ಕರ್ನಾಟಕ

karnataka

ಕಾಂಗ್ರೆಸ್‌ನಲ್ಲೇ ಡಬಲ್ & ಟ್ರಬಲ್ ಇದೆ: ಸಚಿವ ಬಿ.ಶ್ರೀರಾಮುಲು ವ್ಯಾಖ್ಯಾನ ಹೀಗಿದೆ..

By

Published : Sep 26, 2021, 7:05 PM IST

ಕೊಪ್ಪಳದಲ್ಲಿ ಸಚಿವ ಬಿ. ಶ್ರೀರಾಮುಲು ಹೇಳಿಕೆ
ಕೊಪ್ಪಳದಲ್ಲಿ ಸಚಿವ ಬಿ. ಶ್ರೀರಾಮುಲು ಹೇಳಿಕೆ ()

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ಪೈಪೋಟಿ ಮಾಡುತ್ತಿರುವುದು ಡಬಲ್ ಆದ್ರೆ, ಇದರಿಂದ ಕಾಂಗ್ರೆಸ್ ಇಬ್ಭಾಗವಾಗಿರುವುದು ಟ್ರಬಲ್ ಎಂದು ಬಿ.ಶ್ರೀರಾಮುಲು ವ್ಯಾಖ್ಯಾನಿಸಿದರು‌.

ಕೊಪ್ಪಳ: ಸಚಿವ ಬಿ.ಶ್ರೀರಾಮುಲು ದಡ್ಡ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡು ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.

ಕೊಪ್ಪಳದಲ್ಲಿ ಸಚಿವ ಬಿ. ಶ್ರೀರಾಮುಲು ಹೇಳಿಕೆ

ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ದೊಡ್ಡವರು, ತುಂಬಾ ತಿಳಿದಿರುವವರು. ಅವರಿಗೆ ಮೊದಲಿನಿಂದಲೂ ನಾವು ಗೌರವ ಕೊಡುತ್ತಾ ಬಂದಿದ್ದೇವೆ. ಅವರು ಅಧಿಕಾರ ಕಳೆದುಕೊಂಡು ಹೀಗೆ ಹತಾಶರಾಗಿ ಮಾತಾಡುತ್ತಿದ್ದಾರೆ.

ಇನ್ನು ಕಾಂಗ್ರೆಸ್‌ನಲ್ಲೇ ಡಬಲ್ ಆ್ಯಂಡ್ ಟ್ರಬಲ್ ಇದೆ.‌ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ಪೈಪೋಟಿ ಮಾಡುತ್ತಿರುವುದು ಡಬಲ್. ಇದರಿಂದ ಕಾಂಗ್ರೆಸ್ ಇಬ್ಭಾಗವಾಗಿರುವುದು ಟ್ರಬಲ್ ಎಂದು ವ್ಯಾಖ್ಯಾನಿಸಿದರು‌. ಸಿದ್ದರಾಮಯ್ಯ ಅವರು ಮಾತನಾಡಿದಂತೆ ನಾವೂ ಸಹ ಮಾತನಾಡಬಹುದು. ಆದರೆ, ಅಂತಹ ಸಂಸ್ಕೃತಿ ನಮ್ಮದಲ್ಲ ಎಂದು ಹೇಳಿದರು.

ಇನ್ನು ಆರ್​ಎಸ್​​ಎಸ್ ಅ​​ನ್ನು ತಾಲಿಬಾನ್​​​ಗೆ ಹೋಲಿಕೆ ಮಾಡುವುದು ಸರಿಯಲ್ಲ. ನಮ್ಮ ದೇಶ ಅತ್ಯಂತ ಸುರಕ್ಷಿತವಾಗಿದೆ‌‌. ದೇಶದ ಬಗ್ಗೆ ಸಿದ್ದರಾಮಯ್ಯ ಹೀಗೆ ಮಾತಾಡಬಾರದು ಎಂದರು.

'ನಾಳೆ ಎಂದಿನಂತೆ ಸಾರಿಗೆ ಬಸ್​​ ಸಂಚಾರ':

ಭಾರತ್ ಬಂದ್​​ ಬಗ್ಗೆ ಮಾತನಾಡಿ, ನಾಳೆ ಎಂದಿನಂತೆ ಸಾರಿಗೆ ಸಂಸ್ಥೆಯ ಬಸ್​​ಗಳು ಸಂಚಾರ ನಡೆಸಲಿವೆ. ಬಂದ್ ಮಾಡದಂತೆ ಸರ್ಕಾರ ಸೂಚಿಸಿದೆ. ಇದು ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್‌ ಪಕ್ಷಗಳ ಪ್ರೇರಿತ ಬಂದ್ ಆಗಿದೆ. ರೈತರನ್ನು ದಿಕ್ಕು ತಪ್ಪಿಸಲು ಕಾಂಗ್ರೆಸ್ ಮುಖಂಡರು ಬಂದ್ ಬೆಂಬಲಿಸುತ್ತಿದ್ದಾರೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಾನೂನುಗಳು ಈಗಾಗಲೇ ಎರಡೂ ಮನೆಯಲ್ಲೂ ಪಾಸ್ ಆಗಿವೆ. ಕೇಂದ್ರದ ಕಾನೂನುಗಳು ರೈತ ಪರವಾಗಿವೆ. ಕಾಂಗ್ರೆಸ್ ನಾಯಕರು ಬಂದ್ ಬೆಂಬಲಿಸುವ ಮೂಲಕ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ‌‌. ರಾಜಕಾರಣಕ್ಕಾಗಿ ಬಂದ್​​ಗೆ ಕರೆ ಕೊಟ್ಟರೆ ಸಹಕರಿಸುವುದಿಲ್ಲ. ನಾಳೆ ಎಂದಿನಂತೆ ಬಸ್ ಸಂಚರಿಸಲಿವೆ‌‌. ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details