ಕರ್ನಾಟಕ

karnataka

ನಿಜಾಮರ ದೌರ್ಜನ್ಯದ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆ

By ETV Bharat Karnataka Team

Published : Sep 17, 2023, 10:29 AM IST

Updated : Sep 17, 2023, 11:10 AM IST

ಅಸಂಖ್ಯಾತ ಹೋರಾಟಗಾರರ ನಿರಂತರ ಚಳುವಳಿ ಮತ್ತು ಬಲಿದಾನದಿಂದಾಗಿ ಹೈದರಾಬಾದ್​ ಕರ್ನಾಟಕ ನಿಜಾಮರ ಕಪಿಮುಷ್ಠಿಯಿಂದ ವಿಮೋಚನೆಗೊಂಡಿತು. ಈ ದಿನವನ್ನು ಹೈದರಾಬಾದ್​ ಕರ್ನಾಟಕ ವಿಮೋಚನಾ ದಿನವೆಂದು ಪ್ರತಿವರ್ಷ ಆಚರಿಸಲಾಗುತ್ತಿದೆ.

Sept 17  hyderabad-karnataka-liberataion-day
ಹೈದರಾಬಾದ್​ ಕರ್ನಾಟಕ ವಿಮೋಚನಾ ದಿನ : ನಿಜಾಮರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ಸ್ವಾತಂತ್ರ್ಯ ಸೇನಾನಿಗಳು

ಹೈದರಾಬಾದ್​ ಕರ್ನಾಟಕ ವಿಮೋಚನಾ ದಿನ

ಕಲಬುರಗಿ :ಭಾರತದ ಕೆಚ್ಚೆದೆಯ ಧೀರರ ಹೋರಾಟ, ತ್ಯಾಗ, ಬಲಿದಾನದ ಫಲವಾಗಿ 1947ನೇ ಆಗಸ್ಟ್ 15ರಂದು ಬ್ರಿಟಿಷರ ಕಪಿಮುಷ್ಠಿಯಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು. ಅಂದು ಇಡೀ ದೇಶವೇ ಸಂಭ್ರಮದಲ್ಲಿ ಮುಳುಗಿತ್ತು. ಆದರೆ ಅಂದಿನ ಹೈದರಾಬಾದ್​​ ಕರ್ನಾಟಕ ಇಂದಿನ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಾತ್ರ ಸಂಭ್ರಮ ಕಾಣಲಿಲ್ಲ. ಹೈದರಾಬಾದ್ ನಿಜಾಮರ ಆಳ್ವಿಕೆಯೇ ಇದಕ್ಕೆ ಕಾರಣ.

ಹೈದರಾಬಾದ್​ ನಿಜಾಮ ಸಂಸ್ಥಾನದ ಅರಸ ಭಾರತದ ಒಕ್ಕೂಟ ಸೇರಲು ಒಪ್ಪದೇ ಇದ್ದಾಗ ಮತ್ತೊಂದು ಮಹಾ ಚಳುವಳಿಯೇ ನಡೆಯಬೇಕಾಯಿತು. ಸಾಕಷ್ಟು ಹೋರಾಟಗಳು, ಹಲವು ಬಲಿದಾನದ ಬಳಿಕ ಒಂದು ವರ್ಷ ಒಂದು ತಿಂಗಳು ಎರಡು ದಿನ ತಡವಾಗಿ, 1948 ಸೆ.17 ರಂದು ಈ ಪ್ರಾಂತ್ಯಕ್ಕೆ ಸ್ವಾತಂತ್ರ್ಯ ಲಭಿಸಿತು.

ರಜಾಕರ ದೌರ್ಜನ್ಯ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೀದರ್​, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಸೇರಿ ಒಟ್ಟು 7 ಜಿಲ್ಲೆಗಳಿವೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಅನೇಕ ರಾಜರು ತಮ್ಮ ರಾಜ್ಯವನ್ನು ಭಾರತದ ಒಕ್ಕೂಟಕ್ಕೆ ಒಪ್ಪಿಸಿದರು. ಆದರೆ ಇಲ್ಲಿ ರಾಜ್ಯಭಾರ ನಡೆಸುತ್ತಿದ್ದ ​ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಒಕ್ಕೂಟದಿಂದ ದೂರ ಉಳಿದು ಸ್ವತಂತ್ರ ಆಡಳಿತ ನಡೆಸಲು ತೀರ್ಮಾನಿಸಿದ್ದ. ಆದರೆ ರಾಜನ ನಿರ್ಧಾರ ಇಲ್ಲಿನ ಜನರನ್ನು ಕೆರಳಿಸಿತ್ತು. ಒಕ್ಕೂಟದಲ್ಲಿ ಸೇರಿಸಬೇಕೆಂಬ ಬಹುಸಂಖ್ಯಾತರ ಕೂಗು ಪ್ರತಿಧ್ವನಿಸಿತು. ಇದಕ್ಕಾಗಿ ಹೋರಾಟಗಳು ಆರಂಭಗೊಂಡವು. ಆದರೂ ಮಣಿಯದ ಮೀರ್ ಉಸ್ಮಾನ್​ ಅಲಿ, ಹೋರಾಟವನ್ನು ಬಗ್ಗು ಬಡಿಯಲು ರಜಾಕರ ಖಾಸಗಿ ಸೈನಿಕ ಪಡೆಯನ್ನು ಸಜ್ಜುಗೊಳಿಸಿದ. ರಜಾಕರ ಪಡೆಯ ನೇತೃತ್ವವನ್ನು ತನ್ನ ಸಂಬಂಧಿಯಾದ ಖಾಸಿಂ ರಜ್ವಿ ಎಂಬ ಮತಾಂಧನ ಕೈಗೆ ಒಪ್ಪಿಸುತ್ತಾನೆ. ಮೀರ್ ಉಸ್ಮಾನ್ ಅಲಿಗೆ ದೆಹಲಿಯ ಕೆಂಪು ಕೋಟೆಯಲ್ಲಿ ಭಾವುಟ ಹಾರಿಸುವ ಆಸೆ ಹುಟ್ಟಿಸಿದ ಖಾಸಿಂ ರಜ್ವಿ ರಾಜನನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಹೋರಾಟಗಾರರ ಮೇಲೆ ತನಗೆ ಬೇಕಾದಂತೆ ದೌರ್ಜನ್ಯ ನಡೆಸುತ್ತಾನೆ.

1947ರ ಜುಲೈನಲ್ಲಿ ಸಾರ್ವಜನಿಕ ಬಂಧನ ಆದೇಶ ಹೊರಡಿಸಿ 3 ಸಾವಿರಕ್ಕೂ ಹೆಚ್ಚು ಸ್ವಾತಂತ್ರ್ಯ ಸೇನಾನಿಗಳನ್ನು ಬಂಧಿಸಲಾಗುತ್ತದೆ. ಎಲ್ಲಾ ಜೈಲುಗಳು ತುಂಬಿ ಹೋಗುತ್ತವೆ. ರಾಜನ ತಪ್ಪು ನಿರ್ಧಾರದಿಂದ ರೊಚ್ಚಿಗೆದ್ದ ಕೆಚ್ಚೆದೆಯ ವೀರರು ದಂಗೆ ಏಳುತ್ತಾರೆ. ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ರಜಾಕರ ವಿರುದ್ದ ಚಳುವಳಿಗಳು ನಡೆಯುತ್ತವೆ. ಸಾಕಷ್ಟು ಬಾರಿ ಬಂಧನಕ್ಕೊಳಗಾಗಿ ರಜಾಕರಿಂದ ಚಿತ್ರಹಿಂಸೆಯಾದರೂ ಕೂಡಾ ಹೋರಾಟ ಮಾತ್ರ ಕೈಬಿಡಲಿಲ್ಲ.

ಸಾಮೂಹಿಕ ಹತ್ಯಾಕಾಂಡ: 1948 ಮೇ 9 ರಂದು ಬೀದರ್​ ಜಿಲ್ಲೆಯ ಗೋರ್ಟಾದಲ್ಲಿ ಸ್ವಾತಂತ್ರ್ಯ ಸೇನಾನಿಗಳ ಸಾಮೂಹಿಕ ಹತ್ಯಾಕಾಂಡ ನಡೆಯುತ್ತದೆ. ಗೋರ್ಟಾ ಗ್ರಾಮ ದೇಶಾಭಿಮಾನಿಗಳಿಂದ ತುಂಬು ತುಳುಕುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಬಾವುರಾವ್ ಪಾಟೀಲ ಹಾಗೂ ವಿಠೋಬಾ ನಿರೋಡೆ ಎಂಬವರು ಗೋರ್ಟಾದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದರು. ರಜಾಕರ ಮುಖಂಡನೊಬ್ಬ ಕೆರಳಿ ಬಾವುರಾವ್ ಪಾಟೀಲರಿಗೆ ಅವಮಾನ ಮಾಡಿದ್ದ. ಪಾಟೀಲರ ಮನೆಯನ್ನು ಲೂಟಿ ಮಾಡಿಸಿದ್ದ. ಇದರಿಂದ ಆಕ್ರೋಶಗೊಂಡ ಪಾಟೀಲರು, ರಜಾಕರ ಪಡೆಯ ಮುಖಂಡ ಇಸಾಮುದ್ದೀನ್ ಎಂಬಾತನನ್ನು ಕೊಂದು ಹಾಕಿದ್ದರು. ಇಸಾಮುದ್ದೀನ್ ಕೊಲೆಯಿಂದ ರಜಾಕರು ಇನ್ನಷ್ಟು ಕೆರಳಿದರು. ಗೋರ್ಟಾ ಗ್ರಾಮವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು. ಆಗ ಇಲ್ಲಿನ ಮಹಾದೇವಪ್ಪ ಡುಮಣಿ ಎಂಬವರು ದೊಡ್ಡ ಸಾಹುಕಾರರಾಗಿದ್ದರು. ಅವರ ಮನೆ ಅಬೇಧ್ಯ ಕೋಟೆಯಾಗಿತ್ತು. ಹೀಗಾಗಿ, ಅಲ್ಲಿ ನೂರಾರು ಜನ ಸ್ವಾತಂತ್ರ್ಯ ಸೇನಾನಿಗಳು ಆಶ್ರಯ ಪಡೆದಿದ್ದರು. ರಜಾಕರು ದಾಳಿ ಮಾಡಿದ ದಿನ ಅಲ್ಲಿ 800ಕ್ಕೂ ಹೆಚ್ಚು ಜನರು ಸೇನಾನಿಗಳಿದ್ದರು ಎಂದು ಹೇಳಲಾಗಿದೆ. ಇಸಾಮುದ್ದೀನ್​ನ ಕೊಲೆಯ ಸೇಡನ್ನು ತೀರಿಸಿಕೊಳ್ಳಲು ಆತನ ಅಣ್ಣ ಚಾಂದ್​ ಪಟೇಲನೇ ರಜಾಕರ ಪಡೆಯ ನೇತೃತ್ವವಹಿಸಿ ದಾಳಿ ಮಾಡಿ ಎಲ್ಲರನ್ನೂ ಹತ್ಯೆ ಮಾಡಿದ್ದ ಎಂದು ಇತಿಹಾಸ ಹೇಳುತ್ತದೆ.

ನಿಜಾಮರ ಸೊಕ್ಕಡಗಿಸಿದ ವಲ್ಲಭಭಾಯಿ ಪಟೇಲ್: ರಜಾಕರು ಇಲ್ಲಿನ ಜನರನ್ನು ಅತ್ಯಂತ ಅಮಾನವೀಯ ರೀತಿಯಲ್ಲಿ ಕೊಂದು ಹಾಕಿದರು. ಮನೆಗೆ ನುಗ್ಗಿ ದರೋಡೆ ಮಾಡಿದರು. ಮಹಿಳೆಯರ ಮೇಲೆ ಅತ್ಯಾಚಾರವೆಸಗಿದರು. ಸಿಕ್ಕ ಸಿಕ್ಕವರನ್ನೇ ಕೊಲೆ ಮಾಡಿದರು. ಸ್ವಾತಂತ್ರ್ಯ ಸೇನಾನಿಗಳು ಅದನ್ನು ತಡೆಗಟ್ಟುವ ಸಲುವಾಗಿ ಸಾಕಷ್ಟು ಚಳುವಳಿಯನ್ನು ನಡೆಸಿದರು. ಪ್ರತಿರೋಧವಾಗಿ ರಜಾಕರನ್ನು ಕೊಂದು ಹಾಕಿದರು. ಮತಾಂಧ ರಜ್ವಿಯಿಂದ ರಕ್ತದೋಕುಳಿಯೇ ನಡೆದು ಹೋಗಿತ್ತು. ಮತಾಂಧನ ಕೊಲೆ, ಸುಲಿಗೆ ಹೆಚ್ಚಾಗುತ್ತಿದ್ದಂತೆ ಇಲ್ಲಿಯ ಹೋರಾಟಗಾರರು ಅಂದಿನ ಗೃಹ ಮಂತ್ರಿ ಉಕ್ಕಿನ ಮನುಷ್ಯ ಸರದಾರ ವಲ್ಲಭಭಾಯಿ ಪಟೇಲ್ ಅವರನ್ನು ಭೇಟಿ ಮಾಡಿದರು. ಸಮರ್ಥ ಯೋಜನೆ ರೂಪಿಸಿದ ಸರದಾರ ವಲ್ಲಭಭಾಯಿ ಪಟೇಲ್ ಪೊಲೀಸ್ ಕಾರ್ಯಾಚರಣೆ ನಡೆಸಿ ನಿಜಾಮನ ಸೊಕ್ಕು ಅಡಗಿಸಿದರು. ಬಳಿಕ ನಿಜಾಮ ತಾನಾಗಿಯೇ ಸೋಲು ಒಪ್ಪಿಕೊಂಡು 1948ರ ಸೆ. 17ರಂದು ಹೈದರಾಬಾದ್​ ಕರ್ನಾಟಕವನ್ನು ವಿಮೋಚನೆಗೊಳಿಸಿದನು. ಹೀಗಾಗಿ ಈ ದಿನವನ್ನು ಪ್ರತಿವರ್ಷ ವಿಮೋಚನಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

ಕಲ್ಯಾಣ ಕರ್ನಾಟಕ ನಾಮಕರಣ: ಹೈದರಾಬಾದ್​ ಕರ್ನಾಟಕದ ಹೆಸರಿನಲ್ಲಿಯೇ ದಾಸ್ಯವಿದೆ. ಹೀಗಾಗಿ ಶರಣರ ಈ ನಾಡಿಗೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂಬ ಬೇಡಿಕೆ ಇತ್ತು. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ 2019 ಸೆ. 17ರಂದು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿ ಕಲ್ಯಾಣ ಕರ್ನಾಟಕ ಉತ್ಸವವಾಗಿ ಆಚರಣೆಗೆ ಚಾಲನೆ ನೀಡಿದರು.

ಕಲ್ಯಾಣ ಕರ್ನಾ‍ಟಕಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆ ಆಗಿಲ್ಲ. ದಿವಂಗತ ವೈಜ್ಯನಾಥ ಪಾಟೀಲ್, ಲಕ್ಷ್ಮಣ ದಸ್ತಿ, ನಾಗಲಿಂಗಯ್ಯ ಮಠಪತಿಯಂತಹ ಮಹನೀಯರು ನಡೆಸಿದ ನಿರಂತರ ಹೋರಾಟದ ಫಲವಾಗಿ ಹಾಗೂ ಕೇಂದ್ರದಲ್ಲಿ ಮಂತ್ರಿ ಆಗಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ಎನ್.ಧರಂ ಸಿಂಗ್ ಅವರ ಇಚ್ಚಾಶಕ್ತಿಯಿಂದ ಕೇಂದ್ರದ ಮೇಲೆ ಒತ್ತಡ ಹೇರಿ ಹೈದರಾಬಾದ್​ ಕರ್ನಾಟಕಕ್ಕೆ 371 ಜೆ ವಿಧೇಯಕ ಜಾರಿಗೆ ತಂದು ವಿಶೇಷ ಸ್ಥಾನವನ್ನು ಒದಗಿಸುವಲ್ಲಿ ಸಫಲರಾದರು.

ಇದನ್ನೂ ಓದಿ :ಸನಾತನದಿಂದ ಮಾತ್ರ ಸಂವಿಧಾನ ಉಳಿವು ಸಾಧ್ಯ:ಶಾಸಕ ಬಸನಗೌಡ ಪಾಟೀಲ ಯತ್ನಾಳ

Last Updated :Sep 17, 2023, 11:10 AM IST

ABOUT THE AUTHOR

...view details