ಕರ್ನಾಟಕ

karnataka

ಕಲ್ಯಾಣ ಉತ್ಸವಕ್ಕೆ ಅದ್ಧೂರಿ ತೆರೆ: ಸೋನು ನಿಗಮ್ ಗಾಯನಕ್ಕೆ ಬಿಸಿಲೂರು ಮಂದಿ ಫಿದಾ

By

Published : Feb 27, 2023, 12:28 PM IST

ಮೂರು ದಿನಗಳ ಕಾಲ ನಡೆದ ಕಲ್ಯಾಣ ಕರ್ನಾಟಕ ಉತ್ಸವ ನಿನ್ನೆ ತೆರೆ ಕಂಡಿದೆ. ಈ ಬಾರಿ ನಾನಾ ವೈಶಿಷ್ಟ್ಯಗಳಿಂದ ಕೂಡಿದ್ದ ಫಲಪುಷ್ಪ ಪ್ರದರ್ಶನ ಮತ್ತು ಸೋನು ನಿಗಮ್​​ ಸಿರಿ ಕಂಠದ ಗಾಯನ ನೆರೆದಿದ್ದ ಪ್ರೇಕ್ಷಕರ ಮನ ಗೆದ್ದಿದೆ.

kalyana karnataka utsav
ಕಲ್ಯಾಣ ಕರ್ನಾಟಕ ಉತ್ಸವ

ಕಲ್ಯಾಣ ಕರ್ನಾಟಕ ಉತ್ಸವ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ವರ್ಣರಂಜಿತ ತೆರೆ ಕಂಡಿದೆ. ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನಗಳ ಕಾಲ ನಡೆದ ಕಲ್ಯಾಣ ಉತ್ಸವದಲ್ಲಿ ಖ್ಯಾತ ಬಾಲಿವುಡ್ ಗಾಯಕ ಸೋನು ನಿಗಮ‌್​ ಸಿರಿ ಕಂಠದ ಗಾಯನ ನೆರೆದಿದ್ದ ಪ್ರೇಕ್ಷಕರ ಮನ ಗೆದ್ದಿದೆ. ಅದೇ ರೀತಿ ಫಲಪುಷ್ಪ ಪ್ರದರ್ಶನ ಕೂಡಾ ಬಂದವರನ್ನ ಆಕರ್ಷಿಸಿತು. ವಿವಿಧ ರೀತಿಯ ಹೂವು, ಹಣ್ಣುಗಳಿಂದ ಅರಳಿದ ಕಲಾಕೃತಿಗಳು ಜನ‌ರ ಮನ ಗೆದ್ದಿವೆ.

ಕನ್ನಡಿಗರೊಂದಿಗೆ ವಿಶೇಷ ಬಾಂಧವ್ಯ ಹೊಂದಿರುವ ಸೋನು ನಿಗಮ್​ ಕಲ್ಯಾಣ ಉತ್ಸವದ ಸಮಾರೋಪದಲ್ಲಿ ಹಾಡಿ, ಕುಣಿದು ರಂಜಿಸಿದರು. ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದಲ್ಲಿ ಸಂಜೆ ಆರು ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದರು. ಬಳಿಕ ಕನ್ನಡದ ಖ್ಯಾತ ಗಾಯನ ಕಲಾವಿದರು ಹಾಡುಗಳ ಮೂಲಕ ಮನರಂಜನೆ ನೀಡಿದರು. ರಾತ್ರಿ 10 ಗಂಟೆ ಸುಮಾರಿಗೆ ವೇದಿಕೆಗೆ ಆಗಮಿಸಿದ ಸೋನು ನಿಗಮ್​ ತಡರಾತ್ರಿವರೆಗೂ ಕನ್ನಡ, ಹಿಂದಿ ಟಾಪ್ ಹಾಡುಗಳ ರಸದೌತಣ ಉಣಬಡಿಸಿದರು.‌ 'ಮಿಲನ' ಚಿತ್ರದ ನಿನ್ನಿಂದಲೇ ನಿನ್ನಿಂದಲೇ.. ಮುಂಗಾರು ಮಳೆಯೇ ’’ಏನು ನಿನ್ನ ಹನಿಗಳ ಲೀಲೆ‘‘ ಒಳಗೊಂಡದಂತೆ ಹತ್ತಾರು ಹಾಡುಗಳನ್ನು ತಮ್ಮ ಸಿರಿಕಂಠದಲ್ಲಿ ಹಾಡಿ ರಂಜಿಸಿದರು. ಉತ್ಸವದ ಸಂಗೀತ ಸಂಜೆಗೆ ಕಲಬುರಗಿ ಮಂದಿ ಮನಸೋತರು.

ನಾನಾ ವೈಶಿಷ್ಟ್ಯಗಳಿಂದ ಕೂಡಿದ್ದ ಫಲಪುಷ್ಪ ಪ್ರದರ್ಶನ: ಕಳೆದ ವರ್ಷ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿದ್ದ 'ಕಾಂತಾರ' ಸಿನಿಮಾದ ಪಂಜುರ್ಲಿ ದೈವದ ಬಗೆ ಬಗೆಯ ಹೂವು, ಹಣ್ಣುಗಳಲ್ಲಿ ಅರಳಿತ್ತು. ಕ್ಯಾರೆಟ್​ನ ಶರಣಬಸವೇಶ್ವರ ದೇವಸ್ಥಾನ, ಕಲ್ಲಂಗಡಿಯಲ್ಲಿ ಪುನಿತ್ ರಾಜಕುಮಾರ್​, ಹಾಗಲಕಾಯಿ ಡೈನೇಸರ್ ಹೀಗೆ ಹಲವು ತರಕಾರಿ, ಹೂವು, ಹಣ್ಣುಗಳಿಂದ ಕಲಾವಿದರು ಅರಳಿಸಿದ್ದ ವರ್ಣರಂಜಿತ ಕಲಾಕೃತಿಗಳು ಉತ್ಸವಕ್ಕೆ ಆಗಮಿಸಿದರಿಗೆ ಖುಷಿ‌ಕೊಟ್ಟವು. ಇತ್ತೀಚೆಗೆ ಲಿಂಗೈಕ್ಯರಾದ ಪರಮ ಪೂಜ್ಯ ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಮತ್ತು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್​ ಅವರನ್ನು ಮರಳಿನಿಂದ ತಯಾರಿಸಿದ ಮೂರ್ತಿಗಳು, ಸಿರಿಧಾನ್ಯದಲ್ಲಿ ಅರಳಿದ ಬಸವೇಶ್ವರರು, ಹಳ್ಳಿ ಸೊಗಡು ಸೂಸುವ ರೈತನ ಮನೆ, ಎತ್ತಿನ ಚಕ್ಕಡಿ, ರಾಶಿ ಮಾಡುವ ಪದ್ಧತಿ ಬಿಸಿಲೂರು ಜನರ ಮನ ಗೆದ್ದಿವೆ.

ಇದನ್ನೂ ಓದಿ:ಕಲ್ಯಾಣ‌ ಕರ್ನಾಟಕ‌ ಸಮಗ್ರ ಅಭಿವೃದ್ದಿಗೆ ಬದ್ದ: ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ

ಒಟ್ಟಿನಲ್ಲಿ ಮೂರು ದಿನಗಳ ಕಾಲ ನಡೆದ ಉತ್ಸವ ಇತಿಹಾಸ ಸೃಷ್ಟಿಸುವಂತಿತ್ತು‌. ಆದರೆ, ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಉತ್ಸವ ಆಗಿದ್ದರೂ ಜನ ಸೇರಿದ್ದು, ಬಹುತೇಕ ಕಲಬುರಗಿಯಿಂದ ಮಾತ್ರ. ಇನ್ನುಳಿದ ಆರು ಜಿಲ್ಲೆಗಳಿಂದ ಅಷ್ಟೊಂದು ಮಂದಿ ಪಾಲ್ಗೊಳ್ಳದಿರುವುದು ಕಂಡು ಬಂತು. ಸಿಎಂ ಬಂದಾಗ ಮಾತ್ರ ಒಂದಿಷ್ಟು ಬಿಜೆಪಿ ನಾಯಕರು ಉತ್ಸವಕ್ಕೆ ಆಗಮಿಸಿದ್ದು ಬಿಟ್ಟರೆ ಮೂರು ದಿನದ ಸಂಭ್ರಮದಲ್ಲಿ ಬಿಜೆಪಿ ನಾಯಕರು ಗೈರಾಗಿದ್ದು ಎದ್ದು ಕಾಣುತಿತ್ತು.

ಇದನ್ನೂ ಓದಿ:ಕಲಬುರಗಿಯಲ್ಲಿ ಕಳೆಕಟ್ಟಿದ ಕಲ್ಯಾಣ ಕರ್ನಾಟಕ ಉತ್ಸವ: ವಿಪಿ ಗಾಯನಕ್ಕೆ ಮನಸೋತ ಜನ

ABOUT THE AUTHOR

...view details