ಕರ್ನಾಟಕ

karnataka

ಕೋಲಾರದಲ್ಲಿ ವ್ಯಕ್ತಿ ಆತ್ಮಹತ್ಯೆ: ಜಾತಿನಿಂದನೆ ಆರೋಪ, ಪ್ರಕರಣ ದಾಖಲು

By ETV Bharat Karnataka Team

Published : Sep 21, 2023, 12:36 PM IST

ಜಾತಿ ನಿಂದನೆಯಿಂದ ನೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪದಡಿ ಕೋಲಾರದಲ್ಲಿ ದೂರು ದಾಖಲಾಗಿದೆ.

ಆತ್ಮಹತ್ಯೆ
ಆತ್ಮಹತ್ಯೆ

ಕೋಲಾರ:ಪೊರಕೆಯಿಂದ ಥಳಿಸಿ ಜಾತಿ ನಿಂದನೆ ಮಾಡಿರುವ ಆರೋಪದಡಿ ವ್ಯಕ್ತಿಯೊಬ್ಬರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರಲಾದ ಘಟನೆ ಕೋಲಾರದಲ್ಲಿ‌ ಜರುಗಿದೆ. ಮಾಲೂರು ತಾಲೂಕಿನ ಹುರುಳಗೆರೆ ಗ್ರಾಮದಲ್ಲಿ ಘಟ‌ನೆ ನಡೆದಿದ್ದು, ಶ್ರೀನಿವಾಸ್ (30) ಎಂಬವರು ಸಾವನ್ನಪ್ಪಿದ್ದಾರೆ.

ಗ್ರಾಮದ ನಿವಾಸಿಗಳಾದ ಅಶೋಕ್, ರಮೇಶ್, ಧರ್ಮೇಂದ್ರ ಹಾಗೂ ಮಂಜು ಎಂಬವರು ಬುಧವಾರ ಸಂಜೆ ಶ್ರೀನಿವಾಸ್‌ಗೆ ಮನಬಂದಂತೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೇ ಜಾತಿ ನಿಂದನೆಯನ್ನೂ ಮಾಡಿದ್ದಾರೆ. ಇದರಿಂದ ತೀವ್ರವಾಗಿ ಮನನೊಂದ ಶ್ರೀನಿವಾಸ್ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ಮೃತನ ಪತ್ನಿ ಮತ್ತು ಕುಟುಂಬಸ್ಥರು ಹಲ್ಲೆ ನಡೆಸಿದವರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆಗಟ್ಟುವಿಕೆ) ಕಾಯಿದೆ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಮಾಲೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಡೆತ್‌ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ:ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಡೆತ್‌ನೋಟ್​ ಬರೆದಿಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದೆ. ತಲಘಟ್ಟಪುರದ ನಾಗರಾಜ್ (47) ಮೃತರು. ಘಟನಾ ಸ್ಥಳಕ್ಕೆ ತಲಘಟ್ಟಪುರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸನಾವುಲ್ಲಾ ಎಂಬಾತನ ಒಡೆತನದಲ್ಲಿರುವ ಕಂಪೆನಿಯಲ್ಲಿ ನಾಗರಾಜ್ ಕೆಲಸ ಮಾಡುತ್ತಿದ್ದರು. ಈ ಕಂಪೆನಿಯ ಹೆಸರಿನಲ್ಲಿ ಹಣ ಪಡೆದು ವಂಚಿಸಿರುವುದಾಗಿ ನಟರಾಜ್ ಎಂಬವರು ವೈಯಾಲಿಕಾವಲ್ ಠಾಣೆಗೆ ಇತ್ತೀಚೆಗೆ ದೂರು ನೀಡಿದ್ದರು.

ಪ್ರಕರಣ ಸಂಬಂಧ ಕಂಪನಿ ಮಾಲೀಕ ಸನಾವುಲ್ಲಾ ಬದಲಾಗಿ ನಾಗರಾಜ್ ಅವರನ್ನು ಪೊಲೀಸರು ಕರೆದೊಯ್ದು ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಇದರಿಂದ ಮನನೊಂದು ನಾಗರಾಜ್ ಎರಡು ಪುಟಗಳ ಡೆತ್‌ನೋಟ್ ಬರೆದು ಬುಧವಾರ ಮಧ್ಯಾಹ್ನ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಡೆತ್‌ನೋಟ್ ಪತ್ತೆಯಾಗಿದೆ. ಡೆತ್‌ನೋಟ್​​ನಲ್ಲಿ ವೈಯಾಲಿಕಾವಲ್ ಠಾಣೆಯ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಲ್ಲದೇ, ಠಾಣೆಯ ಪೊಲೀಸ್ ಅಧಿಕಾರಿಗಳ ಹೆಸರನ್ನು ನಾಗರಾಜ್ ಬರೆದಿದ್ದಾರೆ.

ಸಾಲಬಾಧೆ ತಾಳಲಾರದೇ ದಂಪತಿ ಆತ್ಮಹತ್ಯೆ:ಬಳ್ಳಾರಿ ನಗರದ ಬಂಡಿಹಟ್ಟಿಯಲ್ಲಿ ಸೆ.10ರಂದು ಸಾಲಬಾಧೆ ತಾಳಲಾರದೇ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿತ್ತು. ಈರಣ್ಣ(28), ಪತ್ನಿ ದುರ್ಗಮ್ಮ(25) ಆತ್ಮಹತ್ಯೆ ಮಾಡಿಕೊಂಡಿದ್ದು 16 ತಿಂಗಳ ಮಗು ಅನಾಥವಾಗಿದೆ. ಕುಡಿತದ ಚಟಕ್ಕೆ ದಾಸನಾಗಿದ್ದ ಈರಣ್ಣ ಮೈ ತುಂಬಾ ಸಾಲ ಮಾಡಿಕೊಂಡಿದ್ದ. ಪತ್ನಿ ದುರ್ಗಮ್ಮ ಕೆಲಸಕ್ಕೆ ಹೋಗಿ ಕುಟುಂಬವನ್ನು ಸಾಕುತ್ತಿದ್ದಳು. ಅಲ್ಲದೆ ಈರಣ್ಣ ಕುಡಿಯಲು ಪತ್ನಿ ದುರ್ಗಮ್ಮ ಬಳಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ಈರಣ್ಣನು ಹೆಂಡತಿ ದುಡಿದ ಹಣ ಕಿತ್ತುಕೊಂಡು ಮದ್ಯ ಸೇವನೆ ಮಾಡುತ್ತಿದ್ದನು. ಅಲ್ಲದೆ ಹಣ ನೀಡದಾಗ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದನಂತೆ.ಇವೆಲ್ಲದರಿಂದ ಬೇಸತ್ತು ದುರ್ಗಮ್ಮ ಮನೆಯಲ್ಲಿ ಸಾವಿಗೆ ಶರಣಾಗಿದ್ದಳು. ಕುಡಿತದ ಕಿರುಕುಳದಿಂದಲೇ ಪತ್ನಿ ಸಾವಿಗೀಡಾಗಿದ್ದಾಳೆ ಎಂಬ ಆರೋಪ ತನ್ನ ಮೇಲೆ ಬರಬಹುದು ಎಂದು ಹೆದರಿದ ಪತಿ ಈರಣ್ಣ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ.

ಇದನ್ನೂ ಓದಿ:ಪೊಲೀಸರ ಕಿರುಕುಳ ಆರೋಪ: ಬೆಂಗಳೂರಲ್ಲಿ ಓರ್ವ ಆತ್ಮಹತ್ಯೆ

ABOUT THE AUTHOR

...view details