ಕರ್ನಾಟಕ

karnataka

ಅಡುಗೆ ಎಣ್ಣೆ ಬೆಲೆ ಹೆಚ್ಚಳ: ಸೂರ್ಯಕಾಂತಿ ಬೆಳೆಯಲು ಮುಂದಾದ ರೈತರಿಗೆ ಬಿತ್ತನೆ ಬೀಜಗಳ ಕೊರತೆ

By

Published : Nov 8, 2021, 7:47 AM IST

ಅಡುಗೆ ಎಣ್ಣೆ ದರ ಏರಿಕೆಯಾಗುತ್ತಿದ್ದಂತೆ ಸೂರ್ಯಕಾಂತಿ ಬಿತ್ತನೆಯ ಪ್ರಮಾಣ ಏರಿಕೆಯಾಗಿದೆ. ಈ ಮಧ್ಯೆ ಸೂರ್ಯಕಾಂತಿ ಬೀಜಕ್ಕೆ ಡಿಮ್ಯಾಂಡ್‌ ಅಧಿಕವಾಗಿದ್ದು, ಬಿತ್ತನೆ ಬೀಜ ಒದಗಿಸಲು ಕೃಷಿ ಇಲಾಖೆ ಹೆಣಗಾಡುತ್ತಿದೆ.

shortage of sunflower seeds in koppal
shortage of sunflower seeds in koppal

ಕೊಪ್ಪಳ: ಒಂದು ಕಡೆ ತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಅಡುಗೆ ಎಣ್ಣೆ ದರವು ಸಹ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಡುಗೆ ಎಣ್ಣೆ ಬೆಲೆ ಏರಿಕೆಯಾಗುತ್ತಿದ್ದಂತೆ ಸೂರ್ಯಕಾಂತಿ ಬೀಜಕ್ಕೆ ಡಿಮ್ಯಾಂಡ್‌ ಬಂದಿದ್ದು, ಇದೀಗ ಬಿತ್ತನೆ ಮಾಡಲು ಬೀಜಗಳು ಸಿಗದ ಹಿನ್ನೆಲೆ ರೈತರು ಪರದಾಡುವಂತಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಸೂರ್ಯಕಾಂತಿ ಬಿತ್ತನೆ ಬೀಜಗಳ ಕೊರತೆ ಎದುರಾಗಿದೆ. ಸೂರ್ಯಕಾಂತಿ ಬಿತ್ತನೆ ಮಾಡಲು ಜಿಲ್ಲೆಯಲ್ಲಿ ರೈತರು ಹೊಲಗಳನ್ನು ಹದ ಮಾಡಿಟ್ಟುಕೊಂಡಿದ್ದಾರೆ. ಬಿತ್ತನೆ ಬೀಜಕ್ಕಾಗಿ ರೈತರು ರೈತ ಸಂಪರ್ಕ ಕೇಂದ್ರ ಸೇರಿದಂತೆ ಖಾಸಗಿ ಬೀಜ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ, ಬೀಜಗಳು ಸಿಗದ ಹಿನ್ನೆಲೆ ವಾಪಸ್ ಆಗುತ್ತಿದ್ದಾರೆ.

ಸೂರ್ಯಕಾಂತಿ ಬೀಜಕ್ಕಾಗಿ ರೈತರ ಪರದಾಟ

ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿರುವುದರಿಂದ ಸೂರ್ಯಕಾಂತಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯ ರೈತರು ಈ ಬಾರಿ ಸೂರ್ಯಕಾಂತಿ ಬೆಳೆಯಲು ಮುಂದಾಗಿದ್ದಾರೆ. ಕ್ವಿಂಟಾಲ್‍ಗೆ 7 ರಿಂದ 8 ಸಾವಿರ ರೂ. ದರವಿದೆ. ಸೂರ್ಯಕಾಂತಿ ಬೆಳೆ ಬೆಳೆದು ಹಣ ಸಂಪಾದಿಸಬಹುದು ಎಂಬ ಆಸೆಯಿಂದ ಜಮೀನು ಹದ ಮಾಡಿಕೊಂಡಿದ್ದಾರೆ. ಆದರೆ ಬಿತ್ತನೆ ಬೀಜಗಳ ಕೊರೆತೆ ಉಂಟಾಗಿದ್ದು, ಸೂರ್ಯಕಾಂತಿ ಬೀಜ ಸಿಗದೆ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ.

ಜಿಲ್ಲೆಯಲ್ಲಿ ಸೂರ್ಯಕಾಂತಿ ಬಿತ್ತನೆ ಪ್ರದೇಶ ಅಧಿಕಗೊಂಡ ಹಿನ್ನೆಲೆಯಲ್ಲಿ ಬೀಜಗಳ ಕೊರತೆ ಕಂಡು ಬಂದಿದೆ. ಕಳೆದ ಸಾಲಿಗಿಂತ ಸುಮಾರು 2 ಸಾವಿರ ಹೆಕ್ಟೇರ್ ಸೂರ್ಯಕಾಂತಿ ಬಿತ್ತನೆ ಪ್ರದೇಶ ಹೆಚ್ಚಾಗಿದೆ. ಇದರಿಂದಾಗಿ ಈ ಬಾರಿ ಸೂರ್ಯಕಾಂತಿ ಬಿತ್ತನೆ ಬೀಜದ ಕೊರತೆ ಎದುರಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ABOUT THE AUTHOR

...view details