ಕರ್ನಾಟಕ

karnataka

ಜಮೀನು ವಿವಾದ: ಅಣ್ಣನ ಮಗನನ್ನೇ ಗುಂಡಿಕ್ಕಿ ಹತ್ಯೆ ಮಾಡಿದ ರೌಡಿಶೀಟರ್ ಸೀಮೆಎಣ್ಣೆ ಕುಮಾರ್​

By ETV Bharat Karnataka Team

Published : Nov 4, 2023, 7:15 PM IST

Updated : Nov 4, 2023, 10:43 PM IST

ಮಂಡ್ಯದಲ್ಲಿ ಜಮೀನು ವಿವಾದ ಇತ್ಯರ್ಥ ಮಾತುಕತೆ ವೇಳೆ ರೌಡಿಶೀಟರ್​ ಸೀಮೆಎಣ್ಣೆ ಕುಮಾರ್ ತನ್ನ ಅಣ್ಣನ ಮಗನಿಗೆ ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾನೆ.

mandya murder
ಮಗನ ಸಾವಿನ ಕುರಿತು ಪೊಲೀಸರಿಗೆ ತಿಳಿಸುತ್ತಿರುವ ಮೃತನ ತಂದೆ

ಘಟನೆ ಬಗ್ಗೆ ವಿವರಿಸುತ್ತಿರುವ ಮೃತನ ತಂದೆ ವಾಸು

ಮಂಡ್ಯ:ಜಮೀನು ವಿವಾದದ ಹಿನ್ನೆಲೆಯಲ್ಲಿ ರೌಡಿಯೊಬ್ಬ ತನ್ನ ಅಣ್ಣನ ಮಗನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಾಗಮಂಗಲ ತಾಲೂಕಿನ ಗಡಿಭಾಗ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವಾಸು ಅಲಿಯಾಸ್ ವಿಷಕಂಠರ ಪುತ್ರ ಜೈಪಾಲ್ (24) ಅವರನ್ನು ಗುಂಡಿಕ್ಕಿ ರೌಡಿ ಸೀಮೆಎಣ್ಣೆ ಕುಮಾರ್ ಗೌಡ ಹತ್ಯೆ ಮಾಡಿದ್ದಾನೆ. ಸಹೋದರರಾದ ವಾಸು ಮತ್ತು ರೌಡಿ ಸೀಮೆಎಣ್ಣೆ ಕುಮಾರ್ ನಡುವೆ ಜಮೀನಿನ ವಿಚಾರವಾಗಿ ವಿವಾದ ಏರ್ಪಟ್ಟಿತ್ತು. ಇದೇ ವಿಚಾರವಾಗಿ ಗಲಾಟೆ ಸಹ ನಡೆಯುತ್ತಿತ್ತು. ಸ್ವಗ್ರಾಮ ಹನುಮನಹಳ್ಳಿಯಲ್ಲಿ ವಿವಾದ ಇತ್ಯರ್ಥದ ಮಾತುಕತೆಗೆ ಮುಂದಾಗಿದ್ದರು. ಅದರಂತೆ ಮಾತುಕತೆ ನಡೆಯುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು ಸೀಮೆ ಎಣ್ಣೆ ಕುಮಾರ್ ತನ್ನ ಬಳಿ ಇದ್ದ ಗನ್​ನಿಂದ ಅಣ್ಣನ ಮಗ ಜೈಪಾಲ್ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡು ರಕ್ತಸ್ರಾವದಿಂದ ಕುಸಿದು ಬಿದ್ದ ಜೈಪಾಲ್​ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಸಮೀಪದಿಂದ ಮೂರು ಸುತ್ತು ಗುಂಡು ಹಾರಿಸಿದ ಕಾರಣ ಜೈಪಾಲ್​ಗೆ ಪಾರಾಗಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲದೆ ಗುಂಡೇಟಿನ ಸದ್ದಿಗೆ ಸುತ್ತಮುತ್ತಲಿದ್ದ ಜನರು ಹೆದರಿ ರಕ್ಷಣೆಗೆ ಮುಂದಾಗಲಿಲ್ಲ ಎನ್ನಲಾಗಿದೆ. ಗುಂಡಿಕ್ಕಿ ಹತ್ಯೆ ಮಾಡಿದ ರೌಡಿ ಪರಾರಿಯಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.

ಘಟನೆ ಕುರಿತು ವಿವರಿಸಿದ ಮೃತನ ತಂದೆ ವಾಸು, ಜಮೀನು ವಿಚಾರದಲ್ಲಿ ನಾವು ಕೋರ್ಟ್​ಗೆ ಚಾಡಿ ಹೇಳಿದ್ದೇವೆ ಎಂದು ಸೀಮೆಎಣ್ಣೆ ಕುಮಾರ್ ಆರೋಪಿಸಿದ್ದ. ಆದರೆ, ನಾವು ಅವರ ವಿರುದ್ಧ ಏನನ್ನೂ ಕೋರ್ಟ್​ನಲ್ಲಿ ಹೇಳಿಲ್ಲ. ನನ್ನ ಬಳಿ ಈ ಕುರಿತು ರೆಕಾರ್ಡ್​ಗಳಿವೆ. ಇದಕ್ಕೆ ಆರೋಪಿ ಕುಮಾರ್​ ಹಾಗಾದರೆ ಮಕ್ಕಳನ್ನು ಕರೆದುಕೊಡು ದೇವಾಲಯಕ್ಕ ಬಾ, ಅಲ್ಲಿ ದೇವರ ಮುಂದೆ ಸತ್ಯ ಆಣೆ ಮಾಡಿಸುವ ಎಂದು ಕರೆದಿದ್ದ. ಮಕ್ಕಳನ್ನು ಕರೆದುಕೊಂಡು ಜಮೀನು ವಿವಾದ ಇತ್ಯರ್ಥ ಮಾಡಲು ಹೋಗಿದ್ದೆವು. ಆದರೆ ಅಲ್ಲಿ ಒಳಗೆ ಇಂದ ಕೋವಿ ತಂದು ನನ್ನ ಮಗನಿಗೆ ಗುಂಡು ಹಾರಿಸಿದ ಎಂದು ಅಳುತ್ತಾ ಹೇಳಿಕೊಂಡರು.

ನಾಗಮಂಗಲ-ಕೆ.ಆರ್.ಪೇಟೆ ಗಡಿ ಗ್ರಾಮದಲ್ಲಿ ನಡೆದ ಗುಂಡಿನ ಸದ್ದು ಸ್ಥಳೀಯರನ್ನು ಬೆಚ್ಚಿಬಿಳಿಸಿತ್ತು. ಸ್ಥಳೀಯರು ಯುವಕನ ಮೃತ ದೇಹವನ್ನು ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಬಿಂಡಿಗನವಿಲೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಭೇಟಿ ನೀಡಿ ದುರಂತ ಸ್ಥಳದ ಪರಿಶೀಲನೆ ನಡೆಸಿದರು. ಇದೇ ವೇಳೆ ಆರೋಪಿ ಪತ್ತೆಗೆ ಪೊಲೀಸರಿಗೆ ನಿರ್ದೇಶನ ಕೂಡಾ ನೀಡಿದರು.

ಇದನ್ನೂ ಓದಿ:ಕೌಟುಂಬಿಕ ಕಲಹ, ಯುವಕ ಆತ್ಮಹತ್ಯೆ; ಹುಬ್ಬಳ್ಳಿಯಲ್ಲಿ ಇನ್​ಸ್ಪೆಕ್ಟರ್ ಸೇರಿ 8 ಜನರ ವಿರುದ್ಧ ಕೇಸ್

Last Updated : Nov 4, 2023, 10:43 PM IST

ABOUT THE AUTHOR

...view details