ಕರ್ನಾಟಕ

karnataka

ಕೊಪ್ಪಳ: ಹಂಪಿ ನೋಡ ಬಂದ ಫ್ರಾನ್ಸ್ ಪ್ರವಾಸಿಗ ಬೈಕ್ ಅಪಘಾತದಲ್ಲಿ ಸಾವು

By ETV Bharat Karnataka Team

Published : Oct 30, 2023, 10:30 PM IST

ಕೊಪ್ಪಳದಲ್ಲಿ ಬೈಕ್ ಸ್ಕಿಡ್ ಆಗಿ ಫ್ರಾನ್ಸ್ ಪ್ರವಾಸಿಗ ಮೋನ್ಸಲರ್ ಎಂಬಾತ ಸಾವನ್ನಪ್ಪಿದ್ದಾರೆ.

v
ಫ್ರಾನ್ಸ್ ಪ್ರವಾಸಿಗ

ಕೊಪ್ಪಳ:ಬೈಕ್ ಸ್ಕಿಡ್ ಆಗಿ ಫ್ರಾನ್ಸ್ ಪ್ರವಾಸಿಗ ಮೋನ್ಸಲರ್ (63) ಎಂಬವರು ಸಾವನ್ನಪ್ಪಿದ ಘಟನೆ ಕೊಪ್ಪಳ ತಾಲೂಕಿನ ಬಸಾಪೂರದ ಬಳಿ ಸೋಮವಾರ ನಡೆದಿದೆ. ಐವರು ಸ್ನೇಹಿತರೊಂದಿಗೆ ಅಕ್ಟೋಬರ್ 26ರಂದು ಹಂಪಿ ನೋಡಲೆಂದು ಇವರು ಬಂದಿದ್ದರು. ಸ್ನೇಹಿತರೊಂದಿಗೆ ಹಂಪಿಯಿಂದ ಗೋವಾಕ್ಕೆ ತೆರಳುತ್ತಿದ್ದಾಗ ಬಸಾಪೂರದ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ದುರ್ಘಟನೆ ಸಂಭವಿಸಿದೆ.

ಕೂಡಲೇ ಸ್ಥಳಿಯರು ಮೋನ್ಸಲರ್​ ಅವರನ್ನು ಕೊಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ‌ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಸಿಡಿಲು ಬಡಿದು 3 ಗಾರೆ ಕೆಲಸಗಾರರಿಗೆ ಗಾಯ

ರಾಜ್ಯದ ಇತರೆ ಘಟನೆಗಳು: ಚಾಮರಾಜನಗರದಲ್ಲಿ ಸಿಡಿಲು ಬಡಿದು ಕೆಲಸಗಾರರಿಗೆ ಗಾಯ:ಗಾರೆ ಕೆಲಸ ಮಾಡಿ ಗ್ರಾಮಕ್ಕೆ ತೆರಳುತ್ತಿದ್ದಾಗ ಸಿಡಿಲು ಹೊಡೆದ ಪರಿಣಾಮ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಹನೂರಿನ ತಾಲೂಕಿನ‌ ಚಿಂಚಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಗುರು ( 33) ಮಂಜು (33) ಗುರುಸ್ವಾಮಿ (44) ಗಾಯಾಳುಗಳಾಗಿದ್ದಾರೆ. ಚಿಂಚಳ್ಳಿ ಗ್ರಾಮದ ಜಮೀನೊಂದರಲ್ಲಿ ಕೆಲಸ ಮುಗಿಸಿ ಸೋಮವಾರ ಸಂಜೆ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಮಳೆ ಬಂದಿದೆ. ಈ ಸಂದರ್ಭದಲ್ಲಿ ಮಣಗಳ್ಳಿ ಸರ್ಕಾರಿ ಪ್ರೌಢಶಾಲೆ ಸಮೀಪದ ಮರದ ಕೆಳಗೆ ನಿಂತಿದ್ದರು.

ಸ್ಥಳೀಯರು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗುರು ಎನ್ನುವವರ ಕಾಲು, ಬೆರಳುಗಳಿಗೆ ಗಾಯಗಳಾಗಿದೆ. ಇನ್ನುಳಿದ ಇಬ್ಬರಿಗೆ ಶಾಕ್ ಆಗಿದ್ದು ಯಾವುದೇ ಗಂಭೀರ ಗಾಯಗಳಾಗಿಲ್ಲ. ಒಂದು ದಿನ ಚಿಕಿತ್ಸೆ ನೀಡಿದ ನಂತರ ಡಿಸ್ಚಾರ್ಜ್ ಮಾಡಲಾಗುವುದು ಎಂದು ಹೋಲಿ ಕ್ರಾಸ್ ವೈದ್ಯಾಧಿಕಾರಿ ಡಾ.ಭಾರ್ಗವಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ

ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ:ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಅಪಾರ ಪ್ರಮಾಣದ ಪೆಟ್ರೋಲ್ ನಷ್ಟವಾದ ಘಟನೆ ಹುಬ್ಬಳ್ಳಿಯ ಹೊರವಲಯದ ತಾರಿಹಾಳ ಬೈಪಾಸ್‌ನಲ್ಲಿ ನಡೆದಿದೆ. ಹುಬ್ಬಳ್ಳಿಯಿಂದ ದಾವಣಗೆರೆಗೆ ಹೋಗುತ್ತಿದ್ದ ಟ್ಯಾಂಕರ್​ ಚಾಲಕನ ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಗೆ ಬಿದ್ದಿದೆ.‌ ಟ್ಯಾಂಕರ್ ಪಲ್ಟಿ ಹೊಡೆದು ಪೆಟ್ರೋಲ್ ರಸ್ತೆಯುದ್ದಕ್ಕೂ ಸೋರಿದ್ದರಿಂದ ಕೆಲ ಕಾಲ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿತ್ತು. ಮುಂಜಾಗೃತಾ ಕ್ರಮವಾಗಿ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ತೆರವುಗೊಳಿಸುವ ಕಾರ್ಯ ನಡೆಸಿದರು. ಯಾವುದೇ ಬೆಂಕಿ ಅನಾಹುತ ಸಂಭವಿಸಿಲ್ಲ.‌

ಇದನ್ನೂ ಓದಿ:ಮಂಗಳೂರು: ನೇತ್ರಾವತಿ ನದಿಗೆ ಹಾರಿ ಚಿಕ್ಕಮಗಳೂರು ಮೂಲದ ವ್ಯಕ್ತಿ ಆತ್ಮಹತ್ಯೆ

ABOUT THE AUTHOR

...view details