವಕನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ, ಓರ್ವನ ಬಂಧನ

By

Published : Aug 4, 2023, 5:05 PM IST

ಬಾಸ್​ ಎನ್ನದ್ದಕ್ಕೆ ಕೋಪಗೊಂಡ ದುಷ್ಕರ್ಮಿಗಳ ಗುಂಪೊಂದು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಹಲ್ಲೆಗೊಳಗಾದ ಶಾರಂತ್​
ಹಲ್ಲೆಗೊಳಗಾದ ಶಾರಂತ್​

ಮಾರಕಾಸ್ತ್ರದಿಂದ ಯುವಕನ ಮೇಲೆ ಹಲ್ಲೆ ಪ್ರಕರಣ: ಹೇಳಿಕೆಗಳು

ಮಂಡ್ಯ:ಬಾಸ್​ ಎಂದು ಕರೆಯದಿದ್ದಕ್ಕೆ ಪುಡಿರೌಡಿಗಳು ಯುವಕನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವ ಘಟನೆ ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದಿದೆ. ಯುವಕ ಶಾರಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾರಂತ್ ಮಂಡ್ಯ ವಿಸಿ ಫಾರ್ಮ್​ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಗುರುವಾರ ತನ್ನ ಹುಟ್ಟಿದ ದಿನವಾದ್ದರಿಂದ ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿ, ಸಂಜೆ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಅಡ್ಡ ಹಾಕಿದ ರೌಡಿಶೀಟರ್​ ಮಾದಪ್ಪ ಹಾಗೂ ಆತನ ಸ್ನೇಹಿತರಾದ ಚಿಂಟು, ತರುಣ್, ಸುಶಾಂತ್, ಚಂದನ್ ಎಂಬವರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಶಾರಂತ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾಗಿ ಮಾದಪ್ಪ, ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ. ಕೆಲವು ದಿನಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದ. ಆದರೆ ಹೊಳಲು ಗ್ರಾಮದವನೇ ಆಗಿರುವ ಮಾದಪ್ಪ, ಗ್ರಾಮದಲ್ಲಿ ಹವಾ ಸೃಷ್ಠಿಸಬೇಕು ಎಂದು ಎಲ್ಲರ ಬಳಿ ಹೋಗಿ ಬಾಸ್ ಎಂದು ಕರೆಯಬೇಕು ಎಂದು ಅವಾಜ್ ಹಾಕುತ್ತಿದ್ದನಂತೆ. ಅದೇ ರೀತಿ ಈ ಹಿಂದೆ ಕೂಡ ಶಾರಂತ್​ಗೂ ಅವಾಜ್ ಹಾಕಿದ್ದಾನೆ. ಇದಕ್ಕೆ ಶಾರಂತ್​ ಕಿವಿಗೊಡಲಿಲ್ಲ ಎಂದು ಗಲಾಟೆ ನಡೆದಿತ್ತು. ಇದರಿಂದಾಗಿ ದ್ವೇಷ ಬೆಳೆದಿದೆ. ಗುರುವಾರ ಗ್ರಾಮಕ್ಕೆ ಬಂದಾಗ ಏಕಾಏಕಿ ದಾಳಿ ನಡೆಸಿ ಪರಾರಿಯಾಗಿದ್ದಾನೆ.

ಮಂಡ್ಯ ಎಸ್ಪಿ ಯತೀಶ್ ಪ್ರತಿಕ್ರಿಯೆ : "ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಮಂಡ್ಯ ಗ್ರಾಮಾಂತರ ಪೊಲೀಸ್​ ಠಾಣೆಯ ವ್ಯಾಪ್ತಿಯ ಹೊಳಲು ಗ್ರಾಮದಲ್ಲಿ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಶಾರಂತ್​ ಎಂಬ ಯುವಕ ಹಲ್ಲೆಗೊಳಗಾಗಿದ್ದಾನೆ. ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಗ್ರಾಮದಲ್ಲಿನ ಬಸ್​ ನಿಲ್ದಾಣದ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ. ಈ ವೇಳೆ ಪ್ರಕರಣದ ಐವರು ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಐವರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ದೂರಿನಲ್ಲಿ ಹಳೆ ದ್ವೇಷ ಎಂದು ಮಾತ್ರ ಹೇಳಲಾಗಿದೆ. ಈ ಬಗ್ಗೆ ಕೂಲಂಕಶವಾಗಿ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ" ಎಂದು ಎಸ್ಪಿ ಯತೀಶ್ ತಿಳಿಸಿದ್ದಾರೆ.

ಇದನ್ನೂ ಓದಿ:ತುಮಕೂರು: ಹಾಡಹಗಲೇ ಯುವಕನೊಬ್ಬನ ಮೇಲೆ ಮಾರಾಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ- ವಿಡಿಯೋ

ABOUT THE AUTHOR

...view details