ಕರ್ನಾಟಕ

karnataka

'ನಾರಿ ಸುವರ್ಣ ಸಂವರ್ಧನ ಕೇಂದ್ರ' ಕುಷ್ಟಗಿಯಲ್ಲಿ ಕಾರ್ಯಾರಂಭಕ್ಕೆ ಕ್ರಮ; ಶರಣು ತಳ್ಳೀಕೇರಿ

By

Published : Oct 5, 2021, 4:40 PM IST

ರಾಜ್ಯದಲ್ಲಿಯೇ ಮೊದಲು ಎನ್ನುವಂತೆ, ವಿಶೇಷ ಕುರಿ ತಳಿಯ 'ನಾರಿ ಸುವರ್ಣ ಸಂವರ್ಧನ ಕೇಂದ್ರ'ವನ್ನು ಕುಷ್ಟಗಿ ತಾಲೂಕಿನ ತುಗ್ಗಲದೋಣಿ ಗ್ರಾಮದಲ್ಲಿ ಕಾರ್ಯಾರಂಭಿಸಲು ಕ್ರಮ ವಹಿಸಲಾಗಿದೆ ಎಂದು ಶರಣು ತಳ್ಳೀಕೇರಿ ತಿಳಿಸಿದರು.

sharanu tallikeri
ಕುರಿ ಮತ್ತು ಉಣ್ಣೆ ನಿಗಮ ಮಂಡಳಿ ಅಧ್ಯಕ್ಷ ಶರಣು ತಳ್ಳೀಕೇರಿ

ಕುಷ್ಟಗಿ (ಕೊಪ್ಪಳ): ವಿಶೇಷ ಕುರಿ ತಳಿಯ 'ನಾರಿ ಸುವರ್ಣ ಸಂವರ್ಧನ ಕೇಂದ್ರ'ವನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಕುಷ್ಟಗಿ ತಾಲೂಕಿನ ತುಗ್ಗಲದೋಣಿ ಗ್ರಾಮದಲ್ಲಿ ಕಾರ್ಯಾರಂಭಿಸಲು ಕ್ರಮ ವಹಿಸಲಾಗಿದೆ ಎಂದು ಕುರಿ ಮತ್ತು ಉಣ್ಣೆ ನಿಗಮ ಮಂಡಳಿ ಅಧ್ಯಕ್ಷ ಶರಣು ತಳ್ಳೀಕೇರಿ ತಿಳಿಸಿದರು.

ಕುರಿ ಮತ್ತು ಉಣ್ಣೆ ನಿಗಮ ಮಂಡಳಿ ಅಧ್ಯಕ್ಷ ಶರಣು ತಳ್ಳೀಕೇರಿ

ಐದು ತಳಿಗಳ ಸಮ್ಮಿಶ್ರ ತಳಿ:

ಕುಷ್ಟಗಿಯ ಹಳೇ ಪ್ರವಾಸಿ‌ ಮಂದಿರದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಇಸ್ರೇಲ್ ಮೂಲದ ಆವಾಸಿ ತಳಿ, ಪಶ್ಚಿಮ ಬಂಗಾಳದ ಗೆರೀಲಾ, ಅವಳಿ ಮರಿ ನೀಡುವ ತಳಿ, ಡೆಕ್ಕನಿ ಹೆಚ್ಚು ತೂಕ ಬರುವ ತಳಿ, ರುಚಿಕರ ಮಾಂಸದ ಬಂಡೂರಿ ಈ ಐದು ತಳಿಗಳ ಸಮ್ಮಿಶ್ರ ತಳಿಯೇ ನಾರಿ ಸುವರ್ಣದ ವಿಶೇಷತೆಯಾಗಿದೆ.

ವಿಜ್ಞಾನಿ ನಿಂಬಾಳ್ಕರ್ ಸಂಶೋಧಿಸಿದ ವಿಶೇಷ ತಳಿ:

ನಾರಿ ಎಂದರೆ ನಿಂಬಾಳ್ಕರ್ ಅಗ್ರಿಕಲ್ಚರ್ ರಿಸರ್ಚ್​ ಇನ್ಸ್​​ಟಿಟ್ಯೂಟ್ (NARI)- ಮಹಾರಾಷ್ಟ್ರ ಪುಣೆಯ ಪಲ್ಟಾನ್​ದಲ್ಲಿ ವಿಜ್ಞಾನಿ ನಿಂಬಾಳ್ಕರ್ ಸಂಶೋಧಿಸಿದ ವಿಶೇಷ ತಳಿ ಇದು. ಈ ತಳಿಯ ಸಂವರ್ಧನಾ ಕೇಂದ್ರ ಮಹಾರಾಷ್ಟ್ರ ಹೊರತು ಪಡಿಸಿದರೆ ಎರಡನೇ ಸಂವರ್ಧನಾ ಕೇಂದ್ರ ಕೊಪ್ಪಳ ಜಿಲ್ಲೆ ಎಂಬುದೇ ವಿಶೇಷ.

ಆದಾಯ ಹೆಚ್ಚಿಸಲು ಪೂರಕ:

ನಾರಿ ಸುವರ್ಣ ತಳಿ ಬಹು ಬೇಡಿಕೆಯ ಕುರಿಯಾಗಿದ್ದು, ಪ್ರತಿ ಕುರಿ 25 ಸಾವಿರ ರೂ.ವರೆಗೂ ಮಾರಾಟವಾಗಲಿದೆ. ಈ ತಳಿ ಅವಳಿ, ತ್ರಿವಳಿ ಮರಿ ಹಾಕುವುದರಿಂದ ರೈತರಿಗೆ, ಕುರಿಗಾರರಿಗೆ ಆರ್ಥಿಕ ಸ್ವಾವಲಂಬನೆಗೆ, ಆದಾಯ ಹೆಚ್ಚಿಸಲು ಪೂರಕವಾಗಲಿದೆ.

ಈ ಹಿನ್ನೆಲೆ ಮಹಾತ್ವಾಕಾಂಕ್ಷೆಯ ನಾರಿ ಸುವರ್ಣ ಸಂವರ್ಧನಾ ಕೇಂದ್ರ ಈ ಭಾಗದಲ್ಲಿ ಮಂಜೂರು ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿಯೇ ಕುಷ್ಟಗಿ ತಾಲೂಕಿನ ತುಗ್ಗಲದೋಣಿ ಗ್ರಾಮದಲ್ಲಿ 10 ಎಕರೆ ಜಮೀನು ಗುರುತಿಸಲಾಗಿದ್ದು, ಅಂತಿಮಗೊಳಿಸುವುದು ಬಾಕಿ ಇದೆ.

ಈ ಕುರಿತಾಗಿ ಕೊಪ್ಪಳ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದ್ದು, ಸದರಿ ಜಮೀನು ಹಸ್ತಾಂತರಿಸಿದ ಬಳಿಕ ಶೀಘ್ರವಾಗಿ ಕಾಮಗಾರಿ ಆರಂಭಿಸಲಿದ್ದೇವೆ. ಸದರಿ ಯೋಜನೆಗೆ ಮೊದಲ ಹಂತವಾಗಿ 1 ಕೋಟಿ ರೂ. ಮೀಸಲಿರಿಸಲಾಗಿದೆ ಎಂದರು.

ಕುರಿಗಾರರಿಗೆ "ಅನುಗ್ರಹ":

ಆಕಸ್ಮಿಕವಾಗಿ ಸಾಯುವ ಕುರಿ, ಮೇಕೆಗಳಿಗೆ ನೀಡುವ ಪರಿಹಾರ ನಿಧಿ ಅನುಗ್ರಹ ಯೋಜನೆ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಹಿಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಅವರ ಗಮನಕ್ಕೆ ತಂದಾಗ ಅವರು ಸ್ಪಂದಿಸಿ ಪುನರ್ ಚಾಲನೆ ಕಲ್ಪಿಸಿದ್ದರು. ಆದರೆ ಕೊರೊನಾ ಹಿನ್ನೆಲೆ, ರೈತರಿಗೆ ಪರಿಹಾರ ತಲುಪಿಸಲು ವಿಳಂಬವಾಗಿತ್ತು. ಬಾಕಿ ಇರುವ 39.18ಕೋಟಿ ರೂ. ಹಣವನ್ನು ನೇರವಾಗಿ ರೈತರ ಖಾತೆಗೆ ಡಿಬಿಟಿ ಮೂಲಕ ಜಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ:ಪೊಲೀಸರಿಗೆ ಸಿಹಿ ಸುದ್ದಿ: ಮೈಶುಗರ್, ದತ್ತ ಪೀಠ ಸಂಬಂಧ ಚರ್ಚಿಸಲು ಉಪ ಸಮಿತಿ ರಚನೆಗೆ ಸಂಪುಟ ಅಸ್ತು..!

ಈ ಯೋಜನೆಯಡಿ ರಾಜ್ಯದಲ್ಲಿ 30 ಸಾವಿರ ಫಲಾನುಭವಿಗಳಿದ್ದು, ಕೊಪ್ಪಳ ಜಿಲ್ಲೆಯಲ್ಲಿಯೇ 13 ಸಾವಿರ ಫಲಾನುಭವಿಗಳಿದ್ದಾರೆ. ಜನೋಪಕಾರಿ ಆಗಿರುವ ಈ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿಯವರಲ್ಲಿ ಮುಂದುವರಿಸುವ ಬಗ್ಗೆ ವಿನಂತಿಸಿದ್ದು, ಮುಂದುವರಿಸುವ ವಿಶ್ವಾಸವಿದೆ ಎಂದರು. ಇದಲ್ಲದೇ ಕಾಡು‌ಮೃಗ ದಾಳಿಯಿಂದ ಸಾಯುವ ಕುರಿಗಳಿಗೆ ಅರಣ್ಯ ಇಲಾಖೆಯಿಂದ ಹಾಗೂ ಪ್ರಕೃತಿ ವಿಪತ್ತು ಮತ್ತು ರೋಗ ರುಜಿನದಿಂದ ಸಾಯುವ ಕುರಿಗಳಿಗೆ ಪಶು ಸಂಗೋಪನೆ ಇಲಾಖೆಯಿಂದ ಪರಿಹಾರ ನೀಡುವ ಬಗ್ಗೆಯೂ ತಿಳಿಸಿದರು.

ABOUT THE AUTHOR

...view details