ಕರ್ನಾಟಕ

karnataka

ಮಹಾನಗರ ಪಾಲಿಕೆ ಮೇಯರ್​ ಸ್ಥಾನಕ್ಕಾಗಿ ಬಿಜೆಪಿ- ಕಾಂಗ್ರೆಸ್‌ ಕಸರತ್ತು.. ಜೆಡಿಎಸ್‌ ಹಂಗೂ ಸೈ, ಹಿಂಗೂ ಸೈ..

By

Published : Sep 11, 2021, 7:53 PM IST

ಹೆಚ್‌ ಡಿ ಕುಮಾರಸ್ವಾಮಿ, ದೇವೇಗೌಡರು ಎರಡು ಪಕ್ಷಗಳ ಜೊತೆ ಮೈತ್ರಿ ವಿಚಾರವಾಗಿ ವಿಭಿನ್ನ ಬ್ಯಾಟ್ ಬೀಸುತ್ತಿರುವುದು ಕಾಂಗ್ರೆಸ್, ಜೆಡಿಎಸ್​ಗೂ ಕಗ್ಗಂಟಾಗಿದೆ. ಕಮಲ ಜೊತೆ ಮೈತ್ರಿಗೆ ಕುಮಾರಸ್ವಾಮಿ ಒಲವು ತೋರುತ್ತಿದ್ರೆ, ದೇವೇಗೌಡರು ಕೈ ಕುಲುಕುವ ಆಸಕ್ತಿ ತೋರುತ್ತಿದ್ದಾರೆ..

kalburgi municipal corporation
ಕಲಬುರಗಿ ಮಹಾನಗರ ಪಾಲಿಕೆ

ಕಲಬುರಗಿ :ಅತಂತ್ರ ಕಲಬುರಗಿ ಪಾಲಿಕೆ ಚುಕ್ಕಾಣಿ ಹಿಡಿಯಲು ಬಿಜೆಪಿ ಶತ ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ಭದ್ರಕೋಟೆ ಕಮಲ ಅರಳಿಸಿರುವ ಬಿಜೆಪಿ ನಾಯಕರು, ಜೆಡಿಎಸ್ ಜೊತೆ ಮೈತ್ರಿಗೆ ನಾನಾ ರೀತಿಯ ಕಸರತ್ತು, ತಂತ್ರಗಾರಿಕೆ ಮುಂದುವರಿಸಿದ್ದಾರೆ.

ಸ್ಪಷ್ಟ ಬಹುಮತ ನೀಡದ ಮತದಾರ :ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡದೆ ಜಿಲ್ಲೆಯ ಮತದಾರ ರಾಷ್ಟ್ರೀಯ ಪಕ್ಷಗಳಿಗೆ ಶಾಕ್ ಕೊಟ್ಟಿದ್ದಾನೆ. ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಕಾಂಗ್ರೆಸ್, ಬಿಜೆಪಿ ಪಾಲಿಕೆ ಚುಕ್ಕಾಣಿ ಹಿಡಿಯಲು ಒದ್ದಾಡುತ್ತಿವೆ. ನಾಲ್ಕು ಸ್ಥಾನ ಗೆದ್ದು ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್ ಈಗ ಮೇಯರ್ ಸ್ಥಾನದ ಡಿಮ್ಯಾಂಡ್‌ ಇರಿಸಿದ್ದರಿಂದ ಕಾಂಗ್ರೆಸ್, ಬಿಜೆಪಿಗೆ ಮುಳುವಾಗಿದೆ.

ಕೈಗೆ ಅಧಿಕಾರ ಕಳೆದುಕೊಳ್ಳುವ ಭೀತಿ :ಕಾಂಗ್ರೆಸ್ ಭದ್ರಕೋಟೆಯಲ್ಲಿ ಮೊದಲ ಬಾರಿಗೆ ಅತೀ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ, ಶತಾಯಗತಾಯ ಆಡಳಿತ ನಡೆಸಲು ಇನ್ನಿಲ್ಲದ ಹರಸಾಹಸ ಪಡುತ್ತಿದೆ. ಜೆಡಿಎಸ್ ಜೊತೆ ಮೈತ್ರಿಗಾಗಿ ಕಸರತ್ತು ನಡೆಸುತ್ತಿದೆ. ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸೋದು ದೃಢಪಟ್ಟಿದೆ.

ಕಾಂಗ್ರೆಸ್ ನೂತನ ಪಾಲಿಕೆ ಸದಸ್ಯರಿಗೆ ತಳಮಳ ಶುರುವಾಗಿದ್ದು, ಪಾಲಿಕೆ ಕೈ ಜಾರುವ ಆತಂಕವಿದೆ. ಹೀಗಾಗಿ, ಕಲಬುರಗಿಯಿಂದ ಬೆಂಗಳೂರಿಗೆ ತೆರಳಿ ಕಾಂಗ್ರೆಸ್ ಪಾಲಿಕೆ ಸದಸ್ಯರು ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಕಾಂಗ್ರೆಸ್​​ ಸದಸ್ಯರಿಗೆ ಆತಂಕ :ಇನ್ನು, ಕಾಂಗ್ರೆಸ್ ಆಡಳಿತಕ್ಕಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ದೇವೇಗೌಡರನ್ನು ಭೇಟಿ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಸಿಂಗಲ್ ಫೈಟ್ ನಡೆಸಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯರ ಸೈಲೆಂಟ್ ನಡೆ ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ ವಿಪರೀತ ಆತಂಕ ಮೂಡಿಸಿದೆ.

ಜೆಡಿಎಸ್ ತಂತ್ರಗಾರಿಕೆ :ಇನ್ನು, ಕಿಂಗ್ ಮೇಕರ್ ಸ್ಥಾನದಲ್ಲಿರುವ ನಾಲ್ವರು ಜೆಡಿಎಸ್ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಕಳೆದ ಐದು ದಿನಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಕುಮಾರಸ್ವಾಮಿ, ದೇವೇಗೌಡರನ್ನು ನಿರಂತರ ಭೇಟಿಯಾಗಿ ಚರ್ಚೆ ನಡೆಸುತ್ತಿರುವ ಸದಸ್ಯರು, ಕಿಂಗ್ ಆಗಿ ಆಡಳಿತ ನಡೆಸಲು ಗೇಮ್ ಪ್ಲ್ಯಾನ್ ನಡೆಸುತ್ತಿದ್ದಾರೆ.

ಆದ್ರೆ, ಕುಮಾರಸ್ವಾಮಿ, ದೇವೇಗೌಡರು ಎರಡು ಪಕ್ಷಗಳ ಜೊತೆ ಮೈತ್ರಿ ವಿಚಾರವಾಗಿ ವಿಭಿನ್ನ ಬ್ಯಾಟ್ ಬೀಸುತ್ತಿರುವುದು ಕಾಂಗ್ರೆಸ್, ಜೆಡಿಎಸ್​ಗೂ ಕಗ್ಗಂಟಾಗಿದೆ. ಕಮಲ ಜೊತೆ ಮೈತ್ರಿಗೆ ಕುಮಾರಸ್ವಾಮಿ ಒಲವು ತೋರುತ್ತಿದ್ರೆ, ದೇವೇಗೌಡರು ಕೈ ಕುಲುಕುವ ಆಸಕ್ತಿ ತೋರುತ್ತಿದ್ದಾರೆ.

ಹೀಗಾಗಿ, ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್ ತಂತ್ರಗಾರಿಕೆಯ ನಡೆ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಇನ್ನು, ಪಾಲಿಕೆಯ ಐದು ವರ್ಷದ ಆಡಳಿತಾವಧಿಯಲ್ಲಿ ಮೊದಲ ಬಾರಿ ಮೇಯರ್ ಸ್ಥಾನ ಸೇರಿ ಎರಡು ಬಾರಿ ಮೇಯರ್ ಪಟ್ಟಕ್ಕಾಗಿ ಜೆಡಿಎಸ್ ಕಿಂಗ್ ಮೇಕರ್ ಲೆಕ್ಕಾಚಾರ ಹಾಕಿಕೊಂಡು ಅಧಿಕಾರಕ್ಕಾಗಿ ತಂತ್ರಗಾರಿಕೆ ಮುಂದುವರಿಸಿದ್ದಾರೆ.

ಓದಿ: ನಂಜನಗೂಡಿನಲ್ಲಿ ದೇವಸ್ಥಾನ ನೆಲಸಮ... ಬಿಜೆಪಿಗೆ ಹಿಂದುತ್ವ ರಕ್ಷಣೆಯ ನೆ‌ನಪಾಗಲಿಲ್ಲವೇ?: ಸಿದ್ದರಾಮಯ್ಯ ಕಿಡಿ

ABOUT THE AUTHOR

...view details