ಕರ್ನಾಟಕ

karnataka

ಕಲಬುರಗಿ ಜಿಲ್ಲೆಗೆ ವರುಣಾಘಾತ : ಬೆಳೆ ಕಳೆದುಕೊಂಡ ರೈತರು ಹೈರಾಣ

By

Published : Oct 2, 2021, 5:46 PM IST

ತೊಗರಿ, ಶೇಂಗಾ, ಅಲಸಂದಿ, ಹತ್ತಿ ಸೇರಿ ಬೆಳೆದ ಸಂಪೂರ್ಣ ಬೆಳೆ ಹಾನಿಯಾಗಿದೆ ಅಂತಾ ರೈತರು ಅಳಲು ತೋಡಿಕೊಂಡಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿಯೂ ಇದೇ ಪರಿಸ್ಥಿತಿ ಉಂಟಾಗಿತ್ತು. ಬೆರಳೆಣಿಕೆಯಷ್ಟು ರೈತರಿಗೆ ಪರಿಹಾರ ದೊರೆತ್ರೆ, ಇನ್ನೂ ಕೆಲವು ರೈತರು ಪರಿಹಾರಕ್ಕಾಗಿ ಇಂದಿಗೂ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ..

kalburgi
ಕಲಬುರಗಿ ಜಿಲ್ಲೆಗೆ ವರುಣಾಘಾತ

ಕಲಬುರಗಿ :ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ಹಾಗೆ ಬಿಟ್ಟು ಬಿಡದೆ ವರುಣನ ಅಬ್ಬರಕ್ಕೆ ಕಷ್ಟಪಟ್ಟು ತೆಗೆದ ಇಳುವರಿಗೆ ಹಾನಿಯಾಗಿ ರೈತರು ಮತ್ತೆ ಕಣ್ಣೀರಲ್ಲಿ ಕೈ ತೊಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕಲಬುರಗಿ ಜಿಲ್ಲೆಗೆ ವರುಣಾಘಾತ..

ಕಳೆದ ಬಾರಿಯ ಪ್ರವಾಹದಿಂದ ಕಂಗೆಟ್ಟ ರೈತರಿಗೆ ಗಾಯದ ಮೇಲೆ ಬರೆ ಎಂಬಂತೆ ಕಲಬುರಗಿ ನಗರ ಸೇರಿ ಜಿಲ್ಲೆಯ ಹಲವೆಡೆ ಮತ್ತೆ ಕಳೆದ ನಾಲ್ಕು ದಿನಗಳಿಂದ ಮಳೆರಾಯ ಅಬ್ಬರಿಸಿ ಬೆಳೆ ಹಾಳು ಮಾಡಿದ್ದಾನೆ. ಭಾರಿ ಬಿರುಗಾಳಿ ಮತ್ತು ಮಳೆ ಹಿನ್ನೆಲೆ ಜಿಲ್ಲೆಯ ಅಫಜಲಪುರ ತಾಲೂಕಿನ ಬಳ್ಳೂರಗಿ ಗ್ರಾಮದಲ್ಲಿ ಲಕ್ಷಾಂತರ ಮೌಲ್ಯದ ಬಾಳೆ ಬೆಳೆ ನೆಲಕ್ಕುರುಳಿದೆ.

ಗ್ರಾಮದ ಸುಶೀಲಾಬಾಯಿ ಅನ್ನೋರಿಗೆ ಸೇರಿದ್ದ ನಾಲ್ಕು ಎಕರೆ ಬಾಳೆ ತೋಟ ಬಹುತೇಕ ನೆಲಕಚ್ಚಿದೆ. ಕಟಾವಿಗೆ ಬಂದಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ಬಾಳೆ ಬೆಳೆ ಕಳೆದುಕೊಂಡು ರೈತ ಮಹಿಳೆ ಕಂಗಾಲಾಗಿದ್ದಾಳೆ.

ಮಹಾರಾಷ್ಟ್ರ ಗಡಿಭಾಗ ಹಾಗೂ ಅಫಜಲಪೂರ ತಾಲೂಕಿನ ಹಲವಡೆ ನಿರಂತರ ಮಳೆ ಸುರಿಯುತ್ತಿರುವುದರಿಂದ ಮಹಾರಾಷ್ಟ್ರ ಗಡಿಭಾಗದ ಕೂರನೂರು ಡ್ಯಾಂಮ್‌ನಿಂದ ಬೋರಿ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ‌.

ಇದರಿಂದಾಗಿ ಅಫಜಲಪೂರ ತಾಲೂಕಿನ ಬೋರಿ ನದಿ ತಟದ ಒಂಬತ್ತು ಹಳ್ಳಿಗಳ ಜನರ ಬದುಕು ದುಸ್ತರವಾಗಿದೆ. ಜೇವರ್ಗಿ ಕೆ, ದಿಕ್ಸಂಗಿ, ಗೌರ್ (ಕೆ) ಸೇರಿ 9 ಹಳ್ಳಿಗಳಲ್ಲಿ ನೀರು ನಿಂತು ಸಾವಿರಾರು ಎಕರೆ ಹೊಲ ಅಕ್ಷರಶಃ ಕೆರೆಯಂತಾಗಿವೆ.

ಕಂಗಾಲಾದ ರೈತ

ತೊಗರಿ, ಶೇಂಗಾ, ಅಲಸಂದಿ, ಹತ್ತಿ ಸೇರಿ ಬೆಳೆದ ಸಂಪೂರ್ಣ ಬೆಳೆ ಹಾನಿಯಾಗಿದೆ ಅಂತಾ ರೈತರು ಅಳಲು ತೋಡಿಕೊಂಡಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿಯೂ ಇದೇ ಪರಿಸ್ಥಿತಿ ಉಂಟಾಗಿತ್ತು. ಬೆರಳೆಣಿಕೆಯಷ್ಟು ರೈತರಿಗೆ ಪರಿಹಾರ ದೊರೆತ್ರೆ, ಇನ್ನೂ ಕೆಲವು ರೈತರು ಪರಿಹಾರಕ್ಕಾಗಿ ಇಂದಿಗೂ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.

ಇನ್ನೊಂದೆಡೆ ಚಿಂಚೋಳಿ ತಾಲೂಕಿನ ಗಂಡೋರಿ ನಾಲಾ ಕೆರೆ ತಟದ ಅರಣಕಲ್ ಗ್ರಾಮದಲ್ಲಿಯೂ ರೈತರ ಗೋಳು ಮುಗಿಲು ಮುಟ್ಟಿದೆ. ನಾಲೆಯ ತಡೆಗೋಡೆ ಒಡೆದು ಸುಮಾರು 476 ಎಕರೆಯಷ್ಟು ಜಮೀನಿನಲ್ಲಿ ನೀರಾವರಿ ಬೆಳೆ ಉಳಾಗಡ್ಡಿಗೆ ಹಾನಿಯಾಗಿದೆ. ತೊಗರಿ ಕೂಡ ಬರ್ಬಾದ್​​​ ಆಗಿದೆ ಅಂತಾ ರೈತರು ತಿಳಿಸಿದ್ದಾರೆ.

ವರುಣನ ನಿರಂತರ ಅಬ್ಬರದಿಂದ ರೈತರ ಬೆಳೆ ಮಾತ್ರವಲ್ಲ ಜಿಲ್ಲೆಯ ಹಲವೆಡೆ ಮನೆಗಳಿಗೂ ಹಾನಿಯಾಗಿವೆ‌. ಒಟ್ಟಾರೆ ಕಳೆದ ವರ್ಷ ಮಳೆ ಹಾಗೂ ಪ್ರವಾಹದಿಂದ ಹೈರಾಣಾಗಿದ್ದ ಕಲಬುರಗಿ ಜಿಲ್ಲೆಗೆ ಈ ವರ್ಷವೂ ಮಳೆ ಮತ್ತು ಪ್ರವಾಹದಿಂದ ನೆಮ್ಮದಿ ಹಾಳಾಗಿದೆ.

ABOUT THE AUTHOR

...view details