ಕರ್ನಾಟಕ

karnataka

'ಸಿಎಂ ಜೊತೆ ಇನ್ನು ಮಾತಾಡಲ್ಲ, ಏನಿದ್ದರೂ ಪಿಎಂ, ಕೇಂದ್ರ ಸಚಿವರ ಮಧ್ಯಸ್ಥಿಕೆಯಲ್ಲಿ ಪರಿಹಾರ'

By

Published : Jan 14, 2023, 9:27 AM IST

Updated : Jan 14, 2023, 10:52 AM IST

ಪಂಚಮಸಾಲಿ ಸಮುದಾಯದವರ 2ಎ ಮೀಸಲಾತಿ ಬೇಡಿಕೆ. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ರಸ್ತೆ ತಡೆದು ಹೋರಾಟ.

Panchmasalis
ಹೋರಾಟ ನಡೆಸುತ್ತಿರುವ ಪಂಚಮಸಾಲಿಗಳು

ಹೋರಾಟದ ಕುರಿತು ಮಾಧ್ಯಮದ ಜೊತೆ ಮಾತನಾಡುತ್ತಿರುವ ಶ್ರೀಗಳು ಹಾಗು ಕಾಶಪ್ಪನವರ್

ಹಾವೇರಿ:ಶಿಗ್ಗಾಂವಿಯಲ್ಲಿರುವ ಸಿಎಂ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದ ಪಂಚಮಸಾಲಿ 2ಎ ಮೀಸಲಾತಿ ಹೋರಾಟಗಾರರು ರಾಷ್ಟ್ರೀಯ ಹೆದ್ದಾರಿ 48 ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಶುಕ್ರವಾರ ನಡೆದಿದೆ. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಶ್ರೀಗಳು ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವಂತೆ ಎರಡು ವರ್ಷದಿಂದ ಹೋರಾಟ ಆರಂಭಿಸಿದ್ದಾರೆ. ಈ ಕುರಿತಂತೆ ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮತ್ತು ಪ್ರಸ್ತುತ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ 6 ಬಾರಿ ಭರವಸೆ ನೀಡಿತ್ತು. ಆದರೆ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಶುಕ್ರವಾರ ಶಿಗ್ಗಾಂವಿ ಪಟ್ಟಣದ ಹೊರಭಾಗದಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕಲು ಸ್ವಾಮೀಜಿಗಳು ಮುಂದಾಗಿದ್ದರು. ಇದಕ್ಕೂ ಮುನ್ನ ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಶ್ರೀಗಳು ಮಾಲಾರ್ಪಣೆ ಮಾಡಿದರು.

ನಂತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ಪಂಚಮಸಾಲಿ ಸಮುದಾಯಗಳಿಗೆ 2ಎ ನೀಡುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಭೆಗೆ ಆಗಮಿಸಿದ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿನಯ ಕುಲಕರ್ಣಿ ಅವರು ಸಿಎಂ ಮನೆ ಮುತ್ತಿಗೆ ಹಾಕಲು ಹೋಗುವ ನಿರ್ಧಾರ ತಿಳಿಸಿದರು. ಆದರೆ ಸ್ಥಳದಲ್ಲಿದ್ದ ಪಂಚಮಸಾಲಿಗಳು ಸಿಎಂ ಮನೆಗೆ ಮುತ್ತಿಗೆ ಹಾಕುವುದು ಬೇಡ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ರಸ್ತೆ ತಡೆ ನಡೆಸೋಣ ಎಂದರು.

ಇದರಿಂದ ಸೇರಿದ್ದ ಸಾವಿರಾರು ಪಂಚಮಸಾಲಿ ಸಮುದಾಯದವರು ಶಿಗ್ಗಾಂವಿ ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 48 ರ ಕಡೆ ಸಾಗಿ ರಸ್ತೆ ತಡೆ ನಡೆಸಿದರು. ಅಷ್ಟೇ ಅಲ್ಲದೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ ಶೆಟ್ಟರ್ ಸೇರಿದಂತೆ ಬಿಜೆಪಿಯ ವಿವಿಧ ಮುಖಂಡರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಸವ ಜಯಮೃತ್ಯುಂಜಯ ಸ್ವಾಮಿಜಿ, ಬಸನಗೌಡ ಪಾಟೀಲ್ ಯತ್ನಾಳ, ವಿಜಯಾನಂದ ಕಾಶಪ್ಪನವರ್ ರಸ್ತೆ ಮೇಲೆ ಕುಳಿತು ರಸ್ತೆ ತಡೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ಮೂರು ನಿರ್ಣಯಗಳನ್ನು ಪ್ರಕಟಿಸಿದರು. ಶನಿವಾರದಿಂದ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಧರಣಿ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುವುದು, ಹಿಂದುಳಿದ ವರ್ಗದ ವರದಿ ಬರುವವರೆಗೆ ಧರಣಿ ಸತ್ಯಾಗ್ರಹ ಮಾಡುವುದು ಮತ್ತು ಪಂಚಮಸಾಲಿ 2 ಎ ಹೋರಾಟದಲ್ಲಿ ಮೋಸ ಮಾಡಿದ ನಾಯಕರಿಗೆ ಪಾಠ ಕಲಿಸುವ ಕುರಿತಂತೆ ಸಮಾಜದ ಮುಖಂಡರ ಮನಗೆ ಹೋಗಿ ತಿಳಿಸುವುದಾಗಿ ಬಸವ ಜಯಮೃತ್ಯುಂಜಯಶ್ರೀಗಳು ತಿಳಿಸಿದರು.

ಅಭಿ ಪಿಕ್ಚರ್ ಬಾಕಿ ಹೈ:ಇನ್ನೇನೇ ಇದ್ದರೂ ಕೇಂದ್ರ ಸಚಿವರು ಮತ್ತು ಪ್ರಧಾನಿ ಮಧ್ಯಸ್ಥಿಕೆಯಲ್ಲಿ ನಮ್ಮ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿಯನ್ನು ಬಸವಣ್ಣನೆಂದು ತಿಳಿದುಕೊಂಡು ಮೋಸ ಹೋಗಿದ್ದೇವೆ. ಇನ್ನು ಮುಂದೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಯಾವುದೇ ರೀತಿ ಮಾತುಕತೆ ನಡೆಸುವುದಿಲ್ಲಾ ಎಂದು ಬಸವ ಜಯಮೃತ್ಯುಂಜಯಶ್ರೀಗಳು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕಾಶಪ್ಪನವರ್ ರಸ್ತೆ ತಡೆ ಮಾಡಿರುವುದು ಕೇವಲ ಸ್ಯಾಂಪಲ್​ ಅಷ್ಟೇ ಅಭಿ ಪಿಕ್ಚರ್ ಬಾಕಿ ಹೈ ಎಂದರು. ಮುಂಜಾಗೃತಾ ಕ್ರಮವಾಗಿ ಹೆಚ್ಚಿನ ಪೊಲೀಸ್​ ಬಂದೋಬಸ್ತ್​ ಮಾಡಲಾಗಿತ್ತು.

ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ:ಇತ್ತೀಚೆಗೆ ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಡಿ ಹಾಗೂ ಒಕ್ಕಲಿಗರ ಸಮುದಾಯಕ್ಕೆ 2ಸಿ ಅಡಿ ಪ್ರತ್ಯೇಕ ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಆದ್ರೆ ಎಷ್ಟು ಪ್ರತಿಶತ ಮೀಸಲಾತಿ ನೀಡಲಾಗುತ್ತದೆ ಎಂಬುದನ್ನು ಸರ್ಕಾರ ಪ್ರಕಟಿಸಿರಲಿಲ್ಲ. ಆದ್ದರಿಂದ ಪಂಚಮಸಾಲಿ ಸಮುದಾಯ ತಮ್ಮ ಹೋರಾಟವನ್ನು ಮತ್ತೆ ಆರಂಭಿಸಿದೆ.

ಇದನ್ನೂ ಓದಿ:ಪಂಚಪೀಠಗಳ ಅಭಿವೃದ್ಧಿಗೆ ಬಟೆಟ್​​ನಲ್ಲಿ ಅಗತ್ಯ ನೆರವು: ಸಿಎಂ ಬಸವರಾಜ ಬೊಮ್ಮಾಯಿ

Last Updated : Jan 14, 2023, 10:52 AM IST

ABOUT THE AUTHOR

...view details