ಕರ್ನಾಟಕ

karnataka

ಸಮಸ್ಯೆಗಳ ಆಗರವಾದ ಮಡಿಕೇರಿಯ ಖಾಸಗಿ ಬಸ್​ ನಿಲ್ದಾಣ: ಶಾಶ್ವತ ಪರಿಹಾರಕ್ಕೆ ಬೇಕಿದೆ ಇಚ್ಛಾ‌ಶಕ್ತಿ

By

Published : Dec 23, 2020, 8:44 PM IST

ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಲಾಗಿರುವ ಮಡಿಕೇರಿಯ ಖಾಸಗಿ ಬಸ್​ ನಿಲ್ದಾಣದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಪ್ರಯಾಣಿಕರು, ಚಾಲಕರು ಸಮಸ್ಯೆ ಎದುರಿಸುತ್ತಿದ್ದು, ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.

Several problems at Madikeri private bus stand
ಮಡಿಕೇರಿ ಬಸ್​ ನಿಲ್ದಾಣಲ್ಲಿ ಮೂಲ ಸೌಕರ್ಯ ಕೊರತೆ

ಮಡಿಕೇರಿ: ಅಂದಾಜು 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನಗರದ ಖಾಸಗಿ ಬಸ್​ ನಿಲ್ದಾಣ ಸೂಕ್ತ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯ‌ ಆಗರವಾಗಿದ್ದು, ಈ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಸ್​ ನಿಲ್ದಾಣದ ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು, ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಅಲ್ಲದೆ, ಸ್ವಚ್ಛ ಭಾರತ್ ಅಭಿಯಾನ ಕೂಡ ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ. ಬಸ್ ನಿಲ್ದಾಣದ ಶೌಚಾಲಯ ನೀರಿನ ಕೊರತೆಯಿಂದ ಗಬ್ಬೆದ್ದು ನಾರುತ್ತಿದ್ದು, ನೀರಿನ ಪೈಪ್‌ಗಳು ಮತ್ತು ವಿದ್ಯುತ್ ದೀಪಗಳು ಕಿಡಿಗೇಡಿಗಳ ಕುಚೇಷ್ಟೆಗೆ ಬಲಿಯಾಗಿವೆ. ಇಷ್ಟಾದರೂ ನಗರಸಭೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ಹಲವು ಸಂಘ ಸಂಸ್ಥೆಗಳು ಪ್ರತಿಭಟಿಸಿ‌ ಅವೈಜ್ಞಾನಿಕ ಕಾಮಗಾರಿ ಮತ್ತು ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದ್ದವು. ಆದರೂ ಇಲ್ಲಿಯವರೆಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇತ್ತ ಕಡೆ ತಿರುಗಿ ನೋಡಿಲ್ಲ. ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಇಲ್ಲಿನ ಮುಖ್ಯ ಸಮಸ್ಯೆಯಾಗಿದ್ದು, ಪ್ರಯಾಣಿಕರು ಮತ್ತು ಬಸ್​ ಚಾಲಕರು ಪರದಾಡುವಂತಾಗಿದೆ. ಇದರ ಜೊತೆಗೆ ನಿಲ್ದಾಣದ ಕಾಂಕ್ರೀಟ್​ ಕಿತ್ತು ಹೋಗಿದ್ದು, ಬಸ್​ಗಳು ಓಡಾಡುವಾಗ ಧೂಳಿನಿಂದ ಆವರಿಸುತ್ತದೆ. ಇದು ಬೇಸಿಗೆ ಕಾಲದ ಸಮಸ್ಯೆಯಾದರೆ, ಇನ್ನು ಮಳೆಗಾಲದಲ್ಲಿ ಮಳೆ ನೀರು ಬಸ್ ನಿಲ್ದಾಣದ ಒಳಗೆ ತುಂಬಿ ಮತ್ತೊಂದು ರೀತಿಯ ಸಮಸ್ಯೆ ಸೃಷ್ಟಿಯಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ನಗರ‌ಸಭೆ ಆಯುಕ್ತ ರಾಮದಾಸ್​, ಧೂಳು, ಕುಡಿಯುವ ನೀರಿನ ಸಮಸ್ಯೆ, ಸಾರ್ವಜನಿಕ ಶೌಚಾಲಯದ ಸಮಸ್ಯೆ ಹಾಗೂ ಮಳೆಗಾಲದಲ್ಲಿ ನೀರು ನಿಲ್ದಾಣದೊಳಗೆ ಬರುವುದು ಸೇರಿದಂತೆ ಸಾಕಷ್ಟು ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿವೆ. ಕೊರೊನಾ ಕಾರಣದಿಂದ ಕೆಲಸಕ್ಕೆ ಕಾರ್ಮಿಕರ ಕೊರತೆ ಎದುರಾಗಿತ್ತು. ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ಶೀಘ್ರದಲ್ಲಿಯೇ ಬಗೆಹರಿಸುತ್ತೇವೆ.‌ ಅಲ್ಲದೆ ಮಳಿಗೆಗಳನ್ನು ಶೀಘ್ರದಲ್ಲಿಯೇ ತೆರೆಯಲು ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ.‌

TAGGED:

ABOUT THE AUTHOR

...view details