ಕರ್ನಾಟಕ

karnataka

ಕೌಟಂಬಿಕ ಕಲಹದಿಂದಲೇ ನ್ಯಾಯಾಲಯಗಳಿಗೆ ಒತ್ತಡ: ನ್ಯಾಯಾಧೀಶರ ಕಳವಳ

By

Published : Feb 8, 2023, 1:56 PM IST

Updated : Feb 8, 2023, 2:06 PM IST

ಸಮಾಜದಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ಕಲಹಗಳು- ನ್ಯಾಯಾಲಯಗಳ ಮೇಲೆ ಒತ್ತಡ - ನ್ಯಾಯಾಧೀಶರ ಕಳವಳ

Family dispute cases
ಕೌಟಂಬಿಕ ಕಲಹದಿಂದಲೇ ನ್ಯಾಯಾಲಯಗಳಿಗೆ ಒತ್ತಡ

ಗಂಗಾವತಿ(ಕೊಪ್ಪಳ): ಅಪರಾಧ ಪ್ರಕರಣಗಳಿಗಿಂತ ಅತಿಹೆಚ್ಚು ಪ್ರಕರಣಗಳು ಕೌಟಂಬಿಕ ಕಲಹದಿಂದ ದಾಖಲಾಗುತ್ತಿದ್ದು, ಇದು ನ್ಯಾಯಾಲಯಗಳಲ್ಲಿ ನೀಡಲಾಗುವ ತೀರ್ಪಿನ ವಿಳಂಬ ಹಾಗೂ ಒತ್ತಡಕ್ಕೆ ಕಾರಣವಾಗುತ್ತಿದೆ ಎಂದು ಇಲ್ಲಿನ ಜಿಲ್ಲಾ ಸತ್ರ ನ್ಯಾಯಾಧೀಶ ಎಂ.ಜಿ. ಶಿವಳ್ಳಿ ಅವರು ಕಳವಳ ವ್ಯಕ್ತಪಡಿಸಿದರು. ಇಲ್ಲಿನ ನ್ಯಾಯಾಲಯದಲ್ಲಿ ಫೆ.11ರಂದು ಹಮ್ಮಿಕೊಂಡಿರುವ ಲೋಕದಾಲತ್ ಅಂಗವಾಗಿ ಮಾತನಾಡಿದ ಅವರು, ಪತಿ-ಪತ್ನಿಯರ ಜಗಳ, ಕೌಟಂಬಿಕ ಕಲಹ, ಆಸ್ತಿ ವ್ಯಾಜ್ಯದಂತ ಪ್ರಕರಣಗಳೇ ಹೆಚ್ಚಾಗುತ್ತಿವೆ. ಒಂದು ಕಡೆ ನ್ಯಾಯಾಲಗಳ ಮತ್ತು ನ್ಯಾಯಾಧೀಶರ ಕೊರತೆ ಇದೆ.
ಮತ್ತೊಂದು ಕಡೆ ದಿನದಂದಿ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕುಟುಂಬದ ಹಿರಿಯರು, ಗ್ರಾಮದ ಹಿರಿಯರು ಮನಸು ಮಾಡಿದರೆ ಕೌಟಿಂಬಿಕ, ಗಂಡ-ಹೆಂಡತಿಯರ ಜಗಳವನ್ನು ಸ್ಥಳೀಯದಲ್ಲಿಯೇ ಇತ್ಯರ್ಥ ಮಾಡಬಹುದು. ಆದರೆ ಅವು ಕೋರ್ಟ್​ ಹಂತದವರೆಗೂ ಬರುತ್ತಿವೆ. ಹೀಗಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ತೀರ್ಪಿನ ಪ್ರಮಾಣ ವಿಳಂಬವಾಗುತ್ತಿದೆ. ಇದೇ ಕಾರಣಕ್ಕೆ ಕಾನೂನು ವ್ಯಾಪ್ತಿಯಲ್ಲಿ ರಾಜೀ ಮಾಡಬಹುದಾದ ಪ್ರಕರಣಗಳಿಗೆ ಎರಡು ಕಕ್ಷಿದಾರರ ಸಮ್ಮತಿ ಮೇರೆಗೆ ಲೋಕ ಅದಾಲತ್​ನಲ್ಲಿ ಪ್ರಕರಣ ರಾಜೀ ಸಂಧಾನದ ಮೂಲಕ ಇತ್ಯರ್ಥಕ್ಕೆ ಯತ್ನಿಸಲಾಗುತ್ತಿದೆ. ಇದರಿಂದ ನ್ಯಾಯಾಲಯಗಳಿಗೆ ಪ್ರಕರಣಗಳ ಹೊರೆ ಕೊಂಚ ತಗ್ಗಬಹುದು ಎಂದು ಅಭಿಪ್ರಾಯಪಟ್ಟರು.

ಕೌಟಂಬಿಕ ಕಲಹದಿಂದಲೇ ನ್ಯಾಯಾಲಯಗಳಿಗೆ ಒತ್ತಡ: ನ್ಯಾಯಾಧೀಶರ ಕಳವಳ

ಕಾನೂನು ತಿಳುವಳಿಕೆ ಕೊರತೆ: ನಗರ ಪ್ರದೇಶದಲ್ಲಿ ವಿದ್ಯಾವಂತರ ಪ್ರಮಾಣ ಹೆಚ್ಚಿದ್ದು, ಕಾನೂನು ತಿಳುವಳಿಕೆ ಇರುತ್ತದೆ. ಗ್ರಾಮೀಣ ಭಾಗದಲ್ಲಿ ಅನಕ್ಷರತೆಯ ಪ್ರಮಾಣ ಹೆಚ್ಚಿರುವ ಕಾರಣಕ್ಕೆ ಸಣ್ಣ-ಪುಟ್ಟ ಪ್ರಕರಣಗಳಿಗೂ ಕೋರ್ಟ್​, ಕಚೇರಿ ಎಂದು ಅಲೆಯುವ ಸ್ಥಿತಿ ನಿರ್ಮಾಣವಾಗಿರುತ್ತದೆ. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಭಾರಿ ಪ್ರಮಾಣದ ದಂಡ ಹಾಕಲಾಗಿತ್ತು. ಶೇ.50ರಷ್ಟು ರಿಯಾಯಿತಿ ನೀಡಿದ್ದಕ್ಕೆ ದೊಡ್ಡ ಪ್ರಮಾಣದಲ್ಲಿ ವಾಹನ ಮಾಲೀಕರು ದಂಡ ಪಾವತಿಸಿದ್ದಾರೆ. ಹಾಗೆ ಲೋಕ ಅದಾಲತ್ ಮೂಲಕ ಪ್ರಕರಣಗಳ ರಾಜೀ ವಿಲೇವಾರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.

ಸಮುದಾಯ ಸಹಭಾಗಿತ್ವದಲ್ಲಿ ಅಥವಾ ಅವರಲ್ಲಿಯೇ ಇತ್ಯರ್ಥವಾಗಬೇಕಿದ್ದ ಪ್ರಕರಣಗಳು ಕೂಡ ನ್ಯಾಯಾಲಯಕ್ಕೆ ಬರುತ್ತಿವೆ. ಪಿತ್ರಾರ್ಜಿತ ಆಸ್ತಿಯಲ್ಲಿ ಕುಟುಂಬದ ಎಲ್ಲಾ ಮಕ್ಕಳಿಗೆ ಹಕ್ಕಿರುತ್ತದೆ. ಆದರೆ ಇದೇ ಆಸ್ತಿ ವಿಭಜನೆಯಲ್ಲಿ ವ್ಯಾಜ್ಯಗಳು ಕೋರ್ಟ್​ಗೆ ಬರುತ್ತಿವೆ. ಕೌಟಂಬಿಕ ಭಿನ್ನಾಭಿಪ್ರಾಯಗಳು ನ್ಯಾಯಾಲಯ ಪ್ರವೇಶಿಸುತ್ತಿವೆ ಎಂದು ನ್ಯಾಯಾಧೀಶರು ಹೇಳಿದರು.

ನ್ಯಾಯಾಲಯ, ನ್ಯಾಯಾಧೀಶರ ಕೊರತೆ: ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣಕ್ಕೆ ನ್ಯಾಯಾಂಗದ ವ್ಯವಸ್ಥೆಯಲ್ಲಿ ಒತ್ತಡಕ್ಕೆ ಕಾರಣವಾಗುತ್ತಿದೆ. ಪ್ರಕರಣಗಳಿಗೆ ತಕ್ಕಷ್ಟು ನ್ಯಾಯಾಲಯ, ನ್ಯಾಯಾಧೀಶರು ಇಲ್ಲದಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ. ಒಬ್ಬೊಬ್ಬ ನ್ಯಾಯಾಧೀಶರು ಎರಡೆರಡು ನ್ಯಾಯಾಲಯಗಳಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಹೀಗಾಗಿ ವಕೀಲರ ಸಹಕಾರದಿಂದ ಲೋಕ ಅದಾಲತ್ ಮೂಲಕ ಸಾಧ್ಯವಾದಷ್ಟು ಪ್ರಕರಣಗಳನ್ನು ಇತ್ಯರ್ಥ ಮಾಡುವ ಗುರಿ ಇದೆ ಎಂದು ಅವರು ತಿಳಿಸಿದರು.

7846 ಪ್ರಕರಣ ಬಾಕಿ: ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ನ್ಯಾಯಾಧೀಶ ರಮೇಶ ಎಸ್. ಗಾಣಿಗೇರ ಮಾತನಾಡಿ, ಗಂಗಾವತಿಯ ನಾಲ್ಕು ನ್ಯಾಯಾಲಯಗಳಲ್ಲಿ ಒಟ್ಟು 7846 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಈ ಬಾರಿಯ ಲೋಕ ಅದಾಲತ್​ನಲ್ಲಿ 917 ಪ್ರಕರಣ ಇತ್ಯರ್ಥದ ಗುರಿ ಇಟ್ಟುಕೊಳ್ಳಲಾಗಿದೆ. ವಕೀಲರ ಸಹಕಾರ ಮತ್ತು ಕಕ್ಷಿದಾರರ ಪರಸ್ಪರ ಸಹಮತದ ಮೆರೆಗೆ ಪ್ರಕರಣಗಳನ್ನು ರಾಜೀ ಸಂಧಾನ ಮಾಡಲಾಗುವುದು. ಇದರಲ್ಲಿ ಮೋಟಾರ್ ಕಾಯ್ದೆ, ಚೆಕ್ ಬೌನ್ಸ್, ಬ್ಯಾಂಕಿನ ಹಣಕಾಸಿನ ಪ್ರಕರಣಗಳು ಇರುತ್ತವೆ ಎಂದರು.

ಮತ್ತೊಬ್ಬ ನ್ಯಾಯಾಧೀಶೆ ಶ್ರೀದೇವಿ ಮಾತನಾಡಿ, ನ್ಯಾಯಾಲಯದಲ್ಲಿ ವ್ಯಕ್ತವಾಗುವ ತೀರ್ಪಿನಲ್ಲಿ ಒಬ್ಬರಿಗೆ ಗೆಲುವು ಮತ್ತೊಬ್ಬರಿಗೆ ಸೋಲಾಗುತ್ತದೆ. ಆದರೆ ಲೋಕ ಅದಾಲತ್​ನಲ್ಲಿ ಎರಡು ಪಕ್ಷದ ಕಕ್ಷಿದಾರರಿಗೆ ಗೆಲುವು ಉಂಟಾಗಲಿದೆ ಎಂದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ರಮೇಶ ಎಸ್. ಗಾಣಿಗೇರ, ಗೌರಮ್ಮ, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಕಾರ್ಯದರ್ಶಿ ಮಂಜುನಾಥ ಎಚ್.ಎಂ. ಇದ್ದರು.

ಇದನ್ನೂ ಓದಿ.. ರಸ್ತೆಯಲ್ಲಿ ಹಾಕಿದ್ದ ಬಿಜೆಪಿ ಮುಖಂಡ ಪತಿಯ ಬ್ಯಾನರ್ ಹರಿದು ಪತ್ನಿ ಆಕ್ರೋಶ

Last Updated : Feb 8, 2023, 2:06 PM IST

ABOUT THE AUTHOR

...view details